ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಆರೋಗ್ಯ ಮತ್ತು ಫಿಟ್‌ನೆಸ್‌ಗೆ ನೀಡುತ್ತಿರುವ ಆದ್ಯತೆ ಮತ್ತೊಮ್ಮೆ ಸುದ್ದಿಯಾಗಿದೆ. 72ನೇ ವಯಸ್ಸಿನಲ್ಲಿದ್ದರೂ ಅವರು ಫಿಟ್ ಅಂಡ್ ಫೈನ್ ಆಗಿ ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.
ಸ್ಟಾಲಿನ್ ಅವರ ದಿನಚರಿಯಲ್ಲಿ ಜಿಮ್ ವ್ಯಾಯಾಮ, ತೂಕ ಎತ್ತುವಿಕೆ, ಲಘು ವರ್ಕೌಟ್‌ಗಳು, ಬೆನ್ನು ಮತ್ತು ಭುಜದ ಸ್ನಾಯುಗಳನ್ನು ಬಲಪಡಿಸುವ ತರಬೇತಿ ಪ್ರಮುಖವಾಗಿದೆ. ವಾರಾಂತ್ಯಗಳಲ್ಲಿ ಚೆನ್ನೈನ ರಸ್ತೆಗಳಲ್ಲಿ ಸೈಕ್ಲಿಂಗ್ ಮಾಡುವುದು, ಪ್ರತಿದಿನ ನಡಿಗೆ ಮತ್ತು ಯೋಗ ಅಭ್ಯಾಸ ಮಾಡುವುದು ಅವರ ಆರೋಗ್ಯದ ಗುಟ್ಟು.
ಅವರು ಆರೋಗ್ಯಕರ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದು, ದೇಹದ ತೂಕ ಮತ್ತು ಶಕ್ತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುತ್ತಾರೆ. ಇತ್ತೀಚೆಗೆ ಸ್ಪೋರ್ಟ್ಸ್ ಶೂ, ಟ್ರ್ಯಾಕ್ ಶಾಟ್ಸ್ ಮತ್ತು ಜಿಮ್ ಟೀ ಶರ್ಟ್ ಧರಿಸಿ ವರ್ಕೌಟ್ ಮಾಡುತ್ತಿರುವ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯವು ಯುವಕರಿಗೂ ಪ್ರೇರಣೆಯಾಗಿದೆ.
ರಾಜಕೀಯದ ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಕಡೆ ಗಮನ ಹರಿಸುವ ಸ್ಟಾಲಿನ್, “ಆರೋಗ್ಯವೇ ಸಂಪತ್ತು” ಎಂಬ ಸಂದೇಶವನ್ನು ತಮ್ಮ ಜೀವನಶೈಲಿಯಿಂದಲೇ ಸಾರುತ್ತಿದ್ದಾರೆ. ಅವರ ಫಿಟ್‌ನೆಸ್ ಅಭ್ಯಾಸವು ಕೇವಲ ವೈಯಕ್ತಿಕ ಜೀವನಶೈಲಿ ಮಾತ್ರವಲ್ಲ, ಸಾರ್ವಜನಿಕರಿಗೆ ಆರೋಗ್ಯದ ಮಹತ್ವವನ್ನು ನೆನಪಿಸುವ ಮಾದರಿಯಾಗಿದೆ.
ಸ್ಥಳೀಯರು ಮತ್ತು ಅಭಿಮಾನಿಗಳು, “72ರ ವಯಸ್ಸಿನಲ್ಲಿ ಇಷ್ಟು ಚುರುಕುತನ ತೋರಿಸುವುದು ನಮಗೆ ಪ್ರೇರಣೆ. ನಾಯಕರು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದರೆ ಜನರಿಗೂ ಅದೇ ಮಾದರಿ” ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.