ಅಧಿಕೃತವಾಗಿ ಶುರುವಾಯ್ತು ‘ಡಿಕೆಶಿ ಯುಗ’ - ಲೋಕಭವನದಲ್ಲಿ ಸಚಿವರಾಗಿ ಪ್ರತಿಜ್ಞೆಗೈದ 13 ಘಟಾನುಘಟಿ ನಾಯಕರ ಲಿಸ್ಟ್ ಇಲ್ಲಿದೆ!!

ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪರ್ವ ಮುಗಿದ ಬೆನ್ನಲ್ಲೇ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಕೊನೆಗೂ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದ್ದಾರೆ. ಇದರೊಂದಿಗೆ ಕರುನಾಡಿನಲ್ಲಿ ಅಧಿಕೃತವಾಗಿ ‘ಡಿಕೆಶಿ ಯುಗ’ ಆರಂಭವಾದಂತಾಗಿದೆ. ಇನ್ನು ಲೋಕಭವನದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ ಜೊತೆಗೆ ಒಟ್ಟು 13 ಮಂದಿ ಘಟಾನುಘಟಿ ನಾಯಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಗದ್ದುಗೆ ಏರಿದ 'ಕನಕಪುರ ಬಂಡೆ' | Photo Credit: https://x.com/INCKarnataka
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಗದ್ದುಗೆ ಏರಿದ 'ಕನಕಪುರ ಬಂಡೆ' | Photo Credit: https://x.com/INCKarnataka

ಕ್ಯಾಮೆರಾ ಕಣ್ಣುಗಳಲ್ಲಿ ಸೆರೆಯಾಗಿರುವ ಈ ನಾಯಕರ ಪ್ರಮಾಣವಚನ ಸ್ವೀಕಾರದ ಭರ್ಜರಿ ಝಲಕ್ ಹಾಗೂ ಅವರು ಯಾರ ಯಾರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿದರು ಅನ್ನೋ ಇಂಟರೆಸ್ಟಿಂಗ್ ಮ್ಯಾಟರ್ ಇಲ್ಲಿದೆ:

ಜಿ. ಪರಮೇಶ್ವರ್ ಮತ್ತು ಕೆ.ಎಚ್. ಮುನಿಯಪ್ಪ

ರಾಜ್ಯದ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ಈ ಬಾರಿ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸದಾ ಸೌಮ್ಯ ಸ್ವಭಾವದ ಪರಮೇಶ್ವರ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ತಮ್ಮ ಸಂವಿಧಾನದ ಮೇಲಿರುವ ಭಕ್ತಿಯನ್ನು ತೋರಿಸಿದರು. ಇನ್ನು ಅವರ ಬೆನ್ನಲ್ಲೇ ವೇದಿಕೆಗೆ ಬಂದ ಮತ್ತೊಬ್ಬ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರು ದೇವರ ಹೆಸರಿನಲ್ಲಿ ಶ್ರದ್ಧಾಪೂರ್ವಕವಾಗಿ ಆಣೆ ಪ್ರಮಾಣ ಮಾಡಿದರು. ಸದ್ಯಕ್ಕೆ ಈ ಇಬ್ಬರಿಗೂ ಸೇರಿದಂತೆ ಯಾವ ಮಂತ್ರಿಗಳಿಗೂ ಖಾತೆ ಹಂಚಿಕೆ ಆಗಿಲ್ಲ, ಹೈಕಮಾಂಡ್ ಸದ್ಯದಲ್ಲೇ ಲಿಸ್ಟ್ ಬಿಡಲಿದೆ.

ಶರಣ ಪ್ರಕಾಶ್ ಪಾಟೀಲ್ ಹಾಗೂ ಸತೀಶ್ ಜಾರಕಿಹೊಳಿ

ಕಲ್ಯಾಣ ಕರ್ನಾಟಕದ ಪ್ರಭಾವಿ ನಾಯಕ ಡಾ. ಶರಣಪ್ರಕಾಶ್ ಪಾಟೀಲ್ ಅವರು ವೇದಿಕೆಗೆ ಬಂದು ಅತ್ಯಂತ ಗಾಂಭೀರ್ಯದಿಂದ ದೇವರ ಹೆಸರಿನಲ್ಲಿ ಶ್ರದ್ಧಾಪೂರ್ವಕವಾಗಿ ಪ್ರಮಾಣವಚನ ಸ್ವೀಕರಿಸಿದರು. ಇತ್ತ ಬೆಳಗಾವಿ ಸಾಹುಕಾರ್, ಮಾಸ್ ಲೀಡರ್ ಸತೀಶ್ ಜಾರಕಿಹೊಳಿ ಅವರು ಯಾವುದೇ ದೇವರ ಹೆಸರು ಬಳಸದೆ ತಮ್ಮ ಎಂದಿನ ವೈಚಾರಿಕ ಶೈಲಿಯಲ್ಲೇ ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಸ್ವೀಕರಿಸಿದ್ದು ವಿಶೇಷವಾಗಿತ್ತು.

ತಂದೆಯ ಕಾಲಿಗೆ ಬಿದ್ದ ಯತೀಂದ್ರ; ಚನ್ನಬಸಪ್ಪ ದೇವರ ಹೆಸರಲ್ಲಿ ಖಂಡ್ರೆ

ಇವತ್ತಿನ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದ್ದು ಯುವ ನಾಯಕ ಯತೀಂದ್ರ ಸಿದ್ದರಾಮಯ್ಯ! ಹೌದು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದ ಯತೀಂದ್ರ ಈ ಬಾರಿ ಮಂತ್ರಿಯಾಗಿ ಪ್ರಮೋಷನ್ ಪಡೆದಿದ್ದಾರೆ. ಸಂವಿಧಾನ ಮತ್ತು ಶ್ರದ್ಧಾಪೂರ್ವಕವಾಗಿ ಪ್ರಮಾಣವಚನ ಸ್ವೀಕರಿಸಿದ ಯತೀಂದ್ರ, ಮಂತ್ರಿ ಆಗುತ್ತಿದ್ದಂತೆ ನೇರವಾಗಿ ವೇದಿಕೆ ಮುಂಭಾಗದಲ್ಲೇ ಕುಳಿತಿದ್ದ ತಮ್ಮ ತಂದೆ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ಈ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಇನ್ನು ಬೆಂಗಳೂರಿನ ಪ್ರಭಾವಿ ನಾಯಕ ಬೈರತಿ ಸುರೇಶ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಭಾಲ್ಕಿಯ ಧುರಂಧರ ಈಶ್ವರ ಖಂಡ್ರೆ ಅವರು ತಮ್ಮ ಆರಾಧ್ಯ ದೈವ ಚನ್ನಬಸಪ್ಪ ದೇವರ ಹೆಸರಿನಲ್ಲಿ ಶ್ರದ್ಧಾಪೂರ್ವಕವಾಗಿ ಆಣೆ ಮಾಡಿದರು.

ಯು.ಟಿ. ಖಾದರ್ ಮತ್ತು ಪ್ರಿಯಾಂಕ್ ಖರ್ಗೆ

ಕಳೆದ ಬಾರಿ ಸಿದ್ದರಾಮಯ್ಯ ಸರ್ಕಾರದಲ್ಲಿ ವಿಧಾನಸಭಾ ಸ್ಪೀಕರ್ ಆಗಿ ತುಂಬಾ ಕೂಲ್ ಆಗಿ ಸಭೆ ನಡೆಸುತ್ತಿದ್ದ ಯು.ಟಿ. ಖಾದರ್ ಈ ಬಾರಿ ಮಿನಿಸ್ಟರ್ ಆಗಿ ಅಖಾಡಕ್ಕೆ ಇಳಿದಿದ್ದಾರೆ. ಖಾದರ್ ಅವರು ದೇವರ ಹೆಸರಿನಲ್ಲಿ ಶ್ರದ್ಧಾಪೂರ್ವಕವಾಗಿ ಪ್ರಮಾಣವಚನ ಸ್ವೀಕರಿಸಿದರು. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರು ಕೂಡ ಶ್ರದ್ಧಾಪೂರ್ವಕವಾಗಿ ಮಂತ್ರಿಯಾಗಿ ಪ್ರತಿಜ್ಞೆ ಗೈದರು.

ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್ ಮತ್ತು ಕೆ.ಜೆ. ಜಾರ್ಜ್

ಬೆಂಗಳೂರಿನ ಹೈಟೆಕ್ ನಾಯಕ ಕೃಷ್ಣ ಬೈರೇಗೌಡ ಮತ್ತು ಸಾರಿಗೆ ಸಂಸ್ಥೆಯನ್ನು ಮುನ್ನಡೆಸಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಇಬ್ಬರೂ ಕೂಡ ಯಾವುದೇ ದೇವರ ಹೆಸರನ್ನ ಹೇಳದೆ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಶ್ರದ್ಧಾಪೂರ್ವಕವಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನು ಲಿಂಗಾಯತ ಸಮಾಜದ ಪ್ರಭಾವಿ ನಾಯಕ ಎಂ.ಬಿ. ಪಾಟೀಲ್ ಅವರು ಜಗದ್ಗುರು ಬಸವಣ್ಣನವರ ಮತ್ತು ವಿಜಯಪುರದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ಗಮನ ಸೆಳೆದರು. ಕಡೆಯಲ್ಲಿ ಕೆ.ಜೆ. ಜಾರ್ಜ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಒಟ್ಟು 14 ನಾಯಕರ ಸಚಿವ ಸಂಪುಟ ಇವತ್ತು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.

ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅವರ 13 ಜನರ ‘ಟೀಮ್ ಕರ್ನಾಟಕ’ ಇವತ್ತು ಅದ್ಧೂರಿಯಾಗಿ ಅಧಿಕಾರ ವಹಿಸಿಕೊಂಡಿದ್ದು, ಇನ್ನು ಕರುನಾಡಿನ ಜನರಿಗೆ ಇವರು ಎಂತಹ ಆಡಳಿತ ನೀಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ!

Latest News