ನಮ್ಮ ಬೆಂಗಳೂರಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ನೋಡಿ ನಮಗೆಲ್ಲಾ ಸಾಕಾಗಿರುತ್ತೆ. ಆದರೆ ಮಾರ್ಚ್ 22ರ ಬೆಳಗಿನ ಜಾವ ಅನಿಲ್ ಕುಂಬ್ಳೆ ಸರ್ಕಲ್ ಹತ್ತಿರ ನಡೆದಿದ್ದೇ ಬೇರೆ. ಒಂದು ಬಿಳಿ ಬಣ್ಣದ ಐಷಾರಾಮಿ ಲ್ಯಾಂಬೋರ್ಗಿನಿ ಹುರಾಕನ್ (Lamborghini Huracan) ಕಾರ್ ಮಾಡಿದ ಹೈ-ಸ್ಪೀಡ್ ಡ್ರಿಫ್ಟ್ ಮತ್ತು ಅದರ ಟೈರ್ ಸದ್ದು ಈಗ ದೊಡ್ಡ ಸುದ್ದಿಯಾಗಿದೆ. ಆದರೆ ಈ ಪ್ರಕರಣಕ್ಕೆ ಈಗ ಸಿಕ್ಕಿರೋ ಟ್ವಿಸ್ಟ್ ಕೇಳಿದ್ರೆ ನೀವು ನಕ್ಕುನಕ್ಕು ಸುಸ್ತಾಗೋದು ಗ್ಯಾರಂಟಿ. ಅದೇನೆಂದು ನೋಡೋಣ ಬನ್ನಿ.
ಮಾರ್ಚ್ 22ರ ಮುಂಜಾನೆ ರಿಕ್ಕಿ ರೈ ಎಂಬುವವರ ಈ ಲ್ಯಾಂಬೋರ್ಗಿನಿ ಕಾರ್ ಸಖತ್ ಸ್ಪೀಡ್‌ನಲ್ಲಿ ಬಂದು ಅನಿಲ್ ಕುಂಬ್ಳೆ ಸರ್ಕಲ್ ಹತ್ತಿರ ಡ್ರಿಫ್ಟ್ ಮಾಡಲು ಶುರು ಮಾಡಿದೆ. ಟೈರ್‌ನಿಂದ ಹೊಗೆ ಬರುತ್ತಿದ್ದರೂ, ಕಾರಿನ ಸನ್‌ರೂಫ್‌ನಿಂದ ಇಬ್ಬರು ಎದ್ದು ನಿಂತು ಶಿಳ್ಳೆ ಹೊಡೆಯುತ್ತಾ ಎಂಜಾಯ್ ಮಾಡ್ತಿದ್ರು. ಇದರ ವಿಡಿಯೋ ವೈರಲ್ ಆಗ್ತಿದ್ದಂತೆ ಬೆಂಗಳೂರು ಪೊಲೀಸರು ಅಲರ್ಟ್ ಆಗಿ, ಕಾರನ್ನು ಸೀಜ್ ಮಾಡಿದ್ದಲ್ಲದೆ ರಶ್ ಡ್ರೈವಿಂಗ್ ಕೇಸ್ ಕೂಡ ಹಾಕಿದ್ರು. ಮಾರ್ಚ್ 24ರ ವೇಳೆಗೆ ಕೋರ್ಟ್ ಆರೋಪಿಗಳಿಗೆ ಜಾಮೀನು ಕೂಡ ನೀಡಿದೆ.
ಈ ಕೇಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಆರೋಪಿ ಪರ ವಕೀಲರ ವಾದ. ಅವರು ಕೋರ್ಟ್‌ನಲ್ಲಿ ಹೇಳಿದ್ದೇನು ಗೊತ್ತಾ? "ನನ್ನ ಕಕ್ಷಿದಾರರು ಬೇಕಂತಲೇ ಡ್ರಿಫ್ಟ್ ಮಾಡಿಲ್ಲ. ಬೆಂಗಳೂರಿನ ರಸ್ತೆಯಲ್ಲಿ ಯಾವುದೋ ಅಡೆತಡೆ ಎದುರಾದಾಗ ಕಾರ್ ಸ್ಕಿಡ್ ಆಯ್ತು. ನಮ್ಮ ಡ್ರೈವರ್ ಅಷ್ಟು ವೇಗದಲ್ಲೂ ಕಾರ್ ಕಂಟ್ರೋಲ್ ಮಾಡಿದ್ದು ಅವರ ಸ್ಕಿಲ್ (ಕೌಶಲ್ಯ) ತೋರಿಸುತ್ತೆ ಅಷ್ಟೇ, ಎಂದಿದ್ದಾರೆ. ಅದು ಅಪಾಯಕಾರಿ ಡ್ರಿಫ್ಟ್ ಅಲ್ಲ, ಬದಲಾಗಿ ರಸ್ತೆಯಲ್ಲಿರೋ ಗುಂಡಿ ಅಥವಾ ಅಡೆತಡೆಯಿಂದ ತಪ್ಪಿಸಿಕೊಳ್ಳುವಾಗ ಆದ 'ಚಾಣಾಕ್ಷತನದ ಸ್ಕಿಡ್' ಅನ್ನೋದು ಅವರ ವಾದ.
ವಕೀಲರ ಈ ವಾದ ಕೇಳಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿ ಜನ ಸುಮ್ಮನಿರುತ್ತಾರಾ? ಅಬ್ಬಬ್ಬಾ, ಏನೆಲ್ಲಾ ಕಮೆಂಟ್ಸ್ ಬರ್ತಿವೆ ನೋಡಿ. 'ಬೆಂಗಳೂರು ಗುಂಡಿಗಳು ಡ್ರಿಫ್ಟ್ ಟ್ರ್ಯಾಕ್ ತರಾನೇ ಇವೆ' ಅಂತ ಒಬ್ಬರು ಅಂದ್ರೆ, 'ಇಷ್ಟು ಬುದ್ಧಿವಂತ ವಕೀಲರನ್ನು ನಾನು ಎಲ್ಲೂ ನೋಡಿಲ್ಲ' ಅಂತ ಇನ್ನೊಬ್ಬರು ಕಾಲೆಳೆದಿದ್ದಾರೆ.
ಬೆಂಗಳೂರಿನ ರಸ್ತೆ ಗುಂಡಿಗಳಿಂದ ತಪ್ಪಿಸಿಕೊಳ್ಳೋಕೆ ಇನ್ನು ಮುಂದೆ ಎಲ್ಲರೂ ಹೀಗೆ ಡ್ರಿಫ್ಟ್ ಮಾಡಬೇಕಾಗುತ್ತೆ ಅಂತ ಮೀಮ್ಸ್ ಹರಿದಾಡ್ತಿವೆ. ಸಾಮಾನ್ಯ ಜನರಿಗೆ ಒಂದು ಹೆಲ್ಮೆಟ್ ಇಲ್ಲ ಅಂದ್ರೆ ದಂಡ ಹಾಕೋ ಪೊಲೀಸರು, ಇಷ್ಟು ದೊಡ್ಡ ಕೇಸ್‌ನಲ್ಲಿ ಇಷ್ಟು ಬೇಗ ಬೇಲ್ ಸಿಕ್ಕಿರೋದು 'ಶ್ರೀಮಂತರ ಪ್ರಭಾವ' ಇರಬಹುದಾ? ಅಂತಾನೂ ಕೆಲವರು ಪ್ರಶ್ನೆ ಮಾಡ್ತಿದ್ದಾರೆ.
ನಗರದ ಹೃದಯಭಾಗದಲ್ಲಿ, ಅದೂ ಹೈ-ಸೆಕ್ಯೂರಿಟಿ ಇರೋ ಜಾಗದಲ್ಲಿ ಈ ರೀತಿ ಅತಿ ವೇಗದಲ್ಲಿ ಕಾರ್ ಓಡಿಸುವುದು ಎಷ್ಟು ಸರಿ? ಸ್ಟಂಟ್ ಮಾಡಬೇಕು ಅಂದ್ರೆ ಅದಕ್ಕೆ ಪ್ರತ್ಯೇಕ ಟ್ರ್ಯಾಕ್ ಇರುತ್ತೆ. ಆದರೆ ಸಾರ್ವಜನಿಕ ರಸ್ತೆಯಲ್ಲಿ ಈ ರೀತಿ ಮಾಡುವುದು ಇತರರ ಜೀವಕ್ಕೂ ಅಪಾಯಕಾರಿ.
Salman Khan could have hired this genius lawyer 🫨pic.twitter.com/okDHDslPbK
— Likith (@surfpora) March 24, 2026
ಪೋಲಿಸ್ ಲಾಕಪ್‌ಗೆ ಹೋದ ಮೇಲೆ ಆ 'ಸ್ಕಿಲ್ಡ್ ಸ್ಕಿಡ್' ಫೇಮಸ್ ಆಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಬೆಂಗಳೂರು ಜನರಿಗಂತೂ ಇದು ದೊಡ್ಡ ಮನರಂಜನೆಯ ವಿಷಯವಾಗಿದೆ. ದುಡ್ಡು ಇರೋರು ಏನು ಮಾಡಿದ್ರೂ ಅದು 'ಸ್ಕಿಲ್' ಅನಿಸಿಕೊಳ್ಳುತ್ತಾ? ಅನ್ನೋದು ಈಗಿನ ಚರ್ಚೆ.