ಮದುವೆಯಾಗಿ ಎರಡೇ ವಾರಕ್ಕೆ ನವವಧುವೊಬ್ಬಳು ತನ್ನ ಅಸಲಿ ಬಣ್ಣ ಬಯಲು ಮಾಡಿಕೊಂಡ ವಿಚಿತ್ರ ಪ್ರಸಂಗವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೆಂಡತಿಯ ಮೇಲೆ ಅನುಮಾನಗೊಂಡು ಗಂಡ ಮಾಡಿದ ಒಂದು ಚಿಕ್ಕ 'ಟೆಕ್ನಾಲಜಿ' ಪ್ಲ್ಯಾನ್ ಇಡೀ ಪ್ರಕರಣವನ್ನು ಬೀದಿಗೆ ತಂದಿದೆ.
ಅನುಮಾನವೇ ಅನಾಹುತಕ್ಕೆ ಮೂಲ;
ವಾರಣಾಸಿಯ ಯುವಕ ಮತ್ತು ಚಂದೌಲಿಯ ಯುವತಿಯ ವಿವಾಹ ಕಳೆದ 15 ದಿನಗಳ ಹಿಂದೆಯಷ್ಟೇ ಅದ್ಧೂರಿಯಾಗಿ ನಡೆದಿತ್ತು. ಆದರೆ, ಸಂಸಾರ ಶುರುವಾದ ಮೊದಲ ದಿನದಿಂದಲೇ ಹೆಂಡತಿಯ ನಡವಳಿಕೆ ಗಂಡನಿಗೆ ಏನೋ ಒಂಥರಾ ಅನುಮಾನ ಹುಟ್ಟಿಸಿತ್ತು. ಸದಾ ಫೋನ್‌ನಲ್ಲಿ ಮಗ್ನಳಾಗಿರುತ್ತಿದ್ದ ಆಕೆಯ ನಡೆ-ನುಡಿ ಕಂಡು ಗಂಡ ಒಳಗೊಳಗೆ ಸಂಶಯ ಪಡುತ್ತಿದ್ದ. ಈ ಅನುಮಾನಕ್ಕೆ ಉತ್ತರ ಹುಡುಕಲು ಆತ ಒಂದು ಉಪಾಯ ಮಾಡಿದ.
ತವರು ಮನೆಗೆ ಅಂದು ಹೋಟೆಲ್ ತಲುಪಿದ ವಧು!
ಮದುವೆಯಾದ 13ನೇ ದಿನಕ್ಕೆ 'ನನಗೆ ತವರು ಮನೆ ನೆನಪಾಗುತ್ತಿದೆ, ಎರಡು ದಿನ ಹೋಗಿ ಬರುತ್ತೇನೆ' ಎಂದು ಪತ್ನಿ ಕೇಳಿಕೊಂಡಾಗ ಗಂಡ "ಖಂಡಿತ ಹೋಗು" ಅಂದಿದ್ದ. ಆದರೆ ಆಕೆ ಮನೆಯಿಂದ ಹೊರಡುವ ಮುನ್ನವೇ ಅವಳ ಫೋನ್‌ನಲ್ಲಿ ಯಾರಿಗೂ ಗೊತ್ತಾಗದಂತೆ ಜಿಪಿಎಸ್ ಟ್ರ್ಯಾಕರ್ ಆನ್ ಮಾಡಿದ್ದ.
ಮನೆಗೆ ಹೋಗಿ ಸೇರಬೇಕಾದ ಹೆಂಡತಿ, ಲೊಕೇಶನ್ ನೋಡಿದಾಗ ಒಂದು ಒಯೋ (OYO) ಹೋಟೆಲ್ ತೋರಿಸುತ್ತಿತ್ತು. ತಕ್ಷಣ ಎಚ್ಚೆತ್ತ ಗಂಡ ಲೊಕೇಶನ್ ಹಿಂಬಾಲಿಸುತ್ತಾ ಹೋದಾಗ ಅಲ್ಲಿ ಕಂಡ ದೃಶ್ಯಕ್ಕೆ ಆತ ದಂಗಾಗಿದ್ದಾನೆ!
ಪ್ರಿಯಕರ ಎಸ್ಕೇಪ್; ಹೆಂಡತಿ ಪೊಲೀಸ್ ಸ್ಟೇಷನ್ ಪಾಲು
ಜಿಪಿಎಸ್ ತೋರಿಸಿದ ಜಾಗಕ್ಕೆ ಗಂಡ ಹೋಗಿ ನೋಡಿದಾಗ, ಹೆಂಡತಿ ತನ್ನ ಹಳೆಯ ಪ್ರಿಯಕರನ ಜೊತೆ ಕಾಲ ಕಳೆಯುತ್ತಿರುವುದು ಪಕ್ಕಾ ಆಯಿತು. ಇಬ್ಬರೂ ಹೋಟೆಲ್‌ನಲ್ಲಿ ಇರುವುದನ್ನು ಪತ್ತೆ ಹಚ್ಚಿದ ಗಂಡ ಧಾವಿಸಿದಾಗ, ಅನಿರೀಕ್ಷಿತ ಅತಿಥಿಯನ್ನು ಕಂಡು ಪ್ರಿಯಕರ ಅಲ್ಲಿಂದ ಪಲಾಯನ ಮಾಡಿದ್ದಾನೆ. ಇತ್ತ ನವವಧು ಗಂಡನಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ.
ಹೋಟೆಲ್ ಮುಂಭಾಗದಲ್ಲಿ ಇಬ್ಬರ ಜಗಳ ಜೋರಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
"ಇಂದಿನ ಕಾಲದಲ್ಲಿ ಟೆಕ್ನಾಲಜಿಯಿಂದ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ" ಎಂದು ನೆಟ್ಟಿಗರು ಈ ಘಟನೆಯ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಗಂಡನ ಸಮಯಪ್ರಜ್ಞೆಯಿಂದ ಸತ್ಯ ಬಯಲಿಗೆ ಬಂದಿದ್ದು, ಈಗ ಈ ಜೋಡಿಯ ಸಂಸಾರ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ!