ಚೆನ್ನೈನ ವಡಪಳನಿ ಎಂಬಲ್ಲಿ ಇತ್ತೀಚೆಗೆ ನಡೆದ ಒಂದು ದಾರುಣ ಘಟನೆಯು ಎಲ್ಲರನ್ನೂ ಆಘಾತಕ್ಕೀಡು ಮಾಡಿದೆ. ಮಗಳ ಮದುವೆಯಾಗುತ್ತಿಲ್ಲ ಎಂಬ ತೀವ್ರ ಮಾನಸಿಕ ವೇದನೆಯಿಂದ ನೊಂದ ತಂದೆಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂದೆಯ ಸಾವನ್ನು ಕಂಡು ತೀವ್ರ ಮನನೊಂದ ಮಗಳು ಕೂಡ ನೇಣು ಹಾಕಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಮೃತಪಟ್ಟವರನ್ನು 57 ವರ್ಷದ ಆಟೋ ಚಾಲಕ ಕೃಷ್ಣಕುಮಾರ್ ಮತ್ತು ಅವರ 30 ವರ್ಷದ ಮಗಳು ಪಾಕ್ಯಾ ಎಂದು ಗುರುತಿಸಲಾಗಿದೆ.
ಕೃಷ್ಣಕುಮಾರ್ ಅವರು ವಡಪಳನಿಯ ಗಂಗೈಯಮ್ಮನ್ ದೇವಸ್ಥಾನದ ಸಮೀಪದ ನಿವಾಸಿ. ಇವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣಕುಮಾರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಹಿರಿಯ ಮಗಳಾದ ಬೃಂದಾ ಅವರಿಗೆ ಮದುವೆಯಾಗಿದ್ದು, ಅವರು ಅಂಬತ್ತೂರಿನಲ್ಲಿ ತಮ್ಮ ಪತಿಯೊಂದಿಗೆ ವಾಸಿಸುತ್ತಿದ್ದಾರೆ.
ಆದರೆ, ಕಿರಿಯ ಮಗಳಾದ 30 ವರ್ಷದ ಪಾಕ್ಯಾ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಮಗಳ ವಯಸ್ಸು ಮೀರುತ್ತಿದ್ದರೂ ಮದುವೆ ಸಂಬಂಧ ಕೂಡಿ ಬರುತ್ತಿರಲಿಲ್ಲ. ಈ ವಿಷಯವನ್ನು ಕೃಷ್ಣಕುಮಾರ್ ಅವರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದರು. ಮಗಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಅವರು, ಇದೇ ವಿಚಾರವಾಗಿ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದರು ಎಂದು ತಿಳಿದುಬಂದಿದೆ.
ಮಗಳ ಮದುವೆಯ ಚಿಂತೆಯೇ ಕೃಷ್ಣಕುಮಾರ್ ಅವರ ಸಾವಿಗೆ ಕಾರಣವಾಯಿತು ಎನ್ನಲಾಗಿದೆ. ಒಂದು ದಿನ ಅವರು ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ, ಕೃಷ್ಣಕುಮಾರ್ ಮನೆಗೆ ಬಾರದಿದ್ದನ್ನು ಗಮನಿಸಿದ ಕುಟುಂಬಸ್ಥರು ಹುಡುಕಾಟ ನಡೆಸಿದ್ದು. ಈ ವೇಳೆ ಬಾವಿಯ ಬಳಿ ಹೋಗಿ ನೋಡಿದಾಗ ಕೃಷ್ಣಕುಮಾರ್ ಅವರು ಮೃತಪಟ್ಟಿದ್ದು ಕಂಡುಬಂದಿದೆ. ತಂದೆಯ ಶವವನ್ನು ಕಂಡ ಪಾಕ್ಯಾ ಅವರು ಆಘಾತಕ್ಕೆ ಒಳಗಾದರು. ತಂದೆಯ ಸಾವನ್ನು ಸಹಿಸಿಕೊಳ್ಳಲಾಗದ ಆಕೆ, ಕೂಡಲೇ ಮನೆಗೆ ಬಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಂದೆ ಮತ್ತು ಮಗಳು ಇಬ್ಬರೂ ಒಂದೇ ದಿನ ಸಾವನ್ನಪ್ಪಿದ್ದು ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕೇವಲ ಮದುವೆಯ ಚಿಂತೆಯಿಂದಾಗಿ ಇಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದು ಇದು ಎಂತಹ ದುರಂತ. ಕೃಷ್ಣಕುಮಾರ್ ಅವರ ಕುಟುಂಬದವರಿಗೆ ಈ ಸಾವು ಅರಗಿಸಿಕೊಳ್ಳಲಾಗದ ನೋವನ್ನು ನೀಡಿದೆ. ಇಂತಹ ಕಠಿಣ ಸಮಯಗಳಲ್ಲಿ ಧೈರ್ಯದಿಂದ ಬದುಕುವುದು ಮುಖ್ಯವೇ ಹೊರತು, ಇಂತಹ ನಿರ್ಧಾರಗಳು ಕುಟುಂಬವನ್ನು ನಾಶ ಮಾಡುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.