Jan 25, 2026 Languages : ಕನ್ನಡ | English

ಕಬ್ಬು ಕಟಾವು ವೇಳೆ ಸಂಭವಿಸಿದ ಮಷಿಣ ದುರಂತ – ಇಬ್ಬರು ಮಹಿಳಾ ಕಾರ್ಮಿಕರ ಸಾವು

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದ ಹೃದಯ ವಿದ್ರಾವಕ ಘಟನೆ ಗ್ರಾಮಸ್ಥರಲ್ಲಿ ಆಘಾತ ಉಂಟುಮಾಡಿದೆ. ಕಬ್ಬು ಕಟಾವು ಮಾಡುವ ಮಷಿಣಗೆ ಸಿಲುಕಿ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ ದುರಂತ, ಗ್ರಾಮದಲ್ಲಿ ದುಃಖದ ಛಾಯೆ ಹರಡಿದೆ.

ಕಬ್ಬು ಕಟಾವು ವೇಳೆ ಮಷಿಣಕ್ಕೆ ಸಿಲುಕಿ ಇಬ್ಬರು ಮಹಿಳೆಯರ ದುರ್ಮರಣ
ಕಬ್ಬು ಕಟಾವು ವೇಳೆ ಮಷಿಣಕ್ಕೆ ಸಿಲುಕಿ ಇಬ್ಬರು ಮಹಿಳೆಯರ ದುರ್ಮರಣ

ಮೃತರಾದವರು ಸತ್ತಿ ಗ್ರಾಮದ ಬೌರವ್ವಾ ಲಕ್ಷ್ಮಣ ಕೋಬಡಿ (60) ಮತ್ತು ಲಕ್ಷ್ಮಮಿಬಾಯಿ ಮಲ್ಲಪ್ಪಾ ರುದ್ರಗೌಡರ (65) ಎಂಬ ಮಹಿಳಾ ಕಾರ್ಮಿಕರು. ಈ ಇಬ್ಬರೂ ಕಬ್ಬು ಕಟಾವು ಕಾರ್ಯದಲ್ಲಿ ತೊಡಗಿದ್ದಾಗ, ಮಷಿಣದ ಹಿಂಭಾಗದಲ್ಲಿ ಕಟಾವಾದ ಕಬ್ಬನ್ನು ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಮಷಿಣದ ಚಲನೆಯ ಮಧ್ಯೆ ಅವರು ಸಿಲುಕಿದ ಪರಿಣಾಮ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ಇಂದು ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಸತ್ತಿ ಗ್ರಾಮದ ಹೊರವಲಯದಲ್ಲಿರುವ ಕಾಡಗೌಡ ಪಾಟೀಲ ಅವರ ಜಮೀನಿನಲ್ಲಿ ಸಂಭವಿಸಿದೆ. ಈ ಜಮೀನಿನಲ್ಲಿ ಕಬ್ಬು ಕಟಾವು ಕಾರ್ಯ ನಡೆಯುತ್ತಿತ್ತು. ಕಾರ್ಮಿಕರು ತಮ್ಮ ದಿನಚರಿಯಂತೆ ಕೆಲಸ ನಿರ್ವಹಿಸುತ್ತಿದ್ದಾಗ, ಮಷಿಣದ ಹಿಂಭಾಗದಲ್ಲಿ ಕಬ್ಬು ಸಂಗ್ರಹಿಸುವ ವೇಳೆ ತೀವ್ರ ಅನಾಹುತ ಸಂಭವಿಸಿದೆ.

ದುರ್ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಹಾಗೂ ಮೃತ ಮಹಿಳೆಯರ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದರು. ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲಿ ಮುಟ್ಟಿತ್ತು. ಈ ದುಃಖದ ಘಟನೆಯು ಗ್ರಾಮದಲ್ಲಿ ಭಾರೀ ತೀವ್ರತೆಯನ್ನು ಉಂಟುಮಾಡಿದೆ. ಗ್ರಾಮಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಘಟನೆಯ ಮಾಹಿತಿ ಪಡೆದ ಅಥಣಿ ಪೋಲಿಸ್ ಠಾಣೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮಷಿಣದ ಕಾರ್ಯವೈಖರಿ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ. ಈ ಘಟನೆ ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ದುರಂತವು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆಯ ಸುರಕ್ಷತೆ ಕುರಿತು ಎಚ್ಚರಿಕಾ ಕ್ರಮವಾಗಿದೆ. 

Latest News