ಅಂದು ಬಂಗಾಳದಲ್ಲಿ ರಾಹುಲ್ ಗಾಂಧಿ ಆಡಿದ ಆ ಮಾತಿಗೆ ಬಿಜೆಪಿ ಕಿಡಿ - ಅವರದ್ದೇ ಹಳೇ ಅಸ್ತ್ರದಿಂದ ತಿರುಗೇಟು ಕೊಟ್ಟ ಬಿಜೆಪಿ;

ರಾಜಕೀಯ ಅಂದ್ರೇನೆ ಹಾಗೆ ಗುರು, ಅಂದು ಆಡಿದ ಮಾತು ಇಂದು ತಿರುಗುಬಾಣ ಆಗೋಕೆ ಅಷ್ಟೊಂದು ಟೈಮ್ ಬೇಕಾಗಲ್ಲ! ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೂ ಇದೇ ಪರಿಸ್ಥಿತಿ ಎದುರಾಗಿದೆ. ಪಶ್ಚಿಮ ಬಂಗಾಳದ ಚುನಾವಣೆಯ ವೇಳೆ ರಾಹುಲ್ ಗಾಂಧಿ ಆಡಿದ್ದ ಮಾತುಗಳನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ, ಈಗ ಕೇರಳದ ನೆಪವಿಟ್ಟುಕೊಂಡು ಕಾಂಗ್ರೆಸ್‌ನ ಲೆಫ್ಟ್ ರೈಟ್ ತಗೆದುಕೊಳ್ಳುತ್ತಿದೆ.

"ನಮಗೆ ಬಂದ್ರೆ ರಕ್ತ, ಬೇರೆಯವ್ರಿಗೆ ಬಂದ್ರೆ ಟೊಮೇಟೊ ರಸನಾ?" | Photo Credit: hindustantimes/thehindu.com

ಅಸಲಿಗೆ ಏನಿದು ಚೀಫ್ ಸೆಕ್ರೆಟರಿ (ಮುಖ್ಯ ಕಾರ್ಯದರ್ಶಿ) ನೇಮಕಾತಿ ವಿವಾದ? ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಜಟಾಪಟಿ ಶುರುವಾಗಿದ್ದು ಯಾಕೆ? ಇಲ್ಲಿದೆ ನೋಡಿ ಕಂಪ್ಲೀಟ್ ಮ್ಯಾಟರ್.

ಏನಿದು ಹೊಸ ವಿವಾದ?

ವಿಷಯ ಏನಪ್ಪಾ ಅಂದ್ರೆ, ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದರೆ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಅಧಿಕಾರಕ್ಕೆ ಬಂದಿದೆ. ಕೇರಳದಲ್ಲಿ ವಿಡಿ ಸತೀಶನ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಆಡಳಿತದಲ್ಲಿ ಪ್ರಮುಖವಾಗಿರುವ 'ಮುಖ್ಯ ಕಾರ್ಯದರ್ಶಿ' ಹುದ್ದೆಗೆ ಐಎಎಸ್ ಅಧಿಕಾರಿ ರತನ್ ಯು ಕೇಳ್ಕರ್ ಅವರನ್ನು ನೇಮಕ ಮಾಡಿದ್ದಾರೆ.

ಟ್ವಿಸ್ಟ್ ಏನೆಂದರೆ, ಇದೇ ರತನ್ ಕೇಳ್ಕರ್ ಕೇರಳದ ಮುಖ್ಯ ಚುನಾವಣಾಧಿಕಾರಿ (CEO) ಆಗಿ ಕೆಲಸ ಮಾಡಿದ್ದರು. ಚುನಾವಣಾ ಅಧಿಕಾರಿಯಾಗಿದ್ದವರನ್ನು ತಂದು ಸರ್ಕಾರದ ಚೀಫ್ ಸೆಕ್ರೆಟರಿ ಮಾಡಿದ್ದೇ ತಡ, ಬಿಜೆಪಿ ನಾಯಕರು ರಾಹುಲ್ ಗಾಂಧಿಯವರ ಹಳೆಯ ಭಾಷಣಗಳನ್ನು ಕೆದಕಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಬಂಗಾಳದಲ್ಲಿ ರಾಹುಲ್ ಹೇಳಿದ್ದೇನು?

ಕೆಲವು ದಿನಗಳ ಹಿಂದಷ್ಟೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದಾಗ, ಅಲ್ಲಿನ ಸಿಎಂ ಸುವೇಂದು ಅಧಿಕಾರಿ ಅವರು ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಮನೋಜ್ ಅಗರ್ವಾಲ್ ಅವರನ್ನು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. ಆಗ ಭಾರಿ ಕಾನೂನು ಪಾಠ ಮಾಡಿದ್ದ ರಾಹುಲ್ ಗಾಂಧಿ, "ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ ಒಳಒಪ್ಪಂದ ನಡೆದಿದೆ. ಚುನಾವಣೆಯಲ್ಲಿ ಸಹಾಯ ಮಾಡಿದ್ದಕ್ಕೆ, ವೋಟ್ ಕಳ್ಳತನಕ್ಕೆ ಹೆಲ್ಪ್ ಮಾಡಿದ್ದಕ್ಕೆ ಬಿಜೆಪಿ ಸರ್ಕಾರ ಚುನಾವಣಾ ಅಧಿಕಾರಿಗೆ ಈ ಹುದ್ದೆಯನ್ನು ಇನಾಮಾಗಿ (ಗಿಫ್ಟ್) ನೀಡಿದೆ" ಎಂದು ಗಂಭೀರ ಆರೋಪ ಮಾಡಿದ್ದರು.

ಈಗ ಕೇರಳದಲ್ಲಿ ಉಲ್ಟಾ ಹೊಡೆದ ಕಾಂಗ್ರೆಸ್!

ಬಿಜೆಪಿಯ ನೇರ ಪ್ರಶ್ನೆ: ಅಂದು ಬಂಗಾಳದಲ್ಲಿ ಚುನಾವಣಾ ಅಧಿಕಾರಿಯನ್ನು ಮುಖ್ಯ ಕಾರ್ಯದರ್ಶಿ ಮಾಡಿದಾಗ ಒಳಒಪ್ಪಂದ ಅಂದಿದ್ದ ರಾಹುಲ್ ಗಾಂಧಿ, ಇವತ್ತು ಕೇರಳದಲ್ಲಿ ತಮ್ಮದೇ ಸರ್ಕಾರ ಅದೇ ಕೆಲಸ ಮಾಡಿದಾಗ ಯಾಕೆ ಸೈಲೆಂಟ್ ಆಗಿದ್ದಾರೆ?

ಈಗ ಕೇರಳದಲ್ಲಿ ಕಾಂಗ್ರೆಸ್ ಸರ್ಕಾರ ಕೂಡ ಅತ್ಯಂತ ಸೀನಿಯರ್ ಅಲ್ಲದಿದ್ದರೂ ರತನ್ ಕೇಳ್ಕರ್ ಅವರನ್ನು ತಂದು ಮುಖ್ಯ ಕಾರ್ಯದರ್ಶಿ ಕುರ್ಚಿಯ ಮೇಲೆ ಕೂರಿಸಿದೆ. ಇದನ್ನೇ ಹಿಡಿದುಕೊಂಡಿರುವ ಬಿಜೆಪಿ, "ರಾಹುಲ್ ಗಾಂಧಿ ಅವರ ತರ್ಕದ ಪ್ರಕಾರ ನೋಡಿದರೆ, ಕೇರಳದಲ್ಲಿ ಕಾಂಗ್ರೆಸ್ ಗೆಲ್ಲಲು ಸಹಾಯ ಮಾಡಿದ್ದಕ್ಕೆ ರತನ್ ಕೇಳ್ಕರ್ ಅವರಿಗೆ ಈ ಹುದ್ದೆಯನ್ನು ಗಿಫ್ಟ್ ಆಗಿ ನೀಡಲಾಗಿದೆಯೇ?" ಎಂದು ಕಿವಿ ಹಿಂಡುತ್ತಿದೆ.

ಅಮಿತ್ ಮಾಳವೀಯ ಸಖತ್ ಟೀಕೆ!

ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಈ ಬಗ್ಗೆ ಟ್ವೀಟ್ ಮಾಡಿ ರಾಹುಲ್ ಗಾಂಧಿ ಅವರ ದ್ವಂದ್ವ ನೀತಿಯನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ. "ರಾಹುಲ್ ಗಾಂಧಿ ಅವರ ಆಕ್ರೋಶ ಯಾವಾಗಲೂ ಸೆಲೆಕ್ಟಿವ್ (ಆಯ್ದ ವಿಷಯಗಳಿಗೆ ಮಾತ್ರ). ಬಂಗಾಳದಲ್ಲಿ ಸುವೇಂದು ಅಧಿಕಾರಿಯವರು ನಿಯಮದ ಪ್ರಕಾರವೇ ಮನೋಜ್ ಅಗರ್ವಾಲ್ ಅವರನ್ನು ನೇಮಿಸಿದ್ದರು. ಮಮತಾ ಬ್ಯಾನರ್ಜಿ ತರಹ ಅರ್ಹ ಅಧಿಕಾರಿಗಳನ್ನು ಬಿಟ್ಟು ತಮಗೆ ಬೇಕಾದವರನ್ನು ಅವರು ನೇಮಿಸಿರಲಿಲ್ಲ" ಎಂದು ಸುವೇಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ, ಕಾಂಗ್ರೆಸ್ ಇನ್ನಾದರೂ ಜನರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಲಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

"ನಮಗೆ ಬಂದರೆ ರಕ್ತ, ಬೇರೆಯವರಿಗೆ ಬಂದರೆ ಟೊಮೇಟೊ ರಸ" ಅನ್ನೋ ರೇಂಜ್‌ನಲ್ಲಿ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ ಎಂಬುದು ಸದ್ಯಕ್ಕೆ ಬಿಜೆಪಿಯ ವಾದ. ಅಂದು ಬಂಗಾಳದಲ್ಲಿ ಆಡಿದ ಮಾತುಗಳೇ ಇಂದು ಕೇರಳದಲ್ಲಿ ಕಾಂಗ್ರೆಸ್ ಪಾಲಿಗೆ ಉರುಳಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ! 

Latest News