ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಟಿ. ವೆಂಕಟಾಪುರ ಗ್ರಾಮದಲ್ಲಿ ಆಸ್ತಿ ವಿವಾದವು ನಡುಬೀದಿಯಲ್ಲೇ ದೊಡ್ಡ ಕಾಳಗಕ್ಕೆ ತಿರುಗಿದೆ. ಖಾಲಿ ಜಾಗದಲ್ಲಿ ಎರಡು ಕುಟುಂಬಗಳ ನಡುವೆ ನಡೆದ ವಾಗ್ವಾದವು ಕೊನೆಗೆ ದೊಣ್ಣೆಗಳಿಂದ ಬಡಿದಾಟಕ್ಕೆ ತಿರುಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
ಹೌದು ಖಾಲಿ ಜಾಗದಲ್ಲಿ ದನ ಕಟ್ಟಿ ಹಾಕಿದ್ದಕ್ಕೆ ಆರಂಭವಾದ ಜಗಳವು ತೀವ್ರಗೊಂಡು, ಪರಸ್ಪರ ಹೊಡೆದಾಯಕ್ಕೆ ಕಾರಣವಾಯಿತು. ಜನಿಮಡಗಪ್ಪನ ಮಕ್ಕಳಾದ ಗೋಪಾಲ್ ಮತ್ತು ರಮೇಶ್ ಅವರ ಕುಟುಂಬದ ಮೇಲೆ ಮತ್ತೊಂದು ಕುಟುಂಬದವರು ದಾಳಿ ನಡೆಸಿದ್ದಾರೆಂಬ ಆರೋಪ ಹೊರಬಂದಿದೆ. ರಕ್ತಸಂಬಂಧ ಮರೆತು ದಾಯಾದಿಗಳು ನಡುಬೀದಿಯಲ್ಲೇ ಬಡಿದಾಡಿಕೊಂಡಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ. ವೆಂಕಟರಾಯಪ್ಪ, ಶ್ರೀನಿವಾಸ್, ನಾಗರಾಜ್ ಸೇರಿ ಏಳು ಜನರು ಈ ದಾಳಿಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ದಾಖಲಾಗಿದೆ.
ದೊಣ್ಣೆಗಳಿಂದ ಬಡಿದಾಟ ನಡೆಸಿದ ಘಟನೆ ಸ್ಥಳೀಯರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಹಿಳೆಯರೂ ನಡುರಸ್ತೆಯಲ್ಲೇ ಜುಟ್ಟು ಹಿಡಿದು ಪರಸ್ಪರ ಬಡಿದಾಡಿಕೊಂಡಿರುವ ದೃಶ್ಯಗಳು ನ್ಯೂಸ್ ಫಸ್ಟ್‌ಗೆ ಲಭ್ಯವಾಗಿವೆ. ಹಾಗೆ ಅತ್ತ ಗಾಯಾಳುಗಳು ಆಸ್ಪತ್ರೆಗೆ ದಾಖಲು ಆಗಿದ್ದಾರೆ ಎಂದು ಕೇಳಿ ಬಂದಿದೆ. ಈ ಕಾಳಗದಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಗಾಯಾಳುಗಳ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಕ್ರಮ ಕೂಡ ಆರಂಭ ಆಗಿದ್ದು, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಆಸ್ತಿ ವಿವಾದದಿಂದ ಉಂಟಾದ ಈ ಗಲಾಟೆ ಗ್ರಾಮದಲ್ಲಿ ಶಾಂತಿ ಭಂಗಕ್ಕೆ ಕಾರಣವಾಗಿರುವುದರಿಂದ, ಪೊಲೀಸರು ಹೆಚ್ಚುವರಿ ಎಚ್ಚರಿಕೆ ವಹಿಸಿದ್ದಾರೆ. ಗ್ರಾಮಸ್ಥರು ಕುಟುಂಬದವರೇ ಪರಸ್ಪರ ಕೈ ಕೈ ಮಿಲಾಯಿಸಿ ಜಗಳ ನಡೆಸಿರುವುದನ್ನು ಖಂಡಿಸಿದ್ದಾರೆ. ಆಸ್ತಿ ವಿವಾದವನ್ನು ಕಾನೂನುಬಾಹಿರವಾಗಿ ಬಗೆಹರಿಸಲು ಪ್ರಯತ್ನಿಸುವ ಬದಲು, ನ್ಯಾಯಾಲಯದ ಮೂಲಕ ಪರಿಹಾರ ಹುಡುಕಬೇಕೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿ. ವೆಂಕಟಾಪುರ ಗ್ರಾಮದಲ್ಲಿ ನಡೆದ ಈ ಘಟನೆ, ಆಸ್ತಿ ವಿವಾದಗಳು ಹೇಗೆ ಕುಟುಂಬ ಸಂಬಂಧಗಳನ್ನು ಹಾಳುಮಾಡುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ. ದಾಯಾದಿಗಳ ನಡುವಿನ ಕಾಳಗವು ಕಾನೂನು ಕ್ರಮಕ್ಕೆ ತಿರುಗಿದ್ದು, ಪೊಲೀಸರು ಶಾಂತಿ ಕಾಪಾಡಲು ಕ್ರಮ ಕೈಗೊಂಡಿದ್ದಾರೆ. ಸಮಾಜದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನುಬದ್ಧ ಪರಿಹಾರವನ್ನು ಹುಡುಕುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಬಹುದು.