ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮವು ಇತ್ತೀಚೆಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅದೇನು ಅಂತೀರಾ, ಹೌದು ಗ್ರಾಮಸ್ಥರು ಒಟ್ಟಾಗಿ ಸೇರಿ ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ದೃಢ ನಿರ್ಧಾರ ಮಾಡಿದ್ದೂ ಅದನ್ನು ಇದೀಗ ಘೋಷಣೆ ಸಹ ಮಾಡಿದ್ದಾರೆ. ಈ ನಿರ್ಧಾರವು ಕೇವಲ ಒಂದು ನಿಯಮವಲ್ಲ, ಗ್ರಾಮಸ್ಥರ ಜೀವನದಲ್ಲಿ ಹೊಸ ಬೆಳಕನ್ನು ತಂದಿರುವ ಮಾನವೀಯ ಹೆಜ್ಜೆಯಾಗಿದೆ ಎನ್ನುತ್ತಾರೆ ಆ ಊರಿನ ಜನರು.
ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಗಳು ಗ್ರಾಮಸ್ಥರಿಗೆ ಮದ್ಯದ ಹಾನಿ ಕುರಿತು ತಿಳಿಸಿ, ಅದನ್ನು ತೊರೆಯುವಂತೆ ಮನವಿ ಮಾಡಿದ್ದರು. “ಮದ್ಯವು ಕುಟುಂಬಗಳನ್ನು ಹಾಳುಮಾಡುತ್ತದೆ, ಯುವಕರ ಭವಿಷ್ಯವನ್ನು ಕತ್ತಲೆಯಲ್ಲಿಡುತ್ತದೆ” ಎಂಬ ಅವರ ಮಾತು ಗ್ರಾಮಸ್ಥರ ಮನಸ್ಸಿಗೆ ತಟ್ಟಿದೆ. ಅಜ್ಜನ ಮಾತು ಪಾಲಿಸಿದಂತೆ, ಹಟ್ಟಿ ಗ್ರಾಮದ ಜನರು ಒಟ್ಟಾಗಿ ಮದ್ಯ ಮುಕ್ತ ಜೀವನದತ್ತ ಹೆಜ್ಜೆ ಹಾಕಲು ಮುಂದಾಗಿದ್ದಾರೆ. ಹೌದು ಕಳೆದ ಮೂರು ತಿಂಗಳಿನಿಂದ ಹಟ್ಟಿ ಗ್ರಾಮದಲ್ಲಿ ಸರಾಯಿ ಮಾರಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಮೊದಲು ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿತ್ತು. ಇದರ ಪರಿಣಾಮವಾಗಿ ಯುವಕರು ಕುಡಿದು ಬಂದು ಗಲಾಟೆ ಮಾಡುತ್ತಿದ್ದರು, ಕುಟುಂಬಗಳಲ್ಲಿ ಅಶಾಂತಿ ಹೆಚ್ಚುತ್ತಿತ್ತು. ಈಗ ಗ್ರಾಮಸ್ಥರ ನಿರ್ಧಾರದಿಂದ ಆ ಅಕ್ರಮ ಮಾರಾಟಕ್ಕೆ ಕಡಿವಾಣ ಬಿದ್ದಿದೆ. ಮದ್ಯದ ಅತಿಯಾದ ಬಳಕೆಯಿಂದ ಹಾಳಾಗುತ್ತಿದ್ದ ಯುವಕರ ಜೀವನಕ್ಕೆ ಈಗ ಹೊಸ ದಾರಿ ತೆರೆದಿದೆ. ಮದ್ಯ ಮುಕ್ತ ಗ್ರಾಮ ಎಂಬ ನಿರ್ಧಾರವು ಅವರಿಗೆ ಶಿಕ್ಷಣ, ಉದ್ಯೋಗ ಮತ್ತು ಉತ್ತಮ ಜೀವನದತ್ತ ಗಮನ ಹರಿಸಲು ಪ್ರೇರಣೆ ನೀಡುತ್ತಿದೆ. ಗ್ರಾಮದಲ್ಲಿ ನೆಮ್ಮದಿ ಹೆಚ್ಚಾಗಿದ್ದು, ಕುಟುಂಬಗಳು ಸಂತೋಷದಿಂದ ಬದುಕಲು ಆರಂಭಿಸಿವೆ ಎನ್ನಬಹುದು.
ಈ ನಿರ್ಧಾರವು ಹಟ್ಟಿ ಗ್ರಾಮಸ್ಥರ ಒಗ್ಗಟ್ಟಿನ ಸಂಕೇತವಾಗಿದೆ. ಎಲ್ಲರೂ ಸೇರಿ ತಮ್ಮ ಊರಿನ ಭವಿಷ್ಯವನ್ನು ಉತ್ತಮಗೊಳಿಸಲು ಕೈಜೋಡಿಸಿದ್ದಾರೆ. ಹಳ್ಳಿಯ ಹಿರಿಯರು, ಮಹಿಳೆಯರು, ಯುವಕರು ಎಲ್ಲರೂ ಸೇರಿ ಮದ್ಯ ಮುಕ್ತ ಜೀವನದತ್ತ ಹೆಜ್ಜೆ ಹಾಕಿದ್ದಾರೆ. ಗ್ರಾಮಸ್ಥರ ಈ ನಿರ್ಧಾರಕ್ಕೆ ಗವಿಮಠದ ಶ್ರೀಗವಿಸಿದ್ದೇಶ್ವರ ಸ್ವಾಮೀಜಿಗಳು ಸಂತಸ ವ್ಯಕ್ತಪಡಿಸಿದ್ದಾರೆ. “ಹಟ್ಟಿ ಗ್ರಾಮವು ಇತರರಿಗೆ ಮಾದರಿಯಾಗಲಿ” ಎಂಬ ಆಶಯವನ್ನು ಅವರು ಹಂಚಿಕೊಂಡಿದ್ದಾರೆ.
ಹಟ್ಟಿ ಗ್ರಾಮದ ಮದ್ಯ ಮುಕ್ತ ನಿರ್ಧಾರವು ಕೇವಲ ಒಂದು ನಿಯಮವಲ್ಲ, ಇದು ಮಾನವೀಯ ಬದಲಾವಣೆ. ಗ್ರಾಮಸ್ಥರ ಒಗ್ಗಟ್ಟು, ಸ್ವಾಮೀಜಿಗಳ ಮಾರ್ಗದರ್ಶನ, ಮತ್ತು ಯುವಕರ ಭವಿಷ್ಯದ ಚಿಂತನೆಎಲ್ಲರೂ ಸೇರಿ ಗ್ರಾಮದ ಹೊಸ ಆಶೆಯನ್ನು ನಿರ್ಮಿಸಿದರು. ಹಟ್ಟಿ ಗ್ರಾಮ ಈಗ ನೆಮ್ಮದಿ, ಸಂತೋಷ ಮತ್ತು ಆರೋಗ್ಯಕರ ಬದುಕಿನತ್ತ ಸಾಗುತ್ತಿದೆ.