ಪ್ರೀತಿ ಅನ್ನೋದು ಕಣ್ಣಿಗೆ ಕಾಣಿಸಲ್ಲ ಅಂತಾರೆ, ಆದ್ರೆ ಕೆಲವು ಸಲ ಆ ಪ್ರೀತಿಯ ಹಿಂದಿರೋ ಮೋಸ ಮಾತ್ರ ನಡುರಸ್ತೆಯಲ್ಲಿ ಬಯಲಾಗುತ್ತದೆ! ಹೈದರಾಬಾದ್‌ನ ಮಲ್ಟಿನ್ಯಾಷನಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಂಕಿತ್ ದುಬೆ ಎಂಬ ಮಹಾಶಯನ ಕಥೆಯೂ ಈಗ ಹೀಗೆಯೇ ಆಗಿದೆ. ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಹೋದ ಈ 'ರೋಮಿಯೋ' ಈಗ ಅತ್ತ ಗರ್ಲ್‌ಫ್ರೆಂಡ್ ಕೂಡ ಇಲ್ಲದೆ, ಇತ್ತ ಹೆಂಡ್ತಿಯೂ ಇಲ್ಲದೆ ಬೀದಿಗೆ ಬಂದಿದ್ದಾನೆ.
ಆಫೀಸ್ ಲವ್ ಮತ್ತು ಗೋಲ್‌ಗಪ್ಪಾ ಪುರಾಣ
ಕಥೆ ಶುರುವಾಗೋದು ಹೈದರಾಬಾದ್‌ನ ಒಂದು ದೊಡ್ಡ ಕಂಪನಿಯಲ್ಲಿ. ಅಲ್ಲಿ ರಿಯಾ ಮಿಶ್ರಾ ಮತ್ತು ಅಂಕಿತ್ ದುಬೆ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಕೆಲಸದ ನಡುವೆ ಶುರುವಾದ ಸ್ನೇಹ ಮೆಲ್ಲಗೆ ಪ್ರೀತಿಗೆ ತಿರುಗಿತು. ಸಂಜೆ ಆಫೀಸ್ ಮುಗಿಸಿ ಇಬ್ಬರೂ ಒಟ್ಟಿಗೆ ಮನೆಗೆ ಹೋಗುವುದು, ದಾರಿಯಲ್ಲಿ ಕಾಫಿ ಕುಡಿಯುವುದು, ಪಾನಿಪುರಿ (ಗೋಲ್‌ಗಪ್ಪಾ) ತಿನ್ನುವುದು ಇವರ ಡೈಲಿ ರೂಟಿನ್ ಆಗಿತ್ತು. ಇವರ ಈ "ಪಾನಿಪುರಿ ಪ್ರೇಮ" ಎಷ್ಟು ಬೆಳೆಯಿತು ಅಂದ್ರೆ, ದಿನಾ ಮೀಟ್ ಮಾಡ್ತಿದ್ದ ಈ ಜೋಡಿ ಮೆಲ್ಲಗೆ ಓಯೋ (OYO) ಹೋಟೆಲ್ ಮೆಟ್ಟಿಲೇರಿದರು ಎಂದು ತಿಳಿದುಬಂದಿದೆ.
ಒಂದು ಫೋನ್ ಕಾಲ್ ಮತ್ತು ಬದಲಾದ ಅದೃಷ್ಟ!
ಒಂದು ದಿನ ಇಬ್ಬರೂ ಎಂದಿನಂತೆ ಓಯೋ ಹೋಟೆಲ್‌ನಲ್ಲಿ ಭೇಟಿಯಾಗಿದ್ದರು. ಸ್ವಲ್ಪ ಹೊತ್ತಿನ ನಂತರ ಅಂಕಿತ್ ಯಾವುದೋ ಅರ್ಜೆಂಟ್ ಕೆಲಸ ಇದೆ ಎಂದು ಹೊರಗೆ ಹೋಗಿದ್ದಾನೆ. ಆದರೆ ಗಾಬರಿಯಲ್ಲಿ ತನ್ನ ಮೊಬೈಲ್ ಅನ್ನು ಹೋಟೆಲ್ ರೂಮ್‌ನಲ್ಲೇ ಮರೆತು ಹೋಗಿದ್ದ. ಇದೇ ಅಂಕಿತ್'ನ ಪಾಲಿಗೆ ವಿಲನ್ ಆಯ್ತು!
ಅಂಕಿತ ಹೋದ ಸ್ವಲ್ಪ ಹೊತ್ತಿಗೆ ಅವನ ಫೋನ್ ರಿಂಗ್ ಆಗಿದೆ. ರಿಯಾ ಫೋನ್ ರಿಸೀವ್ ಮಾಡಿದಾಗ ಅತ್ತ ಕಡೆಯಿಂದ ಒಬ್ಬ ಮಹಿಳೆಯ ಧ್ವನಿ ಕೇಳಿಸಿದೆ. ಆಕೆ, "ಅಂಕಿತ್, ಯಾವಾಗ ಮನೆಗೆ ಬರ್ತೀಯಾ? ಮಕ್ಕಳು ನಿನಗಾಗಿ ಕಾಯುತ್ತಿದ್ದಾರೆ, ಹಠ ಮಾಡುತ್ತಿದ್ದಾರೆ" ಎಂದು ಹೇಳಿದ್ದಾಳೆ. ಇದನ್ನು ಕೇಳಿದ ರಿಯಾಳಿಗೆ ಭೂಮಿ ಬಾಯ್ಬಿಟ್ಟಂತಾಗಿದೆ!
ಬಯಲಾಯ್ತು ಅಂಕಿತ್'ನ ಸಂಸಾರ ರಹಸ್ಯ!
ರಿಯಾ ಆ ಮಹಿಳೆಯ ಜೊತೆ ಮಾತು ಮುಂದುವರಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಅತ್ತ ಫೋನ್ ಮಾಡಿದ್ದು ಅಂಕಿತ್'ನ ಧರ್ಮಪತ್ನಿ! ಅಂಕಿತ್'ನಿಗೆ ಮದುವೆಯಾಗಿ ಮಕ್ಕಳೂ ಇವೆ ಎಂಬ ವಿಷಯ ರಿಯಾಳಿಗೆ ಆಗಲೇ ತಿಳಿದಿದ್ದು. ತಾನು ಇಷ್ಟು ದಿನ ಪ್ರೀತಿಸಿದ್ದು ಒಬ್ಬ ಸಂಸಾರಸ್ಥನನ್ನಾ? ಎಂದು ರಿಯಾ ಬೆಚ್ಚಿಬಿದ್ದಿದ್ದಾಳೆ. ರಿಯಾ ತಕ್ಷಣವೇ ಆತನ ಪತ್ನಿಗೆ ತಮ್ಮಿಬ್ಬರ ಸಂಬಂಧದ ಬಗ್ಗೆ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ರೂಮ್‌ನಲ್ಲಿ ಸಿಕ್ತು ಕಪಾಳಮೋಕ್ಷ, ಮನೆಯಲ್ಲಿ ಸಿಕ್ತು ಡಿವೋರ್ಸ್!
ಸ್ವಲ್ಪ ಹೊತ್ತಿನ ನಂತರ ಅಂಕಿತ್ ವಾಪಸ್ ರೂಮ್‌ಗೆ ಬಂದಾಗ ರಿಯಾ ಅವನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ. ಅಂಕಿತ್ ಸುಳ್ಳುಗಳೆಲ್ಲ ಬಯಲಾದ ಮೇಲೆ ರಿಯಾ ಅವನ ಕೆನ್ನೆಗೆ ಬಾರಿಸಿ, ಆ ಸಂಬಂಧಕ್ಕೆ ಅಲ್ಲೇ ಮುಕ್ತಾಯ ಹಾಡಿ ಹೊರಗೆ ಬಂದಿದ್ದಾಳೆ. ಆದರೆ ಅಂಕಿತ್'ನ ಕಷ್ಟ ಅಷ್ಟಕ್ಕೇ ಮುಗಿಯಲಿಲ್ಲ. ಅವನು ಮನೆಗೆ ಹೋಗುವಷ್ಟರಲ್ಲಿ ಅವನ ಹೆಂಡತಿ ಫುಲ್ ಫೈರ್ ಆಗಿದ್ದಳು. ಅಂಕಿತ್ ಎಷ್ಟೇ ಹೇಳಿದರೂ ಕೇಳದ ಆಕೆ, ತಕ್ಷಣವೇ ವಿಮಾನ ಹತ್ತಿ ತನ್ನ ತವರು ಮನೆಗೆ ಹೋಗಿದ್ದಾಳೆ. ಅಷ್ಟೇ ಅಲ್ಲ, ಅಲ್ಲಿಗೆ ಹೋದವಳೇ ಅಂಕಿತ್ ಕೈಗೆ ಡಿವೋರ್ಸ್ ಪೇಪರ್ ಕಳಿಸಿಕೊಟ್ಟಿದ್ದಾಳೆ ಎನ್ನಲಾಗುತ್ತಿದೆ.
ಅಂಕಿತ್ ದುಬೆ ತನ್ನ ಅತಿ ಬುದ್ಧಿವಂತಿಕೆಯಿಂದ ದೊಡ್ಡ ಸ್ಕೀಮ್ ಹಾಕಲು ಹೋಗಿ ಈಗ ತನ್ನ "ಲಂಕೆ"ಯನ್ನು ತಾನೇ ಸುಟ್ಟುಕೊಂಡಿದ್ದಾನೆ. ಅತ್ತ ಪ್ರೇಯಸಿಯೂ ದೂರಾದಳು, ಇತ್ತ ಸಂಸಾರವೂ ಹಡಗೇರಿತು. ಈ ಕಥೆಯಿಂದ ನಮಗೆ ತಿಳಿಯೋದು ಒಂದೇ—ಸುಳ್ಳಿನ ಮೇಲೆ ಕಟ್ಟಿದ ಪ್ರೇಮದ ಅರಮನೆ ಯಾವತ್ತಿದ್ದರೂ ಕುಸಿಯಲೇಬೇಕು!