Apr 5, 2026 Languages : ಕನ್ನಡ | English

ಇರಾನ್ ಗುಡ್ಡಗಾಡಿನಲ್ಲಿ ಅಮೆರಿಕ ಪೈಲಟ್ ಪತ್ತೆ - ಯುದ್ಧದ ನಡುವೆ ಬಿಗ್ ಟ್ವಿಸ್ಟ್ ಇಲ್ಲಿದೆ ನೋಡಿ!!

ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡ ದಿನದಿಂದ ದಿನಕ್ಕೆ ಕಪ್ಪಾಗುತ್ತಿದೆ. ಈ ನಡುವೆ ಇರಾನ್ ಭೂಪ್ರದೇಶದಲ್ಲಿ ನಾಪತ್ತೆಯಾಗಿದ್ದ ಅಮೆರಿಕದ ಯುದ್ಧ ವಿಮಾನದ ಪೈಲಟ್‌ನನ್ನು ಅದ್ಭುತವಾಗಿ ರಕ್ಷಿಸಲಾಗಿದೆ ಎಂಬ ಸುದ್ದಿ ಈಗ ಇಡೀ ವಿಶ್ವದ ಗಮನ ಸೆಳೆದಿದೆ. ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಿಚಾರವನ್ನು ಹಂಚಿಕೊಂಡಿದ್ದು, ಇದನ್ನ ಅಮೆರಿಕ ಇತಿಹಾಸದ "ಅತ್ಯಂತ ಧೈರ್ಯಶಾಲಿ ರಕ್ಷಣಾ ಕಾರ್ಯಾಚರಣೆ" ಎಂದು ಬಣ್ಣಿಸಿದ್ದಾರೆ.

ಬುಶೆಹ್ರ್ ಪರಮಾಣು ಕೇಂದ್ರದ ಮೇಲೆ ಅಟ್ಯಾಕ್
ಬುಶೆಹ್ರ್ ಪರಮಾಣು ಕೇಂದ್ರದ ಮೇಲೆ ಅಟ್ಯಾಕ್

ಅಮೆರಿಕದ ಬಲಿಷ್ಠ F-15E ಸ್ಟ್ರೈಕ್ ಈಗಲ್ ಯುದ್ಧ ವಿಮಾನವು ಇರಾನ್ ಮೇಲಿನ ಕಾರ್ಯಾಚರಣೆಯ ವೇಳೆ ಪತನಗೊಂಡಿತ್ತು. ವಿಮಾನದಲ್ಲಿದ್ದ ಇಬ್ಬರಲ್ಲಿ ಒಬ್ಬರನ್ನು ತಕ್ಷಣ ರಕ್ಷಿಸಲಾಗಿದ್ದರೂ, ಮತ್ತೊಬ್ಬ ಪೈಲಟ್ ನಾಪತ್ತೆಯಾಗಿದ್ದರು. ಇರಾನ್‌ನ ಗುಡ್ಡಗಾಡು ಪ್ರದೇಶದಲ್ಲಿ ಈ ಪೈಲಟ್ ಅಡಗಿಕೊಂಡಿದ್ದರು. ಇವರನ್ನು ಪತ್ತೆಹಚ್ಚಲು ಇರಾನ್ ಸರ್ಕಾರ ಎಷ್ಟು ತುದಿಗಾಲಲ್ಲಿ ನಿಂತಿತ್ತು ಎಂದರೆ, ಪೈಲಟ್ ಬಗ್ಗೆ ಮಾಹಿತಿ ನೀಡಿದವರಿಗೆ ಬರೋಬ್ಬರಿ 60,000 ಡಾಲರ್ (ಸುಮಾರು 50 ಲಕ್ಷ ರೂಪಾಯಿ) ಬಹುಮಾನ ಘೋಷಿಸಿತ್ತು!

ಟ್ರಂಪ್ ಅವರ ಪ್ರಕಾರ, ಈ ಪೈಲಟ್ ಇರಾನ್‌ನ ಪರ್ವತಗಳ ಹಿಂದೆ ಅಡಗಿದ್ದರು. ಅವರನ್ನು ರಕ್ಷಿಸಲು ಅಮೆರಿಕಕ್ಕೆ ಸಾಥ್ ನೀಡಿದ್ದು ಇಸ್ರೇಲಿ ಪಡೆಗಳು. ಇರಾನ್‌ನ ಸೇನೆ ಒಂದೆಡೆ ಹುಡುಕಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಅಲ್ಲಿನ ಸಾಮಾನ್ಯ ಜನರು ಕೂಡ ಹಣದ ಆಸೆಗೆ ಖಾಸಗಿ ಕಾರುಗಳಲ್ಲಿ ಪೈಲಟ್ ಹುಡುಕಲು ಹೊರಟಿದ್ದರು. ಇಷ್ಟೆಲ್ಲಾ ಸವಾಲುಗಳ ನಡುವೆ, ಒಬ್ಬನೇ ಒಬ್ಬ ಅಮೆರಿಕನ್ ಸೈನಿಕನಿಗೆ ಗಾಯವಾಗದಂತೆ ಪೈಲಟ್‌ನನ್ನು ಸುರಕ್ಷಿತವಾಗಿ ಕರೆತರಲಾಗಿದೆ.

ಇರಾನ್ ಮಾಡಿದ್ದೇನು?

ಇರಾನ್ ಮಾಧ್ಯಮಗಳ ಪ್ರಕಾರ, ಬುಶೆಹ್ರ್ ಎಂಬಲ್ಲಿನ ಪರಮಾಣು ಕೇಂದ್ರದ ಮೇಲೆ ಅಮೆರಿಕ ದಾಳಿ ಮಾಡಿದಾಗ ಈ ವಿಮಾನ ಪತನಗೊಂಡಿತ್ತು. ಇರಾನ್ ಕೂಡ ತನ್ನ ಶಕ್ತಿಯನ್ನು ಪ್ರದರ್ಶಿಸಲು ಯತ್ನಿಸುತ್ತಿದ್ದು, ಫೆಬ್ರವರಿಯಿಂದ ಈಚೆಗೆ ಇದು ಮೂರನೇ ಅಮೆರಿಕನ್ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. ಆದರೆ ಅಮೆರಿಕ ಮಾತ್ರ "ನಮ್ಮ ಎಲ್ಲಾ ವಿಮಾನಗಳು ಸುಭದ್ರವಾಗಿವೆ" ಎಂದು ಆರಂಭದಲ್ಲಿ ಹೇಳಿತ್ತಾದರೂ, ಈಗ ಪೈಲಟ್ ನಾಪತ್ತೆಯಾಗಿ ಸಿಕ್ಕಿರುವ ವಿಚಾರ ಸತ್ಯವೆಂದು ಒಪ್ಪಿಕೊಂಡಂತಾಗಿದೆ.

ಪೈಲಟ್ ಸಿಕ್ಕಿರುವುದು ಅಮೆರಿಕಕ್ಕೆ ಸಮಾಧಾನ ತಂದಿದ್ದರೂ, ಇರಾನ್ ಮತ್ತು ಅಮೆರಿಕ ನಡುವಿನ ಕಿಚ್ಚು ಮಾತ್ರ ಆರಿಲ್ಲ. ಇರಾನ್ ನಿರಂತರವಾಗಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ಮಾಡುತ್ತಲೇ ಇದೆ. ಅಮೆರಿಕ ಕೂಡ ಇರಾನ್‌ನ ಪ್ರಮುಖ ತಾಣಗಳನ್ನು ಗುರಿಯಾಗಿಸಿಕೊಂಡಿದೆ.

ಸದ್ಯಕ್ಕೆ ಈ "ಹೀರೋ" ಪೈಲಟ್‌ನ ರಕ್ಷಣೆ ಅಮೆರಿಕದ ಪಾಲಿಗೆ ದೊಡ್ಡ ವಿಜಯದಂತೆ ಕಾಣುತ್ತಿದೆ. "ನಮ್ಮ ಪೈಲಟ್ ಈಗ ಸುರಕ್ಷಿತವಾಗಿದ್ದಾರೆ, ಇದು ನಮ್ಮ ಸೇನೆಯ ತಾಕತ್ತು" ಎಂದು ಟ್ರಂಪ್ ಗುಡುಗಿದ್ದಾರೆ. ಈ ಯುದ್ಧ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಇಡೀ ಜಗತ್ತು ಕುತೂಹಲದಿಂದ ನೋಡುತ್ತಿದೆ.

Latest News