ಬೆಂಗಳೂರಿನಲ್ಲಿ ದೇಶದ ಮೊದಲ ‘ಡಬಲ್ ಡೆಕ್ಕರ್’ ಮ್ಯಾಜಿಕ್ - ಒಂದೇ ದಾರಿಯಲ್ಲಿ ಮೆಟ್ರೋ, ಸಬರ್ಬನ್ ರೈಲು!!

ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡಲು ಸರ್ಕಾರ ಮತ್ತು ಎಂಜಿನಿಯರ್‌ಗಳು ಸೇರಿ ಸೂಪರ್ ಪ್ಲಾನ್ ಒಂದನ್ನು ರೆಡಿ ಮಾಡಿದ್ದಾರೆ. ಪೂರ್ವ ಬೆಂಗಳೂರಿನ ಬೆನ್ನಿಗಾನಹಳ್ಳಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ ‘ಡಬಲ್ ಡೆಕ್ಕರ್’ ಸಾರಿಗೆ ವ್ಯವಸ್ಥೆ ಜಾರಿಗೆ ಬರ್ತಾ ಇದೆ! ಇದರ ಸ್ಪೆಷಾಲಿಟಿ ಏನಪ್ಪಾ ಅಂದ್ರೆ, ಒಂದೇ ಮಾರ್ಗದಲ್ಲಿ, ಒಂದೇ ಪಿಲ್ಲರ್ ಬೇಸ್ ಮೇಲ್ಭಾಗದಲ್ಲಿ ನಮ್ಮ ಮೆಟ್ರೋ ಓಡಿದರೆ, ಅದರ ಕೆಳಭಾಗದಲ್ಲೇ ಬೆಂಗಳೂರು ಉಪನಗರ (ಸಬರ್ಬನ್) ರೈಲು ಕೂಡ ಸಂಚರಿಸಲಿದೆ. ಈ ಒನ್-ಪ್ಲಸ್-ಒನ್ ಆಫರ್ ತರಹದ ಐಡಿಯಾದಿಂದಾಗಿ ಸರ್ಕಾರಕ್ಕೆ ಬರೋಬ್ಬರಿ 169 ಕೋಟಿ ರೂಪಾಯಿ ಸಾರ್ವಜನಿಕ ಹಣ ಉಳಿತಾಯವಾಗಿದೆ!

₹169 ಕೋಟಿ ಉಳಿಸಿದ ಸೂಪರ್ ಐಡಿಯಾ | Photo Credit: AI
₹169 ಕೋಟಿ ಉಳಿಸಿದ ಸೂಪರ್ ಐಡಿಯಾ | Photo Credit: AI

ಬೆನ್ನಿಗಾನಹಳ್ಳಿಯಲ್ಲಿ ನಡೆಯಲಿದೆ ಈ ತಾಂತ್ರಿಕ ಪವಾಡ

ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (K-RIDE) ನೀಡಿರುವ ಲೇಟೆಸ್ಟ್ ಮಾಹಿತಿ ಪ್ರಕಾರ, ಬೆನ್ನಿಗಾನಹಳ್ಳಿ ಫ್ಲೈಓವರ್ ಬಳಿ ಸುಮಾರು 500 ಮೀಟರ್‌ಗಳವರೆಗೆ ಈ ಜಂಟಿ ಕಾರ್ಯಾಚರಣೆ ನಡೆಯಲಿದೆ. ಸಬರ್ಬನ್ ರೈಲಿನ ‘ಕನಕ ಲೈನ್’ ಮೇಲ್ಸೇತುವೆಯು, ನಮ್ಮ ಮೆಟ್ರೋದ ‘ಬ್ಲೂ ಲೈನ್’ ಮೇಲ್ಸೇತುವೆಯ ಕೆಳಭಾಗದಲ್ಲೇ ನೇರವಾಗಿ ಹಾದುಹೋಗಲಿದೆ.

ಒಂದೇ ಜಾಗದಲ್ಲಿ ಎರಡು ಬೇರೆ ಬೇರೆ ಪಿಲ್ಲರ್ ಹಾಕಿ ಟ್ರಾಫಿಕ್ ಜಾಮ್ ಮಾಡುವುದನ್ನು ತಪ್ಪಿಸಲು ಈ ಮಾದರಿ ಕಂಡುಹಿಡಿಯಲಾಗಿದೆ. ಇಲ್ಲಿ ಉಪನಗರ ರೈಲಿನ ಕನಕ ಲೈನ್ ಹೀಲಳಿಗೆಯಿಂದ ರಾಜಾನುಕುಂಟೆಗೆ (46 ಕಿ.ಮೀ) ಕನೆಕ್ಟ್ ಆದರೆ, ಮೆಟ್ರೋ ಬ್ಲೂ ಲೈನ್ ಕೆ.ಆರ್. ಪುರದಿಂದ ನೇರವಾಗಿ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ಗೆ ಜನರನ್ನು ಕರೆದೊಯ್ಯಲಿದೆ.

600 ಕ್ಕೂ ಹೆಚ್ಚು ನಿವಾಸಿಗಳ ಮನೆಗಳು ಸೇಫ್

ಈ ಹೊಸ ತಂತ್ರಜ್ಞಾನದಿಂದ ಬೆಂಗಳೂರಿನ ಅತ್ಯಂತ ದುಬಾರಿ ಏರಿಯಾದಲ್ಲಿ ಮಾಡಬೇಕಾಗಿದ್ದ ಸುಮಾರು 1.65 ಎಕರೆ ಭೂಸ್ವಾಧೀನ (Land Acquisition) ಪ್ರಕ್ರಿಯೆಯನ್ನು ಕೈ ಬಿಡಲಾಗಿದೆ. ಒಂದು ವೇಳೆ ಹಠ ಹಿಡಿದು ಎರಡು ಬೇರೆ ಬೇರೆ ಟ್ರ್ಯಾಕ್ ಮಾಡಿದ್ದರೆ, ಆ ಜಾಗದಲ್ಲಿದ್ದ 600 ಕ್ಕೂ ಹೆಚ್ಚು ನಿವಾಸಿಗಳು ತಮ್ಮ ಮನೆ, ಆಸ್ತಿ ಕಳೆದುಕೊಂಡು ಬೀದಿಗೆ ಬರಬೇಕಾಗುತ್ತಿತ್ತು.

ಆದರೆ ಎಂಜಿನಿಯರ್‌ಗಳ ಈ ಸೂಪರ್ ಐಡಿಯಾದಿಂದಾಗಿ ಜನರ ಮನೆಗಳೂ ಉಳಿದಿವೆ, ಜೊತೆಗೆ ಭೂಸ್ವಾಧೀನದ ವೆಚ್ಚ ಸೇರಿ ಅಂದಾಜು 150 ಕೋಟಿಯಿಂದ 169 ಕೋಟಿ ರೂಪಾಯಿಗಳಷ್ಟು ಹಣ ಸರ್ಕಾರದ ಖಜಾನೆಯಲ್ಲೇ ಉಳಿದುಕೊಂಡಿದೆ ಎಂದು ಕೆ-ರೈಡ್ ಹೆಮ್ಮೆಯಿಂದ ಹೇಳಿಕೊಂಡಿದೆ.

ಎಂಜಿನಿಯರ್‌ಗಳಿಗೆ ಇತ್ತೊಂದು ಬಿಗ್ ಚಾಲೆಂಜ್

ಯೋಜನೆ ಕೇಳಲು ಸಖತ್ ಈಸಿಯಾಗಿ ಕಂಡರೂ, ಇದನ್ನು ರಿಯಾಲಿಟಿಗೆ ತರುವುದು ಎಂಜಿನಿಯರ್‌ಗಳಿಗೆ ಸಾಧಾರಣ ಕೆಲಸವಾಗಿರಲಿಲ್ಲ. ಯಾಕಂದ್ರೆ, ಸಬರ್ಬನ್ ರೈಲು ಓಡಲು 'ಆಲ್ಟರ್ನೇಟಿಂಗ್ ಕರೆಂಟ್' (AC) ಪವರ್ ಬಳಸಿದರೆ, ನಮ್ಮ ಮೆಟ್ರೋ ಚಲಿಸುವುದು 'ಡೈರೆಕ್ಟ್ ಕರೆಂಟ್' (DC) ತಂತ್ರಜ್ಞಾನದಲ್ಲಿ.

ಒಂದೇ ಪಿಲ್ಲರ್‌ನಲ್ಲಿ ಈ ಎರಡು ವಿಭಿನ್ನ ವಿದ್ಯುತ್ ಶಕ್ತಿ ವ್ಯವಸ್ಥೆಗಳನ್ನು ಸಂಯೋಜಿಸುವುದು ಮತ್ತು ಯಾವುದೇ ಶಾರ್ಟ್ ಸರ್ಕ್ಯೂಟ್ ಆಗದಂತೆ ತಡೆಯುವುದು ದೊಡ್ಡ ಸವಾಲಾಗಿತ್ತು. ಆದರೆ ನಮ್ಮ ಬೆಂಗಳೂರಿನ ಹೆಮ್ಮೆಯ 'ಭಾರತೀಯ ವಿಜ್ಞಾನ ಸಂಸ್ಥೆ' (IISc) ಈ ಎರಡೂ ತಾಂತ್ರಿಕ ಸುರಕ್ಷತೆಯನ್ನು ಕೂಲಂಕಷವಾಗಿ ಚೆಕ್ ಮಾಡಿ, ಗ್ರೀನ್ ಸಿಗ್ನಲ್ ನೀಡಿದೆ.

ಇಡೀ ದೇಶಕ್ಕೇ ಮಾದರಿ ನಮ್ಮ ಬೆಂಗಳೂರು

ಜಾಗದ ಅಭಾವವಿರುವ ಮತ್ತು ಜನಸಂಖ್ಯೆ ಹೆಚ್ಚಿರು ಉದ್ಯಾನ ನಗರಿ ಬೆಂಗಳೂರಿಗೆ ಈ 'ಡಬಲ್ ಡೆಕ್ಕರ್Shared Alignment' ಮಾದರಿ ದೊಡ್ಡ ವರದಾನವಾಗಿದೆ. ಭವಿಷ್ಯದಲ್ಲಿ ಮುಂಬೈ, ದೆಹಲಿ, ಚೆನ್ನೈನಂತಹ ಇತರೆ ಪ್ರಮುಖ ಮೆಟ್ರೋ ಸಿಟಿಗಳಿಗೂ ಬೆಂಗಳೂರಿನ ಈ ಅತ್ಯಾಧುನಿಕ ಐಡಿಯಾವೇ ದಾರಿ ದೀಪವಾಗಲಿದೆ ಎಂದು ತಜ್ಞರು ಹೇಳ್ತಿದ್ದಾರೆ.

Latest News