Dec 13, 2025 Languages : ಕನ್ನಡ | English

ಭೀಕರ ದುರಂತ: ಪೂಜೆಗೆ ಹೊರಟಿದ್ದ 4 ವರ್ಷದ ಬಾಲಕಿ ಮೇಲೆ ಬುಲ್​ಡಾಗ್ ಅಟ್ಯಾಕ್; ನೆತ್ತಿಯ ಚರ್ಮ ಕಿತ್ತು ಪ್ರಾಣ ಹಾನಿ!

ಬಿಹಾರದ ಮುಜಫರ್​ಪುರ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಪೂಜೆಗೆಂದು ದೇವಸ್ಥಾನಕ್ಕೆ ಹೊರಟಿದ್ದ ಕೇವಲ 4 ವರ್ಷದ ಬಾಲಕಿ ಮೇಲೆ ಬುಲ್​ಡಾಗ್ ತೀವ್ರವಾಗಿ ದಾಳಿ ನಡೆಸಿದ ಪರಿಣಾಮ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ.

4 ವರ್ಷದ ಬಾಲಕಿ ಮೇಲೆ ಬುಲ್​ಡಾಗ್ ಅಟ್ಯಾಕ್
4 ವರ್ಷದ ಬಾಲಕಿ ಮೇಲೆ ಬುಲ್​ಡಾಗ್ ಅಟ್ಯಾಕ್

ಪಾರು ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಜಮಾ ಗ್ರಾಮದಲ್ಲಿ ಮಂಗಳವಾರ ಈ ದುರಂತ ಸಂಭವಿಸಿದೆ. ಕಮಲೇಶ್ ಸಾಹ್ನಿ ಅವರ ಪುತ್ರಿ ಶಿವಾನಿ (4) ತನ್ನ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದಳು. ಈ ವೇಳೆ, ಸರಪಳಿಯನ್ನು ಸಡಿಲಗೊಳಿಸಿ ಬಿಡಲಾಗಿದ್ದ ಸಾಕು ಬುಲ್‌ಡಾಗ್​ವೊಂದು ದಿಢೀರನೆ ಮೂವರು ಮಕ್ಕಳ ಮೇಲೆ ದಾಳಿ ಮಾಡಿದೆ. ಇಬ್ಬರು ಮಕ್ಕಳು ತಕ್ಷಣವೇ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡರು, ಆದರೆ ಪುಟ್ಟ ಶಿವಾನಿ ನಾಯಿಯ ದಾಳಿಗೆ ಸಿಲುಕಿದಳು.

ದಾಳಿಯ ಭೀಕರತೆ: ನಾಯಿಯು ಶಿವಾನಿಯನ್ನು ಕಚ್ಚಿ ಹಿಡಿದು, ಆಕೆಯ ತಲೆಯಿಂದ ಚರ್ಮ ಮತ್ತು ಕೂದಲು ಸಮೇತ ನೆತ್ತಿಯ ಭಾಗವನ್ನೇ ಸಂಪೂರ್ಣವಾಗಿ ಕಿತ್ತು ಹಾಕಿದೆ. ಗಂಭೀರವಾಗಿ ಗಾಯಗೊಂಡ ಶಿವಾನಿ ಪ್ರಜ್ಞೆ ತಪ್ಪಿ ಬಿದ್ದಳು. ತಕ್ಷಣ ಆಕೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (SKMCH) ಕಳುಹಿಸಿದರು. ಬುಧವಾರ ಎಸ್‌ಕೆಎಂಸಿಎಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಶಿವಾನಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಘೋಷಿಸಿದರು.

ವರದಿಗಳ ಪ್ರಕಾರ, ಈ ಬುಲ್‌ಡಾಗ್‌ಗಳನ್ನು ಕೇವಲ 15 ದಿನಗಳ ಹಿಂದೆ ಸೋನೆಪುರ ಜಾತ್ರೆಯಲ್ಲಿ ಖರೀದಿಸಲಾಗಿತ್ತು.

ಪಾರು ಪೊಲೀಸ್ ಠಾಣಾಧಿಕಾರಿ ಚಂದನ್ ಕುಮಾರ್ ಅವರು, ಬಾಲಕಿಯ ತಂದೆ ಕಮಲೇಶ್ ಸಾಹ್ನಿ ಅವರು ದೂರು ನೀಡಿದರೆ, ಕೂಡಲೇ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಘಟನೆ ಸಾಕು ಪ್ರಾಣಿಗಳ ಸುರಕ್ಷತೆ ಮತ್ತು ಅವುಗಳ ನಿರ್ವಹಣೆ ಬಗ್ಗೆ ಬಿಹಾರದಲ್ಲಿ ಗಂಭೀರ ಚರ್ಚೆಗೆ ನಾಂದಿ ಹಾಡಿದೆ. ಮೃತ ಶಿವಾನಿ ಕುಟುಂಬದಲ್ಲಿ ಕಿರಿಯ ಮಗಳಾಗಿದ್ದು, ಕುಟುಂಬದ ದುಃಖ ಹೇಳತೀರದಾಗಿದೆ.

Latest News