ಬೆಂಗಳೂರು: ಸಿಲಿಕಾನ್ ಸಿಟಿಯ ರಸ್ತೆಗಳು ಈಗ 'ಸಾವಿನ ಆಟದ ಮೈದಾನ'ವಾಗುತ್ತಿವೆಯೇ ಅನ್ನೋ ಅನುಮಾನ ಕಾಡ್ತಾ ಇದೆ. ಇಂದು ಬಿಟಿಎಂ ಲೇಔಟ್ ರಸ್ತೆಯಲ್ಲಿ ನಡೆದ ಘಟನೆಯಂತೂ ಎಂತಹವರಿಗೂ ಮೈ ಜುಂ ಎನಿಸುವಂತಿದೆ. ಮೂವರು ಯುವಕರು ಒಂದೇ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೆ ಟ್ರಿಪಲ್ ರೈಡಿಂಗ್ ಮಾಡುವುದಲ್ಲದೆ, ಕೈಯಲ್ಲಿ ಮದ್ಯದ ಬಾಟಲಿ ಹಿಡಿದು ಕುಡಿಯುತ್ತಾ ಅತಿರೇಕದ ವರ್ತನೆ ತೋರಿದ್ದಾರೆ.
ಏನಿದು ಪುಂಡಾಟಿಕೆ?
ವರದಿಗಳ ಪ್ರಕಾರ, ಈ ಯುವಕರು ಸಾರ್ವಜನಿಕ ರಸ್ತೆಯಲ್ಲಿ ಯಾವುದೇ ಭಯವಿಲ್ಲದೆ ಮದ್ಯ ಸೇವಿಸುತ್ತಾ ಬೈಕ್ ಓಡಿಸಿದ್ದಾರೆ. ಅಷ್ಟೇ ಅಲ್ಲದೆ, ರಸ್ತೆಯಲ್ಲಿ ಹೋಗುವವರಿಗೆ ಅಸಭ್ಯವಾಗಿ ಕೈ ಸನ್ನೆ ಮಾಡುತ್ತಾ, ತಾವೇ ಈ ರಸ್ತೆಯ ರಾಜರು ಎಂಬಂತೆ ಅಹಂಕಾರ ಪ್ರದರ್ಶಿಸಿದ್ದಾರೆ. ಕುಡಿದು ವಾಹನ ಚಾಲನೆ ಮಾಡುವುದು ಮಹಾಪರಾಧ ಎಂಬ ಅರಿವಿದ್ದರೂ, ಇವರು ಇಡೀ ಸಮಾಜದ ಸುರಕ್ಷತೆಯನ್ನೇ ಗಾಳಿಗೆ ತೂರಿದ್ದಾರೆ.
ಅಪಾಯ ಯಾರಿಗೆ?
ಇವರ ಈ ಬೇಜವಾಬ್ದಾರಿ ವರ್ತನೆಯಿಂದ ಕೇವಲ ಅವರಿಗೆ ಮಾತ್ರವಲ್ಲ, ರಸ್ತೆಯಲ್ಲಿ ಹೋಗುವ ಅಮಾಯಕ ಪಾದಚಾರಿಗಳು ಮತ್ತು ಇತರ ವಾಹನ ಸವಾರರಿಗೂ ಜೀವಕ್ಕೆ ಕುತ್ತು ಬರಬಹುದು. ಹೆಲ್ಮೆಟ್ ಇಲ್ಲ, ಸರಿಯಾದ ಬ್ಯಾಲೆನ್ಸ್ ಇಲ್ಲ, ಅದರ ಜೊತೆಗೆ ಮದ್ಯದ ಅಮಲು, ಇಂತಹ ಸ್ಟಂಟ್‌ಗಳು "ಕೂಲ್" ಅಂತ ಇವರು ಅಂದುಕೊಂಡಿರಬಹುದು, ಆದರೆ ಇದು ಕ್ಷಣಾರ್ಧದಲ್ಲಿ ಹೆ*ಣವಾಗಿ ಬೀಳುವ "ಡೆಡ್ಲಿ" ಆಟ ಅನ್ನೋದನ್ನ ಮರೆತಿದ್ದಾರೆ.
ಕಠಿಣ ಕ್ರಮ ಅನಿವಾರ್ಯ
ಬೆಂಗಳೂರು ಟ್ರಾಫಿಕ್ ಪೊಲೀಸರು ಇಂತಹವರ ವಿರುದ್ಧ ಕೇವಲ ದಂಡ ಹಾಕಿ ಬಿಡಬಾರದು. ಇವರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿ, ಜೈಲು ಶಿಕ್ಷೆ ವಿಧಿಸಿದರೆ ಮಾತ್ರ ಇತರರಿಗೆ ಒಂದು ಪಾಠವಾಗುತ್ತದೆ. ರಸ್ತೆ ಸುರಕ್ಷತೆ ಅನ್ನೋದು ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಕಿಡಿಗೇಡಿಗಳ ಪುಂಡಾಟಿಕೆಯಿಂದ ಇಡೀ ನಗರದ ಶಿಸ್ತು ಹಾಳಾಗುತ್ತಿದೆ.
Triple riding was observed on BTM Road in Bengaluru today, with some riders not wearing helmets.
— Hate Detector 🔍 (@HateDetectors) March 23, 2026
Shockingly, one rider was holding a beer bottle while riding, and the pillion rider was openly drinking alcohol, making reckless hand gestures in public without any apparent fear or… pic.twitter.com/wXcJXfteI2
ಸಾರ್ವಜನಿಕರಿಗೆ ಮನವಿ
ನಿಮ್ಮ ಸುತ್ತಮುತ್ತ ಇಂತಹ ಘಟನೆಗಳು ನಡೆದರೆ ಸುಮ್ಮನೆ ನೋಡುತ್ತಾ ನಿಲ್ಲಬೇಡಿ. ತಕ್ಷಣ ಫೋಟೋ ಅಥವಾ ವಿಡಿಯೋ ಮಾಡಿ ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಗೆ ಸೋಶಿಯಲ್ ಮೀಡಿಯಾ ಮೂಲಕ ಟ್ಯಾಗ್ ಮಾಡಿ ಅಥವಾ ಸಹಾಯವಾಣಿಗೆ ಕರೆ ಮಾಡಿ, ನಿಮ್ಮ ಒಂದು ದೂರು ಒಬ್ಬರ ಪ್ರಾಣ ಉಳಿಸಬಹುದು.