ಬೆಂಗಳೂರು ನಗರದಲ್ಲಿ ನಟಿ ಚೈತ್ರಾ ಆರ್ ಅವರನ್ನು ಕಿಡ್ನ್ಯಾಪ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಮಗಳಿಗಾಗಿ ಪತಿಯೇ ಹೆಂಡತಿಯನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂಬ ಗಂಭೀರ ಆರೋಪ ಹೊರಬಿದ್ದಿದ್ದು, ಈ ಘಟನೆ ಸಿನಿಮಾ ಹಾಗೂ ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ವರ್ಧನ್ ಎಂಟರ್ಪ್ರೈಸ್ ಮಾಲೀಕ ಹಾಗೂ ಚಿತ್ರ ನಿರ್ಮಾಪಕ ಹರ್ಷವರ್ಧನ್, ತನ್ನ ಹೆಂಡತಿ ನಟಿ ಚೈತ್ರಾ ಆರ್ ಅವರನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂಬ ದೂರು ದಾಖಲಾಗಿದೆ. ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ಸ್ನೇಹಿತ ಕೌಶೀಕ್ ಮೂಲಕ ನಟಿಗೆ ₹20,000 ಅಡ್ವಾನ್ಸ್ ನೀಡಿ, ಪಿಕ್ ಅಪ್ ನೆಪದಲ್ಲಿ ಮೈಸೂರು ರಸ್ತೆ ಮೂಲಕ ನೈಸ್ ರೋಡಲ್ಲಿ ಕಿಡ್ನ್ಯಾಪ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಹರ್ಷವರ್ಧನ್ ಮತ್ತು ಚೈತ್ರಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ನಂತರ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಇಬ್ಬರೂ ದೂರವಾಗಿದ್ದರು. ಇವರಿಗೆ ಒಂದು ವರ್ಷದ ಹೆಣ್ಣುಮಗುವಿದ್ದು, ಕಲಹದ ನಂತರ ನಟಿ ಚೈತ್ರಾ ಮಗಳೊಂದಿಗೆ ಬೆಂಗಳೂರಿಗೆ ಬಂದಿದ್ದರು. ಇದರಿಂದ ಬೇಸರಗೊಂಡಿದ್ದ ಪತಿ ಹರ್ಷವರ್ಧನ್, ಮಗಳನ್ನು ಪಡೆಯಲು ಹೆಂಡತಿಯನ್ನು ಕಿಡ್ನ್ಯಾಪ್ ಮಾಡಿದನೆಂದು ಆರೋಪಿಸಲಾಗಿದೆ.
ಕಿಡ್ನ್ಯಾಪ್ ಮಾಡಿದ ನಂತರ ಹರ್ಷವರ್ಧನ್, ಚೈತ್ರಾಳ ತಾಯಿಗೆ ಕರೆ ಮಾಡಿ “ನಿನ್ನ ಮಗಳನ್ನ ಕಿಡ್ನ್ಯಾಪ್ ಮಾಡಿದ್ದೇನೆ. ನನ್ನ ಮಗಳನ್ನ ತಂದು ಒಪ್ಪಿಸಿದರೆ ನಿಮ್ಮ ಮಗಳನ್ನ ಸೇಫಾಗಿ ಬಿಡ್ತಿನಿ” ಎಂದು ಬೆದರಿಕೆ ಹಾಕಿದ್ದಾನೆ ಎಂಬ ಮಾಹಿತಿ ಹೊರಬಂದಿದೆ.
ಈ ಸಂಬಂಧ ನಟಿ ಚೈತ್ರಾಳ ಸಹೋದರಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣವನ್ನು ತನಿಖೆಗೆ ಕೈಗೊಂಡಿದ್ದಾರೆ. ಹರ್ಷವರ್ಧನ್ ಹಾಗೂ ಅವನ ಸ್ನೇಹಿತ ಕೌಶೀಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ನಟಿಯನ್ನೇ ಕಿಡ್ನ್ಯಾಪ್ ಮಾಡಿ ಮಗಳನ್ನು ಪಡೆಯಲು ಪತಿಯೇ ಇಂತಹ ಹೆಜ್ಜೆ ಇಟ್ಟಿರುವುದು ಸಮಾಜದಲ್ಲಿ ಆಘಾತ ಮೂಡಿಸಿದೆ. ಕುಟುಂಬ ಕಲಹದಿಂದ ಹುಟ್ಟಿದ ಈ ಘಟನೆ ಇದೀಗ ಕಾನೂನು ಹಾದಿ ಹಿಡಿದಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ದಿನಗಳಲ್ಲಿ ತನಿಖೆಯಿಂದ ಹೆಚ್ಚಿನ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ