Dec 13, 2025 Languages : ಕನ್ನಡ | English

ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ ಹುಷಾರ್!! ಬೆಳಗಾವಿಯಲ್ಲಿ ಆಗಿದ್ದೇನು ನೋಡಿ

ಅಥಣಿ ತಾಲೂಕಿನಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಜನತೆ ಸುಸ್ತಾಗಿದ್ದಾರೆ. ಮನೆ ಮುಂದೆ, ಗಾರ್ಡನ್‌ಗಳಲ್ಲಿ ಆಟ ಆಡುವ ಮಕ್ಕಳೇ ಶ್ವಾನಗಳ ಟಾರ್ಗೆಟ್ ಆಗಿದ್ದು, ಜನವರಿ ತಿಂಗಳಿನಿಂದ ಇಲ್ಲಿಯ ತನಕ 840ಕ್ಕೂ ಹೆಚ್ಚು ಜನರಿಗೆ ನಾಯಿಗಳು ಕಚ್ಚಿರುವ ಘಟನೆಗಳು ದಾಖಲಾಗಿವೆ. ಈ ಅತಿಯಾದ ಹಾವಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಳ್ಳಿಗಳಲ್ಲಿ ಚಿಕ್ಕ ಮಕ್ಕಳ ಮೇಲೆ ಹಾಗೂ ದನಕರುಗಳ ಮೇಲೆ ನಾಯಿಗಳ ದಾಳಿ ಹೆಚ್ಚಾಗಿದೆ. ಜನರು ಭಯದಿಂದ ಮಕ್ಕಳನ್ನು ಹೊರಗೆ ಬಿಡಲು ಹೆದರುತ್ತಿದ್ದಾರೆ. ದನಕರುಗಳ ಮೇಲೆ ದಾಳಿ ನಡೆದ ಪರಿಣಾಮ ಗ್ರಾಮೀಣ ಆರ್ಥಿಕತೆಗೆ ಹಾನಿ ಉಂಟಾಗಿದೆ. ಬೀದಿ ನಾಯಿಗಳ ದಾಳಿಯಿಂದ ಹಳ್ಳಿಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ ಹುಷಾರ್
ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದೆ ಹುಷಾರ್

ನಾಯಿಗಳ ಮೇಲೆ ನಿಯಂತ್ರಣ ಇಡಬೇಕಾದ ಅಧಿಕಾರಿಗಳು ಸೈಲೆಂಟ್ ಆಗಿರುವುದರಿಂದ ಸಾರ್ವಜನಿಕರು ವೈಲೆಂಟ್ ಆಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರಲ್ಲಿ ಅಸಮಾಧಾನ ಹೆಚ್ಚಾಗಿದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ಸ್ಥಳೀಯರು ತಮ್ಮ ಅಸಮಾಧಾನವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಉದಯ ಮಕಾಣಿ ಎಂಬ ಸ್ಥಳೀಯರು, “ಮಕ್ಕಳ ಸುರಕ್ಷತೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ನಾವು ಪ್ರತಿಭಟನೆಗೆ ಮುಂದಾಗುತ್ತೇವೆ” ಎಂದು ಹೇಳಿದ್ದಾರೆ. ವೈದ್ಯಾಧಿಕಾರಿ ಬಸನಗೌಡ ಕಾಗೆ ಕೂಡಾ, “ಬೀದಿ ನಾಯಿಗಳ ಕಚ್ಚುವ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರ ಆರೋಗ್ಯದ ದೃಷ್ಟಿಯಿಂದ ತಕ್ಷಣ ಕ್ರಮ ಅಗತ್ಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಥಣಿಯಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವುದು ತುರ್ತು ಅಗತ್ಯವಾಗಿದೆ. ಸಾರ್ವಜನಿಕರ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ. ಮಕ್ಕಳ ಸುರಕ್ಷತೆ, ದನಕರುಗಳ ರಕ್ಷಣೆ ಹಾಗೂ ಜನರ ಆರೋಗ್ಯಕ್ಕಾಗಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿದೆ. ಇಲ್ಲದಿದ್ದರೆ ಜನರ ಆಕ್ರೋಶ ಪ್ರತಿಭಟನೆಯ ರೂಪ ತಾಳುವುದು ಖಚಿತ.

Latest News