ಭಾರತೀಯ ರಾಜಕೀಯ ಇತಿಹಾಸವನ್ನು ತಿರುವಿ ಹಾಕಿದರೆ ನಮಗೆ ಜವಾಹರಲಾಲ್ ನೆಹರೂ ಮತ್ತು ಕೆ. ಕಾಮರಾಜ್ ಅವರ ಜೋಡಿ ಅತ್ಯಂತ ಯಶಸ್ವಿ ಜೋಡಿಯಾಗಿ ಕಾಣಿಸುತ್ತದೆ. ನೆಹರೂ ಅವರು ದೇಶದ ವರ್ಚಸ್ವಿ ನಾಯಕನಾಗಿದ್ದರೆ, ಕಾಮರಾಜ್ ಅವರು ತೆರೆಯ ಮರೆಯಲ್ಲಿ ನಿಂತು ಪಕ್ಷವನ್ನು ಗಟ್ಟಿಗೊಳಿಸುವ 'ಕಿಂಗ್ ಮೇಕರ್' ಆಗಿದ್ದರು. ಇಂದು ದಶಕಗಳ ನಂತರ ರಾಷ್ಟ್ರ ರಾಜಕಾರಣದಲ್ಲಿ ಅಂತಹದ್ದೇ ಒಂದು ಚರ್ಚೆ ಮುನ್ನೆಲೆಗೆ ಬಂದಿದೆ. ಬಿಜೆಪಿಯನ್ನು ಎದುರಿಸಲು ಸಜ್ಜಾಗಿರುವ 'ಇಂಡಿಯಾ' (I.N.D.I.A) ಮೈತ್ರಿಕೂಟದಲ್ಲಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಹುಲ್ ಗಾಂಧಿಯವರಿಗೆ ಅಂದು ಕಾಮರಾಜ್ ಅವರು ನೆಹರೂ ಅವರಿಗೆ ನೀಡಿದ್ದ ಬೆಂಬಲವನ್ನೇ ನೀಡಲು ಸಾಧ್ಯವೇ? ಎಂಬುದು ಈಗಿನ ಕುತೂಹಲ.
ಈ ಚರ್ಚೆಗೆ ಕಿಡಿ ಹಚ್ಚಿದ್ದು ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಅವರ ಇತ್ತೀಚಿನ ಹೇಳಿಕೆ. ಅಂದು ಕಾಮರಾಜ್ ಅವರು ತಮಗೆ ಪ್ರಧಾನಿಯಾಗುವ ಅವಕಾಶವಿದ್ದರೂ, ಭಾಷೆಯ ಸಮಸ್ಯೆಯನ್ನು ಮುಂದಿಟ್ಟು ಆ ಹುದ್ದೆಯನ್ನು ನಿರಾಕರಿಸಿ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದರು. ಇಂದು ಸ್ಟಾಲಿನ್ ಕೂಡ ರಾಷ್ಟ್ರಮಟ್ಟದಲ್ಲಿ ಮೈತ್ರಿಕೂಟದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವ ಜವಾಬ್ದಾರಿಯನ್ನು ಹೊತ್ತು, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬೆಂಬಲಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಅಯ್ಯರ್ ಅವರ ವಾದ. ಈ ಮೂಲಕ ರಾಹುಲ್ ಪ್ರಚಾರದ ಮುಖವಾದರೆ, ಸ್ಟಾಲಿನ್ ಸಂಘಟನೆಯ ಶಕ್ತಿಯಾಗಬಹುದು.
ಆದರೆ, ಈ 'ಅಧಿಕಾರ ಹಂಚಿಕೆ'ಯ ಸೂತ್ರವು ಅಂದುಕೊಂಡಷ್ಟು ಸುಲಭವಿಲ್ಲ. ನೆಹರೂ ಕಾಲದಲ್ಲಿ ಕಾಂಗ್ರೆಸ್ ದೇಶಾದ್ಯಂತ ಏಕೈಕ ದೊಡ್ಡ ಶಕ್ತಿಯಾಗಿತ್ತು. ಆದರೆ ಇಂದು ಕಾಂಗ್ರೆಸ್ ಪ್ರತಿ ಹೆಜ್ಜೆಯಲ್ಲೂ ಪ್ರಾದೇಶಿಕ ಪಕ್ಷಗಳ ಮೇಲೆ ಅವಲಂಬಿತವಾಗಿದೆ. ಇಲ್ಲಿ ಎರಡು ಮುಖ್ಯ ಸವಾಲುಗಳಿವೆ: ಒಂದು, ರಾಹುಲ್ ಗಾಂಧಿ ಅವರು ತಮ್ಮ ನಾಯಕತ್ವದ ಜೊತೆಗೆ ಸಂಘಟನೆಯ ಜವಾಬ್ದಾರಿಯನ್ನು ಮತ್ತೊಬ್ಬ ನಾಯಕನಿಗೆ ಬಿಟ್ಟುಕೊಡಲು ಸಿದ್ಧರಿದ್ದಾರೆಯೇ? ಎಂಬುದು. ಎರಡನೆಯದಾಗಿ, ಮೈತ್ರಿಕೂಟದ ಇತರ ಪ್ರಾದೇಶಿಕ ನಾಯಕರು ಸ್ಟಾಲಿನ್ ಅವರ ಸಂಘಟನಾ ನಾಯಕತ್ವವನ್ನು ಒಪ್ಪಿಕೊಳ್ಳುತ್ತಾರೆಯೇ? ಎಂಬುದು. ಸ್ಟಾಲಿನ್ ಅವರು ರಾಜ್ಯಗಳ ಹಕ್ಕು ಮತ್ತು ಒಕ್ಕೂಟ ವ್ಯವಸ್ಥೆಯ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಿರುವುದರಿಂದ, ಇತರ ಪ್ರಾದೇಶಿಕ ನಾಯಕರಿಗೆ ಅವರ ಮೇಲೆ ಹೆಚ್ಚಿನ ವಿಶ್ವಾಸವಿದೆ ಎಂಬುದು ಸುಳ್ಳಲ್ಲ.
ಈ ರಾಷ್ಟ್ರೀಯ ಲೆಕ್ಕಾಚಾರಗಳ ನಡುವೆಯೇ ತಮಿಳುನಾಡಿನ ಸ್ಥಳೀಯ ರಾಜಕೀಯದಲ್ಲಿ ಹೊಸ ಬಿಕ್ಕಟ್ಟು ಶುರುವಾಗಿದೆ. 2026ರ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ, ತಮಿಳುನಾಡು ಕಾಂಗ್ರೆಸ್ ನಾಯಕರು ಡಿಎಂಕೆ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಸಚಿವ ಸ್ಥಾನ ಕೇಳುತ್ತಿದ್ದಾರೆ. ಆದರೆ ಸ್ಟಾಲಿನ್ ಅವರು ಇದನ್ನು ಕಡಾ ಖಂಡಿತವಾಗಿ ನಿರಾಕರಿಸಿದ್ದಾರೆ. ಇದು ಮೈತ್ರಿಯಲ್ಲಿ ಸ್ವಲ್ಪ ಬಿರುಕು ಮೂಡಿಸಿದೆ, ಇದರ ನಡುವೆ ದಳಪತಿ ವಿಜಯ್ ಅವರ ಟಿವಿಕೆ (TVK) ಪಕ್ಷದ ಪ್ರವೇಶವು ಕಾಂಗ್ರೆಸ್‌ಗೆ ಹೊಸ ಆಯ್ಕೆಯನ್ನು ನೀಡಿದಂತಿದೆ, ಡಿಎಂಕೆ ಜೊತೆ ಮೈತ್ರಿ ಮುರಿದುಕೊಂಡು ವಿಜಯ್ ಅವರೊಂದಿಗೆ ಹೋದರೆ ರಾಜ್ಯದಲ್ಲಿ ಹೆಚ್ಚು ಸೀಟು ಗೆಲ್ಲಬಹುದು ಎಂಬ ಆಸೆ ಕೆಲವು ಕಾಂಗ್ರೆಸ್ ನಾಯಕರಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸ್ಟಾಲಿನ್ ಅವರು ರಾಹುಲ್ ಪಾಲಿಗೆ ಕಾಮರಾಜ್ ಆಗುವ ಸಾಧ್ಯತೆಗಳು ಆಕರ್ಷಕವಾಗಿ ಕಂಡರೂ, ಪ್ರಾಯೋಗಿಕವಾಗಿ ಹಲವು ಅಡೆತಡೆಗಳಿವೆ. ಒಂದು ವೇಳೆ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಪ್ರಾದೇಶಿಕ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಅಧಿಕಾರವನ್ನು ವಿಕೇಂದ್ರೀಕರಿಸಲು ಮುಂದಾದರೆ ಮಾತ್ರ ಈ 'ಇಂಡಿಯಾ' ಮೈತ್ರಿಕೂಟವು ಬಿಜೆಪಿಗೆ ಪ್ರಬಲ ಸವಾಲಾಗಿ ಪರಿಣಮಿಸಬಹುದು. ಇತಿಹಾಸದ ಯಶಸ್ಸು ವರ್ತಮಾನದಲ್ಲಿ ಮರುಕಳಿಸಬೇಕಾದರೆ ನಾಯಕರ ನಡುವೆ ಅಚಲವಾದ ನಂಬಿಕೆ ಮತ್ತು ಹೊಂದಾಣಿಕೆ ಇರುವುದು ಅನಿವಾರ್ಯ.