ಅಂಜನಾಪುರ ಭಾಗದಲ್ಲಿ ಚಿರತೆಯ ಅಬ್ಬರ ಮತ್ತೆ ಶುರುವಾಗಿದೆ. ಇಷ್ಟು ದಿನ ಕಾಡಿನ ಅಂಚಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ, ಈಗ ನೇರವಾಗಿ ಜನರ ವಸತಿ ಪ್ರದೇಶಕ್ಕೆ, ಅದರಲ್ಲೂ ಮನೆಯ ಗೇಟ್ ಒಳಗೆ ನುಗ್ಗುತ್ತಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಇಂದು ಮುಂಜಾನೆ ಅಂಜನಾಪುರದ 9ನೇ ಬ್ಲಾಕ್, 5ನೇ ಕ್ರಾಸ್ ಬಳಿ ಇರುವ ಮನೆಯೊಂದರ ಗೇಟ್ ಒಳಗೆ ಚಿರತೆ ಪ್ರತ್ಯಕ್ಷವಾಗಿದೆ. ಮುಂಜಾನೆ ವೇಳೆ ಜನರು ಎಚ್ಚರವಾಗುವ ಮೊದಲೇ ಚಿರತೆ ಮನೆಯ ಅಂಗಳಕ್ಕೆ ಬಂದಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಜನಸಂದಣಿ ಇರುವ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿರುವುದರಿಂದ ನಿವಾಸಿಗಳು ಮನೆಯಿಂದ ಹೊರಬರಲು ಭಯಪಡುತ್ತಿದ್ದಾರೆ.
ಅಂಜನಾಪುರದಲ್ಲಿ ಚಿರತೆ ಕಾಟ ಇಂದು ನಿನ್ನೆಯದಲ್ಲ. ಕಳೆದ ಹಲವು ದಿನಗಳಿಂದ ಚಿರತೆ ಓಡಾಟ ನಡೆಸುತ್ತಲೇ ಇದೆ. ಅರಣ್ಯ ಇಲಾಖೆಯವರು ಈಗಾಗಲೇ ಒಂದು ಬೋನು ಇಟ್ಟಿದ್ದರೂ, ಚಿರತೆ ಮಾತ್ರ ಇನ್ನೂ ಸೆರೆಯಾಗಿಲ್ಲ. ಹೆಚ್ಚುವರಿ ಬೋನುಗಳಿಗೆ ಬೇಡಿಕೆ, ಕೇವಲ ಒಂದು ಬೋನು ಇಟ್ಟರೆ ಸಾಕಾಗುವುದಿಲ್ಲ. ಚಿರತೆ ಬೇರೆ ಬೇರೆ ಕಡೆ ಓಡಾಡುತ್ತಿದೆ. ಹಾಗಾಗಿ ತಕ್ಷಣವೇ ಮತ್ತೆರಡು ಬೋನುಗಳನ್ನು ಅಳವಡಿಸಬೇಕು ಎಂದು ಅರಣ್ಯ ಇಲಾಖೆಗೆ ನಿವಾಸಿಗಳು ಕಳಕಳಿಯ ಮನವಿ ಮಾಡಿದ್ದಾರೆ.
ಮುಂಜಾನೆ ವಾಕಿಂಗ್ ಹೋಗುವವರು ಮತ್ತು ಶಾಲಾ ಮಕ್ಕಳು ಈ ಘಟನೆಯಿಂದಾಗಿ ತೀವ್ರ ಭಯಭೀತರಾಗಿದ್ದಾರೆ. ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಅಂಜನಾಪುರದಲ್ಲಿ ಪದೇ ಪದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಅರಣ್ಯ ಇಲಾಖೆಗೂ ದೊಡ್ಡ ತಲೆನೋವಾಗಿದೆ. ಚಿರತೆಯನ್ನು ಶೀಘ್ರವಾಗಿ ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಜನರು ಎಚ್ಚರಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಕಾರ್ಯಾಚರಣೆಯನ್ನು ಚುರುಕುಗೊಳಿಸುವ ಭರವಸೆ ನೀಡಿದ್ದಾರೆ.