ಶಾಕಿಂಗ್ ವಿಡಿಯೋ - ಡಿಕ್ಕಿಯೊಳಗೆ ಮಗುವನ್ನು ಮಲಗಿಸಿ ಗಾಡಿ ಓಡಿಸಿದ ತಾಯಿ!! ಇದೆಂಥಾ ಹುಚ್ಚುತನ ಎಂದ ನೆಟ್ಟಿಗರು;

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ನಗು ತರಿಸಿದರೆ, ಇನ್ನು ಕೆಲವು ಮೈ ಜುಂ ಎನಿಸುವಂತಿರುತ್ತವೆ. ಹೌದು ಅಂತಹದ್ದೇ ಒಂದು ಅತ್ಯಂತ ಆಘಾತಕಾರಿ ಭಯಾನಕ ವಿಡಿಯೋ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ತಾಯಿಯೊಬ್ಬಳು ತನ್ನ ಪುಟ್ಟ ಮಗುನ ಸ್ಕೂಟರ್‌ನ ಸೀಟ್ ಕೆಳಗಿನ ಡಿಕ್ಕಿ ಒಳಗೆ ಮಲಗಿಸಿ ಗಾಡಿ ಚಲಾಯಿಸಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.

ಸ್ಕೂಟರ್ ಡಿಕ್ಕಿಯಲ್ಲಿ ಮಗು – ವೈರಲ್ ವಿಡಿಯೋಗೆ ಆಕ್ರೋಶ!! | Photo Credit: X@thetatvaindia
ಸ್ಕೂಟರ್ ಡಿಕ್ಕಿಯಲ್ಲಿ ಮಗು – ವೈರಲ್ ವಿಡಿಯೋಗೆ ಆಕ್ರೋಶ!! | Photo Credit: X@thetatvaindia

ವೈರಲ್ ಆಗಿರುವ ಈ ದೃಶ್ಯದಲ್ಲಿ, ಮಹಿಳೆಯೊಬ್ಬಳು ತನ್ನ ಸ್ಕೂಟರ್ ನಿಲ್ಲಿಸಿ ಸೀಟನ್ನು ಮೇಲಕ್ಕೆ ಎತ್ತುತ್ತಾಳೆ. ಅಲ್ಲಿರುವ ಸಣ್ಣ ಜಾಗದಲ್ಲಿ ಒಂದು ಮೆತ್ತನೆಯ ದಿಂಬನ್ನು ಇಟ್ಟು, ಅದರ ಮೇಲೆ ತನ್ನ ಪುಟ್ಟ ಮಗುವನ್ನು ಮಲಗಿಸುತ್ತಾಳೆ. ನಂತರ ಸೀಟನ್ನು ಅರ್ಧದಷ್ಟು ಮುಚ್ಚಿ, ಮಗುವಿಗೆ ಗಾಳಿ ಆಡಲಿ ಎಂಬಂತೆ ಸ್ವಲ್ಪ ಜಾಗ ಬಿಟ್ಟು ಅತ್ಯಂತ ನಿರಾಳವಾಗಿ ಗಾಡಿ ಚಲಾಯಿಸಿಕೊಂಡು ಹೋಗುತ್ತಾಳೆ. ಇದನ್ನು ನೋಡಿದ ದಾರಿಹೋಕರು ಮತ್ತು ನೆಟ್ಟಿಗರು ಗರಂ ಆಗಿದ್ದು ಈಕೆಯ ನಡೆಗೆ ಬಯ್ಯುತ್ತಿದ್ದಾರೆ. ಮಗು ಎಷ್ಟು ಚಿಕ್ಕದಾಗಿದೆ ಎಂದರೆ, ಅದಕ್ಕೆ ತನ್ನ ರಕ್ಷಣೆಯನ್ನ ಮಾಡಿಕೊಳ್ಳುವ ಶಕ್ತಿಯೂ ಇಲ್ಲ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. 

ಇದು ಎಷ್ಟು ಅಪಾಯಕಾರಿ?

ಸ್ಕೂಟರ್‌ನ ಸ್ಟೋರೇಜ್ ಬಾಕ್ಸ್ ಕೇವಲ ವಸ್ತುಗಳನ್ನು ಇಡಲು ವಿನ್ಯಾಸಗೊಳಿಸಲಾಗಿರುತ್ತದೆ. ಅಲ್ಲಿ ಮಗುವನ್ನು ಮಲಗಿಸುವುದು ಅಕ್ಷರಶಃ ಜೀವದ ಜೊತೆ ಚೆಲ್ಲಾಟವಾಡಿದಂತೆ.

ಉಸಿರುಗಟ್ಟುವಿಕೆ - ಸ್ಕೂಟರ್‌ನ ಎಂಜಿನ್ ಸೀಟಿನ ಕೆಳಗೆ ಇರುತ್ತದೆ. ಇದರಿಂದ ಹೊರಬರುವ ಶಾಖ ಮತ್ತು ಸೀಟನ್ನು ಮುಚ್ಚಿದಾಗ ಉಂಟಾಗುವ ಆಮ್ಲಜನಕದ ಕೊರತೆಯಿಂದ ಮಗುವಿಗೆ ಉಸಿರುಗಟ್ಟುವ ಅಪಾಯವಿರುತ್ತದೆ.

ಎಂಜಿನ್ ಶಾಖ - ದೀರ್ಘಕಾಲ ಗಾಡಿ ಚಲಾಯಿಸಿದಾಗ ಎಂಜಿನ್ ಬಿಸಿಯಾಗುತ್ತದೆ. ಸೀಟಿನ ಕೆಳಗಿನ ಪ್ಲಾಸ್ಟಿಕ್ ಭಾಗವು ಬಿಸಿಯಾಗಿ ಮಗುವಿನ ಕೋಮಲ ಚರ್ಮಕ್ಕೆ ಸುಟ್ಟ ಗಾಯಗಳಾಗಬಹುದು.

ಅಪಘಾತದ ಭಯ - ರಸ್ತೆಯಲ್ಲಿ ಹೋಗುವಾಗ ಒಂದು ವೇಳೆ ಗಾಡಿ ಸ್ಕಿಡ್ ಆದರೂ ಅಥವಾ ಸಣ್ಣ ಗುಂಡಿಗೆ ಬಿದ್ದರೂ, ಮಗುವಿನ ತಲೆಗೆ ತೀವ್ರವಾದ ಪೆಟ್ಟು ಬೀಳಬಹುದು. ಡಿಕ್ಕಿಯ ಒಳಗೆ ಮಗು ಸಿಲುಕಿಕೊಂಡರೆ ಅದನ್ನು ತಕ್ಷಣ ಹೊರತೆಗೆಯುವುದು ಕಷ್ಟವಾಗುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಆ ತಾಯಿಯ ವರ್ತನೆಯನ್ನ ತೀವ್ರವಾಗಿ ಖಂಡಿಸಿದ್ದಾರೆ. 'ಇದು ಅಮಾನವೀಯ ಮತ್ತು ಅತ್ಯಂತ ನಿರ್ಲಕ್ಷ್ಯದ ಪರಮಾವಧಿ' ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಮಗುವನ್ನ ಒಂದು ವಸ್ತುವಿನಂತೆ ಟ್ರೀಟ್ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಕೆಲವು ಅಮ್ಮಂದಿರು ತಮ್ಮ ಕೆಲಸ ಸುಲಭವಾಗಲಿ ಎಂದು ಅಥವಾ ಮಗು ಮಲಗಲಿ ಎಂದು ಇಂತಹ ಅಪಾಯಕಾರಿ ಹಾದಿ ಹಿಡಿಯುವುದು ಸರಿಯಲ್ಲ.

ಮಕ್ಕಳ ಸುರಕ್ಷತೆ ಪೋಷಕರ ಮೊದಲ ಆದ್ಯತೆಯಾಗಿರಬೇಕು. ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷಿತ ಬೆಲ್ಟ್ ಅಥವಾ ಮಗುವನ್ನು ಎದೆಗೆ ಕಟ್ಟಿಕೊಳ್ಳುವ ಕ್ಯಾರಿಯರ್‌ಗಳನ್ನು ಬಳಸಬೇಕು. ಅದನ್ನು ಬಿಟ್ಟು ಇಂತಹ 'ಶಾರ್ಟ್ ಕಟ್' ವಿಧಾನಗಳನ್ನು ಅನುಸರಿಸುವುದು ಮಗುವಿನ ಪ್ರಾಣಕ್ಕೆ ಕುತ್ತು ತರಬಹುದು.

ಈ ಘಟನೆಯು ಕೇವಲ ಒಂದು ವೈರಲ್ ವಿಡಿಯೋ ಅಲ್ಲ, ಬದಲಿಗೆ ಪೋಷಕರಿಗೆ ಒಂದು ಎಚ್ಚರಿಕೆಯ ಗಂಟೆ. ಸಣ್ಣ ನಿರ್ಲಕ್ಷ್ಯವು ದೊಡ್ಡ ದುರಂತಕ್ಕೆ ಕಾರಣವಾಗಬಹುದು. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ಜೊತೆಗೆ ಅವರ ಸುರಕ್ಷತೆಯ ಬಗ್ಗೆಯೂ ಅರಿವಿರುವುದು ಅತ್ಯಗತ್ಯ.  

Latest News