ತುಮಕೂರಿನಲ್ಲಿ ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ‘ಸಾಧನೆ ಸಮರ್ಪಣಾ ಸಮಾವೇಶ’ದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ. "ಇದು ಸರ್ಕಾರದ ಸಾಧನೆಯ ಸಮಾವೇಶ ಅಲ್ಲ, ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದರ ದಾಖಲೆ ಸಮರ್ಪಣೆ ಮಾಡಲು ಇವರು ತುಮಕೂರಿಗೆ ಹೋಗಿದ್ದಾರೆ" ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದ ಪ್ರಚಾರದ ವೈಖರಿ, ರೈತರ ಆತ್ಮಹತ್ಯೆ ಅಂಕಿ-ಅಂಶಗಳ ಮುಚ್ಚಿಡುವಿಕೆ ಹಾಗೂ ಬೆಂಗಳೂರಿನ ಇತ್ತೀಚಿನ ಮಳೆ ಅವಾಂತರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
"ಯಾರೂ ಮಾಡದ ಸಾಧನೆ ಮಾಡಿರೋ ತರ ಜಾಹೀರಾತು ಕೊಡ್ತಿದ್ದಾರೆ!"
ಸರ್ಕಾರದ ಸಾಧನಾ ಸಮಾವೇಶದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, "ಕಳೆದ ವರ್ಷವೂ ಇದೇ ರೀತಿ ಒಂದು ಸಭೆ ಮಾಡಿ ರೆವಿನ್ಯೂ ಇಲಾಖೆಯ ಪ್ರಚಾರ ಮಾಡಿಕೊಂಡಿದ್ದರು. ಈಗ ಮತ್ತೆ 1.52 ಸಾವಿರ ಹಕ್ಕು ಪತ್ರ ವಿತರಣೆ ಮಾಡ್ತಿದ್ದೇವೆ ಅಂತ ದಿನಾ ಪೇಪರ್, ಟಿವಿಯಲ್ಲಿ ಜಾಹೀರಾತು ಕೊಡ್ತಿದ್ದಾರೆ. ಕೆಲವು ಕಡೆ ಪೋಡಿ ಮುಕ್ತ ಮಾಡಿದ್ದೇವೆ ಅಂತ ಪ್ರತಿನಿತ್ಯ ಪ್ರಚಾರ ತಗೋತಾ ಇದ್ದಾರೆ. ಆದರೆ ನಾವೇ ಖುದ್ದಾಗಿ ಜಿಲ್ಲಾ ಕೇಂದ್ರಗಳಿಗೆ ಹೋದಾಗ ಅಲ್ಲಿ ಬರೋ ಅರ್ಜಿಗಳನ್ನು ನೋಡಿದರೆ, ಶೇಕಡಾ 80 ರಷ್ಟು ಅರ್ಜಿಗಳು ರೆವಿನ್ಯೂ ಇಲಾಖೆಗೆ ಸಂಬಂಧಿಸಿದ್ದೇ ಆಗಿರುತ್ತವೆ" ಎಂದರು.
ಇವತ್ತಿಗೂ ಒಂದು ಸಣ್ಣ ಕೆಲಸಕ್ಕಾಗಿ ಬಡ ಜನರು, ರೈತರು ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಜನಪ್ರತಿನಿಧಿಗಳೇ ಅಧಿಕಾರಿಗಳ ಹಿಂದೆ ಬೀಳುವ ಪರಿಸ್ಥಿತಿ ಇದೆ. ಆದರೆ ಇವರು ಜಾಹೀರಾತು ಕೊಡುವುದನ್ನು ನೋಡಿದರೆ ಜಗತ್ತಿನಲ್ಲಿ ಯಾರು ಮಾಡದೇ ಇರೋ ದೊಡ್ಡ ಸಾಧನೆ ಮಾಡಿಬಿಟ್ಟಿದ್ದೇವೆ ಅನ್ನೋ ತರ ಪೋಸ್ ಕೊಡ್ತಿದ್ದಾರೆ. ಈಗ ಐದು ಗ್ಯಾರಂಟಿ ಮುಗಿಸಿ, ಇನ್ನೊಂದು 'ಭೂ ಗ್ಯಾರಂಟಿ' ಅಂತ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.
ರೈತರ ಆತ್ಮಹತ್ಯೆ ಅಂಕಿ-ಅಂಶಗಳನ್ನು ಜಾಣತನದಿಂದ ಮುಚ್ಚಿಟ್ಟಿದ್ದಾರೆ!
ರೈತರ ಸಾವು: ನಿನ್ನೆ ತಾನೆ ಸಚಿವರೊಬ್ಬರು ಸಂವಾದ ನಡೆಸಿ, ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಸಿಕ್ಕಾಪಟ್ಟೆ ಕಡಿಮೆಯಾಗಿದೆ ಅಂತ ಹೇಳಿದ್ದಾರೆ. ಆದರೆ ಬೆಳಿಗ್ಗೆ ಪತ್ರಿಕೆಗಳಲ್ಲಿ ಬಂದಿರೋ ವರದಿಯೇ ಬೇರೆ ಇದೆ. ಸರ್ಕಾರದ ವಿಷಯಗಳನ್ನು ಮುಚ್ಚಿಡಲು ಇವರು ಎಷ್ಟರಮಟ್ಟಿಗೆ ಯಶಸ್ವಿಯಾಗಿ ಕೆಲಸ ಮಾಡ್ತಿದ್ದಾರೆ ಅನ್ನೋದಕ್ಕೆ ಈ ಅಂಕಿ-ಅಂಶಗಳೇ ಸಾಕ್ಷಿ ಎಂದು ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಿದರು.
ಇತ್ತೀಚೆಗೆ ಕೇಂದ್ರದ ಎನ್‌ಸಿಆರ್ (NCR) ಸಂಸ್ಥೆ ನಡೆಸಿರೋ ಸರ್ವೆ ವರದಿ ನೋಡಿದ್ದೇನೆ. ಅದರ ಪ್ರಕಾರ:
2023 ರಲ್ಲಿ: ರಾಜ್ಯದಲ್ಲಿ 2,400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2024 ರಲ್ಲಿ: ಈ ಸಂಖ್ಯೆ 2,900 ಕ್ಕೆ ಏರಿಕೆಯಾಗಿದೆ.
ರಾಜ್ಯಗಳ ಪಟ್ಟಿ: ರೈತರ ಆತ್ಮಹತ್ಯೆ ಪ್ರಕರಣದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ನಮ್ಮ ಕರ್ನಾಟಕ ಎರಡನೇ ಸ್ಥಾನದಲ್ಲಿದೆ!
ಕಳೆದ ಎರಡು ವರ್ಷಗಳಲ್ಲೇ 5,000 ಕ್ಕೂ ಹೆಚ್ಚು ರೈತರು ಸಾಲಬಾಧೆ ತಾಳಲಾರದೆ ಸಾವನ್ನಪ್ಪಿದ್ದಾರೆ. ರೈತರ ಜೀವನ ಮತ್ತು ಬದುಕನ್ನು ಸರಿಪಡಿಸದ ಈ ಸರ್ಕಾರ, ಕೇವಲ ಪ್ರದರ್ಶನಕ್ಕಾಗಿ ಕೋಟ್ಯಾಂತರ ರೂಪಾಯಿ ಸರ್ಕಾರಿ ಹಣ ಖರ್ಚು ಮಾಡಿ ಸಮಾವೇಶ ಮಾಡ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರದ ದುಡ್ಡಿನಲ್ಲಿ ಸಮಾವೇಶ; ಜನ ಬರಲ್ಲ ಅಂತ ಅಧಿಕಾರಿಗಳಿಗೆ ಟಾಸ್ಕ್!
ರಾಜ್ಯದ ಅಭಿವೃದ್ಧಿ ಹೇಗಿದೆ ಅನ್ನೋದಕ್ಕೆ ನಿನ್ನೆ ಸಂಜೆ ಬಂದ 10 ನಿಮಿಷದ ಮಳೆಯೇ ಸಾಕ್ಷಿ. ಬೆಂಗಳೂರಿನ ಹಲವಾರು ಭಾಗಗಳಲ್ಲಿ ನೀರು ತುಂಬಿ ಇಡೀ ಸಿಟಿ ಜಲಾವೃತವಾಗಿತ್ತು. ಇತ್ತ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎನ್ನುವ ಸರ್ಕಾರ, ಈ ಸಮಾವೇಶಕ್ಕೆ ಕೋಟಿ ಕೋಟಿ ಸುರಿಯುತ್ತಿದೆ. ಇವರು ಸ್ವಂತ ಬಲದ ಮೇಲೆ ಸಮಾವೇಶ ಮಾಡಿದರೆ ಜನ ಬರಲ್ಲ. ಅದಕ್ಕೆ ಇಲಾಖೆಯ ಅಧಿಕಾರಿಗಳಿಗೇ ಜನರನ್ನು ಕರೆದುಕೊಂಡು ಬರುವಂತೆ ನಿರ್ದೇಶನ ಕೊಟ್ಟಿದ್ದಾರೆ. ಸರ್ಕಾರದ ದುಡ್ಡಿನಲ್ಲಿ, ಅಧಿಕಾರಿಗಳ ಮೂಲಕ ಜನರನ್ನು ಸೇರಿಸಿ ಇವರು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ಹೆಚ್‌ಡಿಕೆ ಟೀಕಿಸಿದರು.
ಜೆಡಿಎಸ್‌ಗೆ ವಾಪಸ್ ಬರಲಿದ್ದಾರೆ ಅಖಂಡ ಶ್ರೀನಿವಾಸಮೂರ್ತಿ!
ಇದೇ ವೇಳೆ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ ವಿಚಾರದ ಬಗ್ಗೆ ಮಾತನಾಡಿದ ಹೆಚ್‌ಡಿಕೆ, "ಅಖಂಡ ಶ್ರೀನಿವಾಸಮೂರ್ತಿ ಅವರು ಮೊದಲು ನಮ್ಮ ಪಕ್ಷದಿಂದಲೇ ಆಯ್ಕೆಯಾಗಿ ಎರಡು ಬಾರಿ ಶಾಸಕರಾಗಿದ್ದವರು. ಆಮೇಲೆ ಕೆಲವು ಸ್ನೇಹಿತರ ಜೊತೆ ಕಾಂಗ್ರೆಸ್‌ಗೆ ಹೋಗಿದ್ದರು. ಆದರೆ ಈಗ ಅವರಿಗೆ 'ನನ್ನ ಹಳೇ ಮನೆ ಜನತಾದಳವೇ ಸರಿಯಾದ ಮನೆ' ಅಂತ ಅನ್ನಿಸಿದೆ. ಹಾಗಾಗಿ ವಾಪಸ್ ಬರುವ ನಿರ್ಧಾರ ಮಾಡಿದ್ದಾರೆ" ಎಂದರು.
ಅವರ ಕುಟುಂಬದವರು ಮನೆಗೆ ಬರಬೇಕು ಅಂತ ಪ್ರೀತಿಯಿಂದ ಆಹ್ವಾನ ನೀಡಿದ್ದರು, ಅದಕ್ಕೆ ಭೇಟಿ ನೀಡಿದ್ದೆ. ಸದ್ಯದಲ್ಲೇ ಒಂದು ಬೃಹತ್ ಸಮಾವೇಶ ಮಾಡುವ ಮೂಲಕ ಅಖಂಡ ಶ್ರೀನಿವಾಸಮೂರ್ತಿ ಅವರು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ನಾವು ಅವರನ್ನು ಸಡಗರದಿಂದ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.