ದಾವಣಗೆರೆ ಉಪಚುನಾವಣೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಕಿಚ್ಚು ಹಚ್ಚಿದೆ. ತಮ್ಮ ಸಮುದಾಯಕ್ಕೆ ಟಿಕೆಟ್ ಸಿಕ್ಕಿಲ್ಲವೆಂದು ಜಮೀರ್ ಅಹ್ಮದ್ ಖಾನ್ ಅಸಮಾಧಾನಗೊಂಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ, ಅವರು ಮತ್ತೆ ಜೆಡಿಎಸ್‌ಗೆ ಮರಳುತ್ತಾರಾ ಎಂಬ ಚರ್ಚೆ ಶುರುವಾಗಿತ್ತು. ಈ ಬಗ್ಗೆ ಹಾಸನದಲ್ಲಿ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ ಅವರು ಸಖತ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
"ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡಲ್ಲ"
"ಬೆಂದ ಮನೆಯಲ್ಲಿ ಗಳ ಹಿರಿಯುವ ಕೆಲಸಕ್ಕೆ ನಾನು ಯಾವತ್ತೂ ಕೈ ಹಾಕಲ್ಲ" ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು. ಜಮೀರ್ ಅಹ್ಮದ್ ಖಾನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಯಾವುದೇ ಅನಿವಾರ್ಯತೆ ಜೆಡಿಎಸ್‌ಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. "ಅವರನ್ನು ಸೇರಿಸಿಕೊಳ್ಳುವ ಅವಶ್ಯಕತೆಯೂ ನಮಗಿಲ್ಲ, ಆ ವಿಷಯವನ್ನು ಇನ್ಮುಂದೆ ನನ್ನ ಹತ್ತಿರ ಕೇಳಬೇಡಿ. ಈಗಾಗಲೇ ಸಾಕಷ್ಟು ಅನುಭವಿಸಿದ್ದೇನೆ. ರಾಜಕೀಯ ಶಕ್ತಿ ಬರುತ್ತದೆ ಎಂಬ ಕಾರಣಕ್ಕೆ ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ" ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಖಾರವಾಗಿ ಉತ್ತರಿಸಿದರು.
5ನೇ ಬಾರಿ ಜೀವನ ಕೊಟ್ಟ ಭಗವಂತ
ತಮ್ಮ ಆರೋಗ್ಯದ ಏರಿಳಿತಗಳ ಬಗ್ಗೆ ಭಾವುಕರಾಗಿ ಮಾತನಾಡಿದ ಕುಮಾರಸ್ವಾಮಿ, "ಇವತ್ತು ನಾನು ಆರೋಗ್ಯವಾಗಿ ಇಲ್ಲಿ ಬಂದು ನಿಂತಿದ್ದೇನೆ ಎಂದರೆ ಅದಕ್ಕೆ ಆ ಭಗವಂತನೇ ಕಾರಣ. ದೇವರು ನನಗೆ 5ನೇ ಬಾರಿ ಜೀವನ ಕೊಟ್ಟಿದ್ದಾನೆ. ಬದುಕುಳಿಯಲು ನಾನು ಪಟ್ಟಿರೋ ಕಷ್ಟ ನನಗೆ ಮಾತ್ರ ಗೊತ್ತು" ಎಂದರು.
ಚಿಕಿತ್ಸೆಗಾಗಿ ತಾನು ಎಷ್ಟು ಹಣ ಖರ್ಚು ಮಾಡಿದ್ದೇನೆ ಎಂಬುದು ನನಗೇ ಗೊತ್ತಿಲ್ಲ ಎಂದ ಅವರು, "ನಾನೇನೋ ಹಣ ಖರ್ಚು ಮಾಡಿ ಬದುಕಿ ಬಂದೆ, ಆದರೆ ಬಡವರು ಅಷ್ಟೊಂದು ಹಣವನ್ನು ಎಲ್ಲಿಂದ ತರುತ್ತಾರೆ? ಪಾಪ ಅವರ ಕಷ್ಟದ ಬಗ್ಗೆ ಯೋಚನೆ ಮಾಡಬೇಕು" ಎಂದು ಜನಸಾಮಾನ್ಯರ ಪರವಾಗಿ ಕಳಕಳಿ ವ್ಯಕ್ತಪಡಿಸಿದರು.
ಕಾಂಗ್ರೆಸ್‌ಗೆ ನೇರ ಪ್ರಶ್ನೆ
ಇನ್ನು ಜಮೀರ್ ಅವರ ಹೇಳಿಕೆಗಳ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, "ಕಾಂಗ್ರೆಸ್ ಅಧಿಕಾರ ನಡೆಸುತ್ತಿರುವುದೇ ಆ ಒಂದು ವರ್ಗದ ಜನರಿಂದ ಎಂದು ಅವರು ಹೇಳ್ತಿದ್ದಾರೆ. ಪ್ರತಿನಿತ್ಯ ಅನ್ನ ತಿನ್ನುತ್ತಿರುವುದೇ ಅವರಿಂದ ಎನ್ನುವ ರೀತಿ ಮಾತಾಡುತ್ತಿದ್ದರೂ ಕಾಂಗ್ರೆಸ್‌ನಲ್ಲಿ ಯಾರೊಬ್ಬರೂ ಅದನ್ನು ವಿರೋಧಿಸುತ್ತಿಲ್ಲವಲ್ಲ ಯಾಕೆ?" ಎಂದು ಪ್ರಶ್ನಿಸಿದರು. ರಾಜ್ಯದ ಇಂದಿನ ಈ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಅವರು ದೂರಿದರು.
ಜಮೀರ್ ಅಹ್ಮದ್ ಖಾನ್ ಮತ್ತೆ ಜೆಡಿಎಸ್ ಕಡೆ ಮುಖ ಮಾಡುತ್ತಾರೆ ಎನ್ನುವ ಮಾತುಗಳಿಗೆ ಕುಮಾರಸ್ವಾಮಿ ಅವರು ಬಲವಾದ ಬಾಗಿಲು ಹಾಕಿದ್ದಾರೆ. ತಮಗೆ ಸಿಕ್ಕಿರುವ ಈ 'ಹೊಸ ಜೀವನ'ವನ್ನು ಜನರ ಸೇವೆಗೆ ಮೀಸಲಿಡುವುದಾಗಿ ಹೇಳುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.