ಯೆಲ್ಲೋ ಲೈನ್‌ನಲ್ಲಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಸಂತಸದ ಸುದ್ದಿ ದೊರೆತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಅಧಿಕೃತವಾಗಿ ಮಹತ್ವದ ಪ್ರಕಟಣೆ ಹೊರಡಿಸಿದ್ದು, ನಾಳೆಯಿಂದ ಯೆಲ್ಲೋ ಲೈನ್‌ಗೆ ಎಂಟನೇ ಮೆಟ್ರೋ ರೈಲು ಸೇರ್ಪಡೆಯಾಗಲಿದೆ ಎಂದು ತಿಳಿಸಿದೆ. ಇದರಿಂದಾಗಿ ಮೆಟ್ರೋ ಸೇವೆಯಲ್ಲಿ ಗಮನಾರ್ಹ ಸುಧಾರಣೆ ಆಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯೆಲ್ಲೋ ಮಾರ್ಗದಲ್ಲಿ ಏಳು ರೈಲುಗಳೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ. ಪೀಕ್ ಅವರ್ ಸಮಯದಲ್ಲಿ, ಅಂದರೆ ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ವೇಳೆಯಲ್ಲಿ, ರೈಲುಗಳ ಮಧ್ಯದ ಅಂತರ ಸುಮಾರು 10 ನಿಮಿಷಗಳಾಗಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್ಸಿಎಲ್ ಈ ನಿರ್ಧಾರ ಕೈಗೊಂಡಿದೆ. ಹೊಸ ರೈಲು ಸೇರ್ಪಡೆಯಾದ ನಂತರ ಪೀಕ್ ಅವರ್ ಸಮಯದಲ್ಲಿ ರೈಲುಗಳು ಕೇವಲ 9 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ. ಇದರಿಂದ ಪ್ರಯಾಣಿಕರಿಗೆ ನಿರೀಕ್ಷೆಯ ಸಮಯ ಕಡಿಮೆಯಾಗಲಿದೆ.
ನಾನ್-ಪೀಕ್ ಅವಧಿಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಸದ್ಯ ಆ ವೇಳೆಯಲ್ಲಿ ರೈಲುಗಳ ಅಂತರ 18 ನಿಮಿಷಗಳಾಗಿದೆ. ಆದರೆ ಎಂಟನೇ ರೈಲು ಸೇರ್ಪಡೆಯಿಂದ ಈ ಅಂತರವನ್ನು 14 ನಿಮಿಷಗಳಿಗೆ ಇಳಿಸಲಾಗುತ್ತಿದೆ. ದಿನದ ಎಲ್ಲಾ ಸಮಯದಲ್ಲೂ ಸೇವೆ ಸ್ವಲ್ಪ ಹೆಚ್ಚು ಸುಗಮವಾಗಲಿದೆ.
ಸೋಮವಾರದಿಂದ ಶನಿವಾರದವರೆಗೆ ಪೀಕ್ ಅವರ್ ಸಮಯದಲ್ಲಿ 9 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುವುದಾಗಿ ಪ್ರಕಟಣೆ ತಿಳಿಸಿದೆ. ಆದರೆ ಭಾನುವಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಭಾನುವಾರ ಸಾಮಾನ್ಯವಾಗಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ಹಳೆಯ ವೇಳಾಪಟ್ಟಿಯೇ ಮುಂದುವರಿಯಲಿದೆ.
ಇದೇ ರೀತಿ ದಿನದ ಮೊದಲನೆಯ ರೈಲು ಮತ್ತು ಕೊನೆಯ ರೈಲಿನ ಸಮಯದಲ್ಲೂ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈಗಿರುವ ಸಮಯಪಟ್ಟಿಯೇ ಮುಂದುವರಿಯಲಿದೆ ಎಂದು ಬಿಎಂಆರ್ಸಿಎಲ್ ಸ್ಪಷ್ಟಪಡಿಸಿದೆ. ಹೀಗಾಗಿ ಪ್ರಯಾಣಿಕರು ತಮ್ಮ ದಿನಚರಿಯಲ್ಲಿ ಯಾವುದೇ ಗೊಂದಲಕ್ಕೀಡಾಗುವ ಅಗತ್ಯವಿಲ್ಲ.
ಯೆಲ್ಲೋ ಲೈನ್ ಆರಂಭವಾದ ನಂತರದಿಂದ ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಐಟಿ ಉದ್ಯೋಗಿಗಳು, ಕೈಗಾರಿಕಾ ಪ್ರದೇಶಗಳಿಗೆ ತೆರಳುವವರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗವನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವುದು ಅಗತ್ಯವಾಗಿತ್ತು ಎಂದು ಅಧಿಕಾರಿಗಳು ತೀಳಿಸಿದ್ದಾರೆ.
ಎಂಟನೇ ರೈಲು ಸೇರ್ಪಡೆಯಿಂದ ಯೆಲ್ಲೋ ಲೈನ್ ಸೇವೆ ಮತ್ತಷ್ಟು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲಿದ್ದು, ಪ್ರಯಾಣಿಕರ ನಿರೀಕ್ಷೆಯ ಸಮಯ ಕಡಿಮೆಯಾಗುವುದು ಮಾತ್ರವಲ್ಲ, ಗಿಡುಗುಡಿದ ಜನಸಂದಣಿ ಕೂಡ ಸ್ವಲ್ಪ ಮಟ್ಟಿಗೆ ಇಳಿಯುವ ಸಾಧ್ಯತೆ ಇದೆ. ಬಿಎಂಆರ್ಸಿಎಲ್ ಕೈಗೊಂಡ ಈ ಕ್ರಮವನ್ನು ಪ್ರಯಾಣಿಕರು ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ನಿರೀಕ್ಷಿಸುತ್ತಿದ್ದಾರೆ.