ಬೆಂಗಳೂರು ಅಂಜನಾಪುರ ನಿವಾಸಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಚಿರತೆ ಕಾಟ ತಲೆನೋವಾಗಿ ಪರಿಣಮಿಸಿದೆ. ರಾತ್ರಿ ಹೊತ್ತು ಚಿರತೆ ಕಾಣಿಸಿಕೊಂಡರೆ, ಸಂಜೆ ವೇಳೆಗೆ ಅಲ್ಲಿನ ಜನರಿಗೆ ಆಟೋ ಅಥವಾ ಆನ್ಲೈನ್ ಡೆಲಿವರಿ ಸಿಗುವುದೇ ಕಷ್ಟವಾಗಿದೆ.
ಸ್ಥಳೀಯರು ಹಲವು ಬಾರಿ ಚಿರತೆಯನ್ನು ಕಣ್ಣಾರೆ ಕಂಡಿದ್ದಾರೆ. ಇದರಿಂದಾಗಿ ಅಂಜನಾಪುರದಲ್ಲಿ ಚಿರತೆ ಇರುವ ಬಗ್ಗೆ ಸುದ್ದಿ ಹಬ್ಬಿ, ಜನರಲ್ಲಿ ಭಯ ಹೆಚ್ಚಾಗಿದೆ. ಅನೇಕ ಬಾರಿ ಆಟೋ ಚಾಲಕರಿಗೆ ಚಿರತೆ ಅಡ್ಡ ಬಂದಿರುವ ಘಟನೆಗಳು ನಡೆದಿವೆ. ಕಳೆದ ವರ್ಷ ಸ್ವಿಗಿ ಡೆಲಿವರಿ ಬಾಯ್ ಒಬ್ಬ ಚಿರತೆಯನ್ನು ನೋಡಿ ಭಯಗೊಂಡಿದ್ದ ಘಟನೆ ಕೂಡ ನೆನಪಾಗಿದೆ.
ಇದರಿಂದಾಗಿ ಸಂಜೆ ಆರು ಗಂಟೆ ಆದ್ಮೇಲೆ ಅಂಗಡಿಗಳು ಮುಚ್ಚಲ್ಪಡುತ್ತವೆ. ರಸ್ತೆಗಳು ಖಾಲಿಯಾಗುತ್ತವೆ. ಜನರು ತಮ್ಮ ಮನೆ ಬಾಗಿಲು ಹಾಕಿಕೊಂಡು ಹೊರಗೆ ಬರದೆ ಒಳಗೇ ಉಳಿಯುತ್ತಾರೆ. ಒಬ್ಬೊಬ್ಬರಾಗಿ ಹೊರಬರಲು ಕೂಡ ನಿವಾಸಿಗಳಿಗೆ ಧೈರ್ಯವಾಗುವುದಿಲ್ಲ. ಆಟೋ ಚಾಲಕರು ಅಂಜನಾಪುರಕ್ಕೆ ಹೋಗುವುದೇ ತಪ್ಪಿಸುತ್ತಿದ್ದಾರೆ. ಸಂಜೆ ನಾಲ್ಕು ಗಂಟೆ ಆದ್ಮೇಲೆ ಆನ್ಲೈನ್ ಫುಡ್ ಡೆಲಿವರಿ ಕೂಡ ಸಿಗುವುದಿಲ್ಲ. ಸ್ವಿಗಿ, ಜೋಮೋಟೋ ಡೆಲಿವರಿ ಬಾಯ್ಸ್ ಅಂಜನಾಪುರ ಲೇಔಟ್‌ಗೆ ಕಾಲಿಡುವುದೇ ಇಲ್ಲ. ಆರ್ಡರ್ ಮಾಡಿದರೂ ಏರಿಯಾ ನೋಡಿ ಕ್ಯಾನ್ಸಲ್ ಮಾಡುತ್ತಾರೆ.
ಇದರಿಂದ ನಿವಾಸಿಗಳು ಏನೇ ಬೇಕಾದರೂ ಕಾರಿನಲ್ಲಿ ಹೊರಟು ಹೋಗಿ ತಂದುಕೊಳ್ಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಚಿರತೆ ಭಯದಿಂದ ಸಾಮಾನ್ಯ ಜೀವನವೇ ಅಸಾಧ್ಯವಾಗುತ್ತಿದೆ. ಅಂಜನಾಪುರದಲ್ಲಿ ಚಿರತೆ ಕಾಟದಿಂದ ಜನರ ದಿನನಿತ್ಯದ ಬದುಕು ಅಸ್ತವ್ಯಸ್ತವಾಗಿದ್ದು, ಆನ್ಲೈನ್ ಸೇವೆಗಳು, ಆಟೋ ಸಂಚಾರ, ಸಂಜೆ ಹೊರಾಟ ಎಲ್ಲವೂ ಸ್ಥಗಿತಗೊಂಡಿದೆ. ಈ ಘಟನೆ ನಗರದಲ್ಲಿ ವನ್ಯಜೀವಿ ನಿರ್ವಹಣೆ ಮತ್ತು ಭದ್ರತೆ ಕುರಿತಂತೆ ಗಂಭೀರ ಚರ್ಚೆಗೆ ಕಾರಣವಾಗಿದೆ.