Apr 26, 2026 Languages : ಕನ್ನಡ | English

"ಬೆಂಗಳೂರಿನ ಜನರೇ ಸಖತ್ ಪಾಸಿಟಿವ್" - ಮಾಯಾನಗರಿಯ ಪ್ರೀತಿಗೆ ಮಾರುಹೋದ ಹೊರರಾಜ್ಯದ ಮಹಿಳೆ!!

ಬೆಂಗಳೂರು ಎಂದರೆ ಕೇವಲ ಐಟಿ ಕಂಪನಿಗಳು ಅಥವಾ ಟ್ರಾಫಿಕ್ ಜಾಮ್ ಮಾತ್ರವಲ್ಲ; ಇದೊಂದು ಭಾಷೆ, ಸಂಸ್ಕೃತಿ ಮತ್ತು ಮಾನವೀಯತೆಯ ಮಹಾಸಾಗರ. ಕನಸುಗಳನ್ನು ಹೊತ್ತು ಈ 'ಮಾಯಾನಗರಿ'ಗೆ ಬರುವ ಸಾವಿರಾರು ಮಂದಿ, ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಾರೆ.

ಬೆಂಗಳೂರಿನಲ್ಲಿ ಒಂದು ವರ್ಷ ಕಳೆದ ಮಹಿಳೆಯ ಫಿದಾ ಅನುಭವ
ಬೆಂಗಳೂರಿನಲ್ಲಿ ಒಂದು ವರ್ಷ ಕಳೆದ ಮಹಿಳೆಯ ಫಿದಾ ಅನುಭವ

ಇತ್ತೀಚೆಗೆ ಬೆಂಗಳೂರಿನಲ್ಲಿ ಒಂದು ವರ್ಷ ಪೂರೈಸಿರುವ ಮಹಿಳೆಯೊಬ್ಬರು, ಈ ನಗರದ ಬಗ್ಗೆ ಹೊಂದಿರುವ ತಮ್ಮ ಸುಂದರ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ 'atyacreates' ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ, ಸದ್ಯ ನೆಟ್ಟಿಗರ ಮನಗೆಲ್ಲುತ್ತಿದೆ.

View this post on Instagram

A post shared by Atya k (@atyakreates)

ನಗರದ ವೈಶಿಷ್ಟ್ಯತೆಗಳ ಅನಾವರಣ

ವಿಡಿಯೋದಲ್ಲಿ ಮಾತನಾಡುತ್ತಾ, "ನಾನು ಬೆಂಗಳೂರಿಗೆ ಬಂದಾಗ ಕನ್ನಡದ ಒಂದು ಪದವನ್ನೂ ಬಲ್ಲವಳಾಗಿರಲಿಲ್ಲ, ಆದರೆ ಇಂದು ಈ ನಗರ ನನ್ನನ್ನು ಎಷ್ಟು ಪ್ರೀತಿಸುತ್ತಿದೆ ಎಂದರೆ, ನಾನು ಇಲ್ಲೇ ಸೇರಿದವಳು ಎಂದು ನನಗೆ ಅನಿಸುತ್ತಿದೆ," ಎಂದು ಅವರು ಭಾವುಕರಾಗಿ ಹೇಳಿದ್ದಾರೆ. ಬೆಂಗಳೂರಿನ ಹವಾಮಾನ, ಹೂವುಗಳು ಮತ್ತು ಇಲ್ಲಿನ ಚಹಾದ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಈ ನಗರ ಅದಕ್ಕಿಂತಲೂ ಮಿಗಿಲಾದುದು ಎಂದು ಅವರು ವಿವರಿಸಿದ್ದಾರೆ. ಇಲ್ಲಿನ ಜನರ ಸೌಮ್ಯ ಸ್ವಭಾವವನ್ನು ಪ್ರಶಂಸಿಸಿರುವ ಅವರು, ಬೆಂಗಳೂರಿನ ಜನರು ವೈಯಕ್ತಿಕ ಗಡಿಗಳನ್ನು (Personal boundaries) ಗೌರವಿಸುತ್ತಾರೆ, ಅನಗತ್ಯ ತಲೆನೋವು ಅಥವಾ ನಾಟಕಗಳನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಮತ್ತು ಸಂಸ್ಕೃತಿಯ ಸಮ್ಮಿಲನ

ಬೆಂಗಳೂರಿನ ಮತ್ತೊಂದು ವಿಶೇಷತೆಯೆಂದರೆ ಇಲ್ಲಿನ ಜನರ ಆರೋಗ್ಯದ ಬಗ್ಗೆ ಇರುವ ಕಾಳಜಿ. ಇಲ್ಲಿನ ಜನರು ತಮ್ಮ ಕೆಲಸದ ಮಹತ್ವಾಕಾಂಕ್ಷೆಯ ಜೊತೆಗೆ ಸ್ವಂತ ಹವ್ಯಾಸಗಳಿಗೂ ಅಷ್ಟೇ ಮಹತ್ವ ನೀಡುತ್ತಾರೆ. ಆಹಾರ ಪ್ರಿಯರಿಗೆ ಬೆಂಗಳೂರು ಸ್ವರ್ಗವಿದ್ದಂತೆ; ಮಸಾಲಾ ದೋಸೆಯಿಂದ ಹಿಡಿದು ಇಡ್ಲಿ-ಪೂರಿಯವರೆಗೆ ಸಿಗುವ ಆರೋಗ್ಯಕರ ಮತ್ತು ಕೈಗೆಟುಕುವ ಬೆಲೆಯ ಬೀದಿ ಆಹಾರದ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಇಲ್ಲಿ ಯಾರೂ ನಿಮ್ಮನ್ನು ನಿರ್ಣಯಿಸುವುದಿಲ್ಲ, ವಿಚಿತ್ರ ಪ್ರಶ್ನೆಗಳನ್ನು ಕೇಳಿ ಮುಜುಗರ ಉಂಟುಮಾಡುವುದಿಲ್ಲ. ನೀವು ನೀವಾಗಿಯೇ ಬದುಕಲು ಇಲ್ಲಿನ ವಾತಾವರಣ ಅವಕಾಶ ಮಾಡಿಕೊಡುತ್ತದೆ," ಎಂಬ ಅವರ ಮಾತು ನಿಜಕ್ಕೂ ಸತ್ಯ.

ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ಈ ವಿಡಿಯೋಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ತಮ್ಮ ಸ್ವಂತ ಅನುಭವಗಳನ್ನು ಕಾಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರರು, "ಪುಣೆಗಿಂತ ಬೆಂಗಳೂರು ಹೆಚ್ಚು ಇಷ್ಟ, ಕೆಲಸ ಬದಲಾದರೂ ಈ ನಗರ ಬಿಟ್ಟು ಹೋಗಲು ಮನಸ್ಸಾಗಲಿಲ್ಲ," ಎಂದಿದ್ದಾರೆ. ಮತ್ತೊಬ್ಬರು, "ನೀವು ಹೇಳಿರುವ ಪ್ರತಿಯೊಂದು ಮಾತು ನೂರಕ್ಕೆ ನೂರರಷ್ಟು ಸತ್ಯ," ಎಂದು ಧ್ವನಿಗೂಡಿಸಿದ್ದಾರೆ. ಒಟ್ಟಾರೆಯಾಗಿ, ಈ ವಿಡಿಯೋ ಬೆಂಗಳೂರಿನ ಬಗ್ಗೆ ಇರುವ ಧನಾತ್ಮಕ ಚಿಂತನೆಯನ್ನು ಮತ್ತಷ್ಟು ಬಲಪಡಿಸಿದೆ.

Latest News