ಜಿಲ್ಲೆಯ ಶಹಾಪುರ ನಗರದ ಪ್ರಸಿದ್ಧ ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಬಸನಗೌಡ ಅವರ ನಿಗೂಢ ಸಾವಿನ ಪ್ರಕರಣ ಇದೀಗ ಇಡೀ ಜಿಲ್ಲೆಯಲ್ಲಿ ಭಾರಿ ಸಂಚಲನ ಹಾಗೂ ತಲ್ಲಣ ಸೃಷ್ಟಿಸಿದೆ. ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಹಣ ದುರುಪಯೋಗ ಮತ್ತು ಠೇವಣಿದಾರರ ನಿರಂತರ ಒತ್ತಡದ ಹಿನ್ನೆಲೆಯಲ್ಲಿ ಅಧ್ಯಕ್ಷರು ತಮ್ಮ ಜೀವನವನ್ನು ಕೊನೆಗಾಣಿಸಿಕೊಂಡಿದ್ದಾರೆ. ಆದರೆ, ಅವರು ಕೊನೆಯುಸಿರೆಳೆಯುವುದಕ್ಕಿಂತ ಮುಂಚೆ ಅಜ್ಞಾತ ಸ್ಥಳದಿಂದ ರೆಕಾರ್ಡ್ ಮಾಡಿದ್ದ ವಿಡಿಯೋ ಹೇಳಿಕೆಯೊಂದು ಇದೀಗ ಲಭ್ಯವಾಗಿದ್ದು, ಅದರಲ್ಲಿರುವ ಸ್ಫೋಟಕ ಮಾಹಿತಿ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
"ಬ್ಯಾಂಕ್‌ನ ಹಗರಣದ ಹಿಂದೆ ಇರುವ ಆ ಪ್ರಭಾವಿ ಹಿರಿಯ ಯಾರು?" ಎಂಬ ಪ್ರಶ್ನೆ ಈಗ ಶಹಾಪುರ ಜನರನ್ನು ಕಾಡತೊಡಗಿದೆ. ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದ ಬಸನಗೌಡ ಅವರು ನಿನ್ನೆಯಷ್ಟೇ ಶಹಾಪುರಕ್ಕೆ ಮರಳಿದ್ದು, ತದನಂತರ ತೀವ್ರ ಮನನೊಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಠೇವಣಿದಾರರ ಪ್ರತಿಭಟನೆ ಮತ್ತು ಅಧ್ಯಕ್ಷರ ನಾಪತ್ತೆ
ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಬ್ಯಾಂಕ್‌ನಲ್ಲಿ ಗ್ರಾಹಕರು ಇಟ್ಟಿದ್ದ ಸುಮಾರು 10 ಕೋಟಿಗೂ ಅಧಿಕ ಠೇವಣಿ ಹಣ ದುರುಪಯೋಗವಾಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದ್ದಂತೆ, ಠೇವಣಿದಾರರು ತಮ್ಮ ಹಣವನ್ನು ವಾಪಸ್ ನೀಡುವಂತೆ ಆಗ್ರಹಿಸಿ ಬ್ಯಾಂಕ್ ಮುಂಭಾಗ ನಿರಂತರ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ವಂಚನೆಯ ಆರೋಪಗಳು ಕೇಳಿಬರುತ್ತಿದ್ದಂತೆ, ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಅಧ್ಯಕ್ಷ ಬಸನಗೌಡ ಅವರು ಸುಮಾರು 20 ದಿನಗಳ ಹಿಂದೆ ಇದ್ದಕ್ಕಿದ್ದಂತೆ ಊರು ಬಿಟ್ಟು ಅಜ್ಞಾತ ಸ್ಥಳಕ್ಕೆ ತಲೆಮರೆಸಿಕೊಂಡಿದ್ದರು. ಇದು ಗ್ರಾಹಕರಲ್ಲಿ ಮತ್ತಷ್ಟು ಆತಂಕ ಮೂಡಿಸಿತ್ತು.
ಅಜ್ಞಾತ ಸ್ಥಳದಿಂದ ಹೊರಬಿದ್ದ ವಿಡಿಯೋ
ಅಜ್ಞಾತ ಸ್ಥಳದಲ್ಲಿದ್ದ ಅವಧಿಯಲ್ಲಿ ಬಸನಗೌಡ ಅವರು ಮಾಡಿದ್ದ ಸೆಲ್ಫಿ ವಿಡಿಯೋ ಹೇಳಿಕೆಯೊಂದು ಇದೀಗ ಮಾಧ್ಯಮಗಳಿಗೆ ಲಭ್ಯವಾಗಿದೆ. ಆ ವಿಡಿಯೋದಲ್ಲಿ ಅವರು ತಮ್ಮ ಮೇಲಿರುವ ಆರೋಪಗಳ ಬಗ್ಗೆ ಕಣ್ಣೀರಿಡುತ್ತಲೇ ಕೆಲವು ಆಘಾತಕಾರಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾರೆ:
ಹಿರಿಯರ ಬಳಿ ಹಣ ಮರುಪಾವತಿ: "ನಾನು ಬ್ಯಾಂಕ್‌ನಿಂದ ವೈಯಕ್ತಿಕವಾಗಿ ಪಡೆದಿದ್ದ ಸಾಲದ ಮೊತ್ತವನ್ನ ಸಂಪೂರ್ಣವಾಗಿ ಮರು ಪಾವತಿಸಿದ್ದೇನೆ. ನಾನು ಈಗಾಗಲೇ ನಮ್ಮ 'ಹಿರಿಯರ' ಬಳಿ ಹಣವನ್ನು ವಾಪಸ್ ನೀಡಿದ್ದೇನೆ" ಎಂದು ಬಸನಗೌಡ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಆ 'ಹಿರಿಯರು' ಯಾರು ಎಂಬುದನ್ನು ಅವರು ನೇರವಾಗಿ ಬಹಿರಂಗಪಡಿಸದೆ ನಿಗೂಢವಾಗಿಟ್ಟಿದ್ದಾರೆ.
ಸಿಬ್ಬಂದಿಗಳಿಂದ ದ್ರೋಹ: "ಬ್ಯಾಂಕ್‌ನ ಸಿಬ್ಬಂದಿಗಳನ್ನು ಅತಿಯಾಗಿ ನಂಬಿ ನಾನು ಸಂಪೂರ್ಣವಾಗಿ ಮೋಸ ಹೋಗಿದ್ದೇನೆ. ಕೆಲವರು ಸಾಲ ಪಡೆದು ಹಣ ಮರುಪಾವತಿ ಮಾಡದೇ ಇರೋದರಿಂದ ನಮಗೆ ಠೇವಣಿದಾರರಿಗೆ ಸಕಾಲಕ್ಕೆ ಹಣ ನೀಡಲು ಸಾಧ್ಯವಾಗಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.
ಹಣ ವಾಪಸ್ ಪ್ರಕ್ರಿಯೆ: ಈಗಾಗಲೇ ಹಲವು ಠೇವಣಿದಾರರಿಗೆ ಹಣ ವಾಪಸ್ ಮಾಡಲಾಗಿದೆ. ಉಳಿದವರ ಸಾಲದ ಹಣ ಮರುಪಾವತಿ ಆದ ಕೂಡಲೇ ಎಲ್ಲರ ಹಣವನ್ನು ಹಿಂದುರುಗಿಸಲಾಗುವುದು, ಯಾರೂ ಅನ್ಯತಾ ಭಾವಿಸಬೇಡಿ ಎಂದು ಅವರು ಗ್ರಾಹಕರಲ್ಲಿ ವಿನಂತಿಸಿಕೊಂಡಿದ್ದರು.
ಕುಟುಂಬಸ್ಥರಿಗೆ ಮಾನಸಿಕ ಕಿರುಕುಳದ ಆರೋಪ
ತಮ್ಮ ವಿಡಿಯೋ ಸಂದೇಶದಲ್ಲಿ ಠೇವಣಿದಾರರಿಗೆ ಧೈರ್ಯ ತುಂಬಲು ಯತ್ನಿಸಿದ್ದ ಮೃತ ಬಸನಗೌಡ, ಮತ್ತೊಂದೆಡೆ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆಗುತ್ತಿದ್ದ ಕಿರುಕುಳದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. "ನಾನು ಊರಿನಲ್ಲಿ ಇಲ್ಲದ ಸಮಯದಲ್ಲಿ ಕೆಲವು ಠೇವಣಿದಾರರು ನಮ್ಮ ಮನೆಯವರಿಗೆ ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದು ಸರಿಯಲ್ಲ. ಸಾಲದ ಹಣ ವಸೂಲಿಯಾದ ತಕ್ಷಣ ಎಲ್ಲರ ಠೇವಣಿಯನ್ನು ಪ್ರಾಮಾಣಿಕವಾಗಿ ವಾಪಸ್ ನೀಡುತ್ತೇವೆ" ಎಂದು ಅವರು ಹೇಳಿದ್ದರು. ಆದರೆ, ಈ ವಿಡಿಯೋ ಮಾಡಿದ ಕೆಲವೇ ದಿನಗಳಲ್ಲಿ ಅವರು ಶಹಾಪುರಕ್ಕೆ ಮರಳಿ, ತೀವ್ರ ಮಾನಸಿಕ ಒತ್ತಡ ತಾಳಲಾರದೆ ಸಾವಿನ ಹಾದಿ ಹಿಡಿದಿದ್ದಾರೆ.
ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಈ ಮೊದಲೇ ದಾಖಲಾಗಿತ್ತು ದೂರು
ಬ್ಯಾಂಕ್‌ನಲ್ಲಿ 10 ಕೋಟಿ ರೂಪಾಯಿಗಳಿಗೂ ಅಧಿಕ ಸಾಲ ಮತ್ತು ಠೇವಣಿ ಹಣ ದುರುಪಯೋಗದ ತನಿಖೆ ಆರಂಭವಾಗುತ್ತಿದ್ದಂತೆ, ಅಧ್ಯಕ್ಷ ಬಸನಗೌಡ ಅವರು ಬ್ಯಾಂಕ್‌ನ ಉನ್ನತ ಅಧಿಕಾರಿಗಳ ವಿರುದ್ಧವೇ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂಬುದು ಇಲ್ಲಿ ಗಮನಾರ್ಹ.
ಬಸನಗೌಡ ನೀಡಿದ್ದ ದೂರು
ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್‌ನ ಸಿಇಒ ರವಿಕಿರಣರೆಡ್ಡಿ, ಸಹಾಯಕ ವ್ಯವಸ್ಥಾಪಕ ವೆಂಕಟರೆಡ್ಡಿ ಹೊಸಮನಿ ಹಾಗೂ ಪಿಗ್ಮಿ ಸಂಗ್ರಹಕಾರ ಸಂಗಣ್ಣ ಸೇರಿದಂತೆ ಬ್ಯಾಂಕಿನ ಇತರ ಸಿಬ್ಬಂದಿಗಳು ನನ್ನ (ಅಧ್ಯಕ್ಷರ) ಸಹಿಯನ್ನು ಪೋರ್ಜರಿ (ನಕಲಿ ಸಹಿ) ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಬಸನಗೌಡ ಅವರು ಪೊಲೀಸರಿಗೆ ಲಿಖಿತ ದೂರು ನೀಡಿದ್ದರು.
ಸಾವಿನ ಸುತ್ತ ಸುತ್ತುತ್ತಿರುವ ನಿಗೂಢತೆ
ದೂರು ನೀಡಿದ್ದ ಅಧ್ಯಕ್ಷರೇ ಈಗ ಇಲ್ಲವಾಗಿರುವುದರಿಂದ ಈ ಇಡೀ ಹಗರಣ ಹಾಗೂ ಈ ದುರಂತ ಘಟನೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಬ್ಯಾಂಕ್ ಸಿಬ್ಬಂದಿಯ ವಂಚನೆ, ಠೇವಣಿದಾರರ ಕಿರುಕುಳ ಒಂದೆಡೆಯಾದರೆ, ವಿಡಿಯೋದಲ್ಲಿ ಬಸನಗೌಡ ಅವರು ಉಲ್ಲೇಖಿಸಿರುವ ಆ 'ಹಿರಿಯ' ವ್ಯಕ್ತಿ ಯಾರು? ಬಸನಗೌಡ ಅವರು ಸಾಲದ ಹಣವನ್ನು ಯಾರಿಗೆ ತಲುಪಿಸಿದ್ದರು? ಎಂಬ ಪ್ರಶ್ನೆಗಳು ಪೊಲೀಸರಿಗೆ ಪ್ರಮುಖ ಸುಳಿವಗಬೇಕಿದೆ.
ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಬೀದಿಗೆ ಬಿದ್ದಿರುವ ಠೇವಣಿದಾರರು ಈಗ ತಮಗೆ ನ್ಯಾಯ ಸಿಗಬೇಕು ಮತ್ತು ಬಸನಗೌಡ ಅವರ ಈ ಪರಿಸ್ಥಿತಿಗೆ ಹಾಗೂ ಸಾವಿಗೆ ಕಾರಣರಾದವರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಶಹಾಪುರ ಪೊಲೀಸರು ಮೃತರ ಮೊಬೈಲ್ ಹಾಗೂ ವಿಡಿಯೋ ದಾಖಲೆಗಳನ್ನು ಆಧರಿಸಿ ತನಿಖೆಯನ್ನು ತೀವ್ರಗೊಳಿಸಿದ್ದಾರೆ.