ಇಷ್ಟರಲ್ಲೇ ಬದಲಾವಣೆ ಕಾಣಲಿದೆ ಸಿಲ್ಕ್ ಬೋರ್ಡ್ ಜಂಕ್ಷನ್ - ವಾಹನ ಸವಾರರು ತಪ್ಪದೇ ತಿಳಿದುಕೊಳ್ಳುವ ವಿಷಯ!

ಬೆಂಗಳೂರಿನ ವಾಹನ ಸವಾರರಿಗೆ ಮಹತ್ವದ ಸುದ್ದಿ ಸಿಕ್ಕಿದೆ. ನಗರದ ಟ್ರಾಫಿಕ್ ಸಮಸ್ಯೆ ಎಂದರೆ ಮೊದಲಿಗೆ ನೆನಪಾಗುವುದು ಅದು ಸಿಲ್ಕ್ ಬೋರ್ಡ್ ಜಂಕ್ಷನ್. ಇಲ್ಲಿ ಹೆಚ್ಚು ಗಂಟೆಗಟ್ಟಲೆ ವಾಹನಗಳು ನಿಂತುಕೊಂಡಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತದೆ. ಕಿಲೋಮೀಟರ್ ಉದ್ದದ ವಾಹನಗಳ ಸಾಲು, ಹಾರ್ನ್ ಸದ್ದು ಮತ್ತು ಧೂಳಿನ ನಡುವೆ ಜನರು ಪ್ರತಿದಿನ ಸಂಕಷ್ಟ ಅನುಭವಿಸುತ್ತಿದ್ದರು. ಆದರೆ ಇದೀಗ ಈ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ.

ಬೆಂಗಳೂರಿನ ವಾಹನ ಸವಾರರಿಗೆ ಸಿಹಿ ಸುದ್ದಿ!!
ಬೆಂಗಳೂರಿನ ವಾಹನ ಸವಾರರಿಗೆ ಸಿಹಿ ಸುದ್ದಿ!!

ಸಿಲ್ಕ್ ಬೋರ್ಡ್ ಪ್ರದೇಶವು ಹಲವು ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಜಂಕ್ಷನ್ ಆಗಿದೆ. ಐಟಿ ಕಂಪನಿಗಳು, ಕೈಗಾರಿಕಾ ಪ್ರದೇಶಗಳು ಮತ್ತು ಪ್ರಮುಖ ವಸತಿ ಪ್ರದೇಶಗಳಿಗೆ ಸಂಪರ್ಕ ಇರುವುದರಿಂದ ಇಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಪೀಕ್ ಅವರ್ ಸಮಯದಲ್ಲಿ ಇಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿತ್ತು. ಹಲವಾರು ವರ್ಷಗಳಿಂದ ವಾಹನ ಸವಾರರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸುತ್ತಿದ್ದರು.

ಈ ಹಿನ್ನೆಲೆಯಲ್ಲೇ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಮೊದಲು ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ಮಾರ್ಗವನ್ನು 2024ರ ಜುಲೈ ತಿಂಗಳಲ್ಲಿ ಸಾರ್ವಜನಿಕ ಬಳಕೆಗೆ ತೆರೆದಿದ್ದರು. ಇದರಿಂದ ಸ್ವಲ್ಪ ಮಟ್ಟಿಗೆ ಟ್ರಾಫಿಕ್ ಕಡಿಮೆಯಾಗಿತ್ತು. ಆದರೆ ಸಿಲ್ಕ್ ಬೋರ್ಡ್‌ನಿಂದ 'ರಾಗಿಗುಡ್ಡ' ಕಡೆಗೆ ಹೋಗುವ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಹೀಗಾಗಿ ಎರಡೂ ದಿಕ್ಕಿನ ಸಂಚಾರ ಸುಗಮವಾಗಿರಲಿಲ್ಲ.

ಇದೀಗ ಇನ್ನೊಂದು ಬದಿಯ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದೆ. ಫೆಬ್ರವರಿ ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸುಮಾರು 5 ಕಿಲೋಮೀಟರ್ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ ಸಂಪೂರ್ಣವಾಗಿ ವಾಹನ ಸವಾರರಿಗೆ ಲಭ್ಯವಾಗಲಿದೆ. ಇದರಿಂದ ಎರಡೂ ದಿಕ್ಕಿನ ಸಂಚಾರ ಸುಗಮವಾಗುವ ಸಾಧ್ಯತೆ ಇದೆ.

ಈ ಮಹತ್ವದ ಯೋಜನೆಗೆ ಸುಮಾರು 449 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ನಗರದ ಅತಿ ಬ್ಯುಸಿ ಜಂಕ್ಷನ್‌ಗಳಲ್ಲಿ ಒಂದಾದ ಸಿಲ್ಕ್ ಬೋರ್ಡ್ ಬಳಿ ಸಂಚಾರದ ಒತ್ತಡವನ್ನು ಕಡಿಮೆ ಮಾಡಲು ಈ ಯೋಜನೆ ರೂಪಿಸಲಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಈ ಭಾಗದಲ್ಲಿ ಮೇಲ್ಸೇತುವೆ ಕಾರ್ಯಾರಂಭವಾದರೆ ಟ್ರಾಫಿಕ್ ಜಾಮ್ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ಮೂಡಿದೆ.

ಡಬಲ್ ಡೆಕ್ಕರ್ ಫ್ಲೈಓವರ್‌ನ ವಿಶೇಷತೆ ಏನೆಂದರೆ, ಒಂದೇ ಮೇಲ್ಸೇತುವೆಯಲ್ಲಿ ಎರಡು ಹಂತಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಕೆಳಮಟ್ಟದ ರಸ್ತೆಗಳಲ್ಲಿ ಸಂಚಾರದ ಒತ್ತಡ ಕಡಿಮೆಯಾಗುತ್ತದೆ. ಕೇವಲ ಕೆಲವೇ ನಿಮಿಷಗಳಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತಲುಪುವಂತಾಗುತ್ತದೆ. ಐಟಿ ಉದ್ಯೋಗಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ಇದು ದೊಡ್ಡ ರಿಲೀಫ್ ಆಗಬಹುದು, ಜೊತೆಗೆ ಆಗುತ್ತೆ ಕೂಡ. 

ಇದೀಗ ಸಿಲ್ಕ್ ಬೋರ್ಡ್ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆ ಹೆಚ್ಚಾಗಿದೆ. ವರ್ಷಗಳಿಂದ ಒದ್ದಾಡುತ್ತಿದ್ದ ವಾಹನ ಸವಾರರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವ ದಿನಗಳು ಸಮೀಪದಲ್ಲಿವೆ. ಎರಡೂ ದಿಕ್ಕಿನ ಸಂಚಾರ ಆರಂಭವಾದ ಬಳಿಕ ಟ್ರಾಫಿಕ್ ಜಾಮ್ ಬಹುತೇಕ ಕಡಿಮೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಜನರು ಈ ಯೋಜನೆ ಪೂರ್ಣಗೊಳ್ಳುವ ದಿನಕ್ಕಾಗಿ ಆತುರದಿಂದ ಕಾಯುತ್ತಿದ್ದಾರೆ.

Latest News