ಫೈನಲ್ ಸೋತ ಬೆನ್ನಲ್ಲೇ ಜಿಟಿ ತಂಡಕ್ಕೆ ಮತ್ತೊಂದು ಶಾಕ್ - ಹೋಟೆಲ್‌ಗೆ ಹೋಗುವಾಗ ಬಸ್‌ಗೆ ಬೆಂಕಿ, ರಸ್ತೆಯಲ್ಲೇ ನಿಂತ ಆಟಗಾರರು!!

ಫೈನಲ್ ಸೋತ ಬೆನ್ನಲ್ಲೇ ಜಿಟಿ ತಂಡಕ್ಕೆ ಮತ್ತೊಂದು ಶಾಕ್; ಹೋಟೆಲ್‌ಗೆ ಹೋಗುವಾಗ ಬಸ್‌ಗೆ ಬೆಂಕಿ, ರಸ್ತೆಯಲ್ಲೇ ನಿಂತ ಆಟಗಾರರು!

ಅಹಮದಾಬಾದ್ ರಸ್ತೆಯಲ್ಲೇ ಗಂಟೆಗಟ್ಟಲೆ ನಿಲ್ಲಬೇಕಾಗಿ ಬಂತು ಶುಭಮನ್ ಗಿಲ್ ಪಡೆ!
ಅಹಮದಾಬಾದ್ ರಸ್ತೆಯಲ್ಲೇ ಗಂಟೆಗಟ್ಟಲೆ ನಿಲ್ಲಬೇಕಾಗಿ ಬಂತು ಶುಭಮನ್ ಗಿಲ್ ಪಡೆ!

ಗುಜರಾತ್ ಟೈಟಾನ್ಸ್ (GT) ತಂಡಕ್ಕೆ ಐಪಿಎಲ್ 2026ರ ಫೈನಲ್ ಪಂದ್ಯದ ದಿನ ಅಕ್ಷರಶಃ ಒಂದು ಬ್ಯಾಡ್ ಡೇ ಅಂತಾನೇ ಹೇಳಬೇಕು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಫೈನಲ್ ಮ್ಯಾಚ್‌ನಲ್ಲಿ ಆರ್‌ಸಿಬಿ ವಿರುದ್ಧ ಸೋತು ಬೇಸರದಲ್ಲಿದ್ದ ಜಿಟಿ ಆಟಗಾರರಿಗೆ, ಮ್ಯಾಚ್ ಮುಗಿದ ಕೆಲವೇ ಗಂಟೆಗಳಲ್ಲಿ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ.

ಫೈನಲ್ ಪಂದ್ಯ ಮುಗಿಸಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಹೋಟೆಲ್‌ಗೆ ಕರೆದೊಯ್ಯುತ್ತಿದ್ದ ಗುಜರಾತ್ ಟೈಟಾನ್ಸ್ ತಂಡದ ಅಧಿಕೃತ ಬಸ್‌ಗೆ ದಿಢೀರನೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಕೆಲಕಾಲ ರಸ್ತೆಯಲ್ಲೇ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಬಸ್‌ನೊಳಗೆ ಹರಡಿದ ದಟ್ಟ ಹೊಗೆ!

ಸ್ಟೇಡಿಯಂನಿಂದ ಹೋಟೆಲ್‌ಗೆ ಹೊರಟಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ. ನೋಡನೋಡುತ್ತಿದ್ದಂತೆಯೇ ಬಸ್‌ನ ಇಂಜಿನ್ ಭಾಗದಿಂದ ದಟ್ಟವಾದ ಹೊಗೆ ಬರಲು ಆರಂಭಿಸಿದೆ. ಹೊಗೆ ಇಡೀ ಬಸ್‌ನೊಳಗೆ ಆವರಿಸಿಕೊಳ್ಳುತ್ತಿದ್ದಂತೆ ಅಲರ್ಟ್ ಆದ ಸಿಬ್ಬಂದಿ ಮತ್ತು ಆಟಗಾರರು ತಕ್ಷಣವೇ ಬಸ್‌ನಿಂದ ಕೆಳಗೆ ಇಳಿದಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಸ್ ಮಧ್ಯರಸ್ತೆಯಲ್ಲೇ ಕೆಟ್ಟು ನಿಂತಿದೆ.

ಅದೃಷ್ಟವಶಾತ್, ಬೆಂಕಿ ಮತ್ತು ಹೊಗೆ ಜಾಸ್ತಿ ಆಗುವ ಮುನ್ನವೇ ಎಲ್ಲರೂ ಕೆಳಗೆ ಇಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಂಡದ ಎಲ್ಲಾ ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ರಸ್ತೆಯಲ್ಲೇ ನಿಂತು ಕಾಯಬೇಕಾಗಿ ಬಂದ ಆಟಗಾರರು!

ಪಂದ್ಯ ಸೋತ ಬೇಸರದಲ್ಲಿದ್ದ ಶುಭಮನ್ ಗಿಲ್ ಪಡೆಗೆ ಈ ಘಟನೆ ಮತ್ತಷ್ಟು ನಿರಾಸೆ ತಂದಿದೆ. ಬಸ್ ಕೆಟ್ಟು ನಿಂತಿದ್ದರಿಂದ ಅಹಮದಾಬಾದ್‌ನ ರಸ್ತೆಯಲ್ಲೇ ಜಿಟಿ ಆಟಗಾರರು ಮತ್ತು ಕೋಚಿಂಗ್ ಸ್ಟಾಫ್ ಕೆಲಕಾಲ ಕಾಯಬೇಕಾಗಿ ಬಂತು. ತಕ್ಷಣವೇ ಮ್ಯಾನೇಜ್‌ಮೆಂಟ್‌ನವರು ಅಲರ್ಟ್ ಆಗಿ ಆಟಗಾರರಿಗಾಗಿ ಮತ್ತೊಂದು ಪರ್ಯಾಯ ಬಸ್ ವ್ಯವಸ್ಥೆ ಮಾಡಿದ್ದಾರೆ. ಹೊಸ ಬಸ್ ಬಂದ ಮೇಲಷ್ಟೇ ಆಟಗಾರರು ಸುರಕ್ಷಿತವಾಗಿ ಹೋಟೆಲ್ ತಲುಪಿದ್ದಾರೆ. ಅಲ್ಲಿಯವರೆಗೂ ಸ್ಟಾರ್ ಕ್ರಿಕೆಟರ್ಸ್ ರಸ್ತೆಯಲ್ಲೇ ನಿಂತಿದ್ದ ಫೋಟೋಗಳು ಮತ್ತು ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

ಬಿಡುವಿಲ್ಲದ ಪ್ರಯಾಣ, ಜಿಟಿ ಆಟಗಾರರ ಸುಸ್ತು!

ನಿಜ ಹೇಳಬೇಕೆಂದರೆ, ಈ ಬಸ್ ಅವಘಡಕ್ಕೂ ಮುನ್ನವೇ ಗುಜರಾತ್ ಟೈಟಾನ್ಸ್ ತಂಡದ ಟ್ರಾವೆಲ್ ಶೆಡ್ಯೂಲ್ ಸಖತ್ ಬ್ಯುಸಿಯಾಗಿತ್ತು. ಮೇ 27 ರಂದು ಧರ್ಮಶಾಲಾದಿಂದ ಮುಲ್ಲನ್‌ಪುರಕ್ಕೆ ಟ್ರಾವೆಲ್ ಮಾಡಿದ್ದ ಜಿಟಿ, ಮೇ 29 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್-2 ಪಂದ್ಯ ಆಡಿತ್ತು.

ಅಲ್ಲಿಂದ ಮೇ 30 ರಂದು ಅಹಮದಾಬಾದ್‌ಗೆ ಬರಬೇಕಿತ್ತಾದರೂ, ಮುಲ್ಲನ್‌ಪುರದಲ್ಲಿ ಹವಾಮಾನ ವೈಪರೀತ್ಯವಿದ್ದ ಕಾರಣ ಫ್ಲೈಟ್ ತಡವಾಗಿತ್ತು. ಕೊನೆಗೆ ಶನಿವಾರ ತಡರಾತ್ರಿ ಅಷ್ಟೇ ತಂಡ ಅಹಮದಾಬಾದ್‌ ತಲುಪಿತ್ತು. ಹೀಗೆ ಸತತ ಪ್ರಯಾಣದಿಂದ ಸುಸ್ತಾಗಿದ್ದ ಆಟಗಾರರಿಗೆ ಫೈನಲ್ ಸೋಲಿನ ಬೆನ್ನಲ್ಲೇ ಈ ಬಸ್ ಎಡವಟ್ಟು ಎದುರಾಗಿದ್ದು ನಿಜಕ್ಕೂ ಬ್ಯಾಡ್ ಲಕ್.

ಒಟ್ಟಿನಲ್ಲಿ ಆರ್‌ಸಿಬಿ ವಿರುದ್ಧದ ಫೈನಲ್‌ನಲ್ಲಿ 5 ವಿಕೆಟ್‌ಗಳ ಸೋಲು ಕಂಡಿದ್ದ ಗುಜರಾತ್ ಟೈಟಾನ್ಸ್ ತಂಡಕ್ಕೆ, ಈ ಬಸ್ ಅಗ್ನಿ ಅವಘಡ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದ್ರೆ ಯಾರಿಗೂ ಯಾವುದೇ ತೊಂದರೆ ಆಗದೆ ಆಟಗಾರರು ಸೇಫ್ ಆಗಿರೋದು ಸಮಾಧಾನದ ಸಂಗತಿ.

Latest News