ವಿಶ್ವದ ಯಾವುದೋ ಮೂಲೆಯಲ್ಲಿ ಯುದ್ಧದ ಕಿಚ್ಚು ಹತ್ತಿದರೂ, ಅದರ ಬಿಸಿ ತಟ್ಟುವುದು ಮಾತ್ರ ನಿರಪರಾಧಿಗಳಿಗೆ. ಈಗಿನ ಯುದ್ಧದ ಬಿಕ್ಕಟ್ಟಿನಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ನೂರಾರು ಪ್ರಯಾಣಿಕರು ದುಬೈನಲ್ಲಿ ದಿಕ್ಕು ತೋಚದೆ ಅತಂತ್ರರಾಗಿದ್ದಾರೆ. ವಿಮಾನಗಳ ಸಂಚಾರ ಸ್ಥಗಿತ ಮತ್ತು ಆರ್ಥಿಕ ಮುಕ್ಕಟ್ಟಿನಿಂದಾಗಿ ಬೀದಿಗೆ ಬಿದ್ದಿರುವ ಪ್ರಯಾಣಿಕರ ಪಾಲಿಗೆ ಬಾಲಿವುಡ್ ನಟ ಸೋನು ಸೂದ್ ಅವರು ಮತ್ತೊಮ್ಮೆ ರಕ್ಷಕನಾಗಿ ನಿಂತಿದ್ದಾರೆ. ಆಶ್ರಯವಿಲ್ಲದೆ ಕಂಗಾಲಾಗಿದ್ದ ಸಂತ್ರಸ್ತರಿಗೆ ಇವರು ಭರವಸೆಯ ಆಪದ್ಬಾಂಧವರಾಗಿ ಕಾಣಿಸಿಕೊಂಡಿರುವುದು ವಿಶೇಷ.
ನೀವೇನಾದರೂ ದುಬೈನಲ್ಲಿ ದಿಕ್ಕು ತೋಚದೆ ಸಿಲುಕಿದ್ದರೆ ಅಥವಾ ನಿಮ್ಮ ಪರಿಚಯಸ್ಥರು ಅಲ್ಲಿ ವಸತಿ ಸಮಸ್ಯೆಯಿಂದ ಪರದಾಡುತ್ತಿದ್ದರೆ, ಸೋನು ಸೂದ್ ಅವರು ಒದಗಿಸುತ್ತಿರುವ ಉಚಿತ ಆಶ್ರಯದ ಲಾಭ ಪಡೆಯಿರಿ. ದುಗಾಸ್ಟಾ ಪ್ರಾಪರ್ಟೀಸ್ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ನಿಸ್ವಾರ್ಥ ಸೇವೆಯು ಸಂಕಷ್ಟದಲ್ಲಿರುವವರಿಗೆ ದೊಡ್ಡ ಆಸರೆಯಾಗಲಿದೆ.
ಸೋನು ಸೂದ್ ಅವರು ತಮ್ಮ ಸಂದೇಶದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ಇಲ್ಲಿ ಯಾವುದೇ ರಾಷ್ಟ್ರೀಯತೆ ಇಲ್ಲ, ಯಾವುದೇ ಷರತ್ತುಗಳಿಲ್ಲ, ಕೇವಲ ಮಾನವೀಯತೆ ಮಾತ್ರ. ಇದರರ್ಥ ನೀವು ಭಾರತದವರಾಗಿರಲಿ ಅಥವಾ ಬೇರೆ ಯಾವುದೇ ದೇಶದವರಾಗಿರಲಿ, ನಿಮ್ಮ ಧರ್ಮ, ಭಾಷೆ ಯಾವುದಾದರೂ ಸರಿ, ನೀವು ಕಷ್ಟದಲ್ಲಿದ್ದರೆ ನಿಮಗಾಗಿ ಬಾಗಿಲು ಸದಾ ತೆರೆದಿರುತ್ತದೆ.
ಸಹಾಯ ಪಡೆಯುವುದು ಹೇಗೆ?
ಸಂಕಷ್ಟದಲ್ಲಿರುವವರು ಸಹಾಯಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು
- ಇನ್‌ಸ್ಟಾಗ್ರಾಮ್ ಸಂಪರ್ಕ: ಇನ್‌ಸ್ಟಾಗ್ರಾಮ್‌ನಲ್ಲಿ @dugastaproperties ಎಂಬ ಖಾತೆಯನ್ನು ಹುಡುಕಿ.
- ನೇರ ಸಂದೇಶ (DM): ಆ ಖಾತೆಗೆ ನಿಮ್ಮ ಪರಿಸ್ಥಿತಿಯನ್ನು ವಿವರಿಸಿ ಸಂದೇಶ ಕಳುಹಿಸಿ.
- ಅಗತ್ಯ ವಿವರ: ನೀವು ಎಲ್ಲಿ ಸಿಲುಕಿದ್ದೀರಿ ಮತ್ತು ನಿಮಗೆ ಎಷ್ಟು ಜನರಿಗೆ ಆಶ್ರಯ ಬೇಕು ಎಂಬುದನ್ನು ತಿಳಿಸಿ. ತಂಡವು ತಕ್ಷಣವೇ ನಿಮ್ಮನ್ನು ಸಂಪರ್ಕಿಸಿ ಸುರಕ್ಷಿತ ಜಾಗಕ್ಕೆ ಕರೆದೊಯ್ಯುತ್ತದೆ.
ಸೋನು ಸೂದ್ ಅವರ ಸೇವಾ ಹಾದಿ
ಈ ಹಿಂದೆ ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸುವ ಮೂಲಕ ಸೋನು ಸೂದ್ 'ರಿಯಲ್ ಹೀರೋ' ಎನಿಸಿಕೊಂಡಿದ್ದರು. ಈಗ ಅಂತರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲೂ ಅದೇ ಸೇವೆಯನ್ನು ಮುಂದುವರಿಸುತ್ತಿದ್ದಾರೆ. ಯುದ್ಧವು ಮನುಷ್ಯರನ್ನು ದೈಹಿಕವಾಗಿ ಬೇರ್ಪಡಿಸಬಹುದು, ಆದರೆ ಇಂತಹ ಕಠಿಣ ಸಮಯದಲ್ಲಿ ಒಬ್ಬರಿಗೊಬ್ಬರು ಹೆಗಲಾಗುವುದು ನಮ್ಮ ಆದ್ಯ ಕರ್ತವ್ಯ ಎಂದು ಅವರು ಈ ಮೂಲಕ ಜಗತ್ತಿಗೆ ಸಾರಿದ್ದಾರೆ.
ನಮ್ಮ ಜವಾಬ್ದಾರಿ: ಮಾಹಿತಿಯನ್ನು ಹಂಚಿಕೊಳ್ಳಿ
ದುಬೈನಲ್ಲಿರುವ ಅಥವಾ ದುಬೈ ಮೂಲಕ ಪ್ರಯಾಣ ಬೆಳೆಸುವ ನಿಮ್ಮ ಸ್ನೇಹಿತರು, ಸಂಬಂಧಿಕರು ಅಥವಾ ಸಹೋದ್ಯೋಗಿಗಳಿಗೆ ಈ ಮಾಹಿತಿಯನ್ನು ತಲುಪಿಸಿ. ನಮಗೆ ಇದು ಕೇವಲ ಒಂದು ವಾಟ್ಸಾಪ್ ಸಂದೇಶ ಅಥವಾ ಪೋಸ್ಟ್ ಅನಿಸಬಹುದು, ಆದರೆ ಅಲ್ಲಿ ಅತಂತ್ರರಾಗಿರುವವರಿಗೆ ಇದು ಮರುಜೀವ ನೀಡುವಷ್ಟು ದೊಡ್ಡ ಸಹಾಯವಾಗಬಹುದು.
War has left many travelers stranded in Dubai.
— sonu sood (@SonuSood) March 5, 2026
If you or someone you know has nowhere to stay, we are offering safe accommodation free of cost.
No nationality. No conditions. Just humanity.
DM us on Instagram if you need help.
@dugastaproperties
Please share so this reaches… pic.twitter.com/TDDr9st79M
ಕಷ್ಟಕಾಲದಲ್ಲಿ ಸಹಾಯಕ್ಕೆ ಧಾವಿಸುವವರೇ ನಿಜವಾದ ದೇವರು. ಯಾವುದೇ ಫಲಾಪೇಕ್ಷೆ ಇಲ್ಲದೆ, ಕೇವಲ ಶಾಂತಿ ಮತ್ತು ಪ್ರೀತಿಯ ಸಂದೇಶವನ್ನ ನೀಡುತ್ತಿರುವ ಈ ಕಾರ್ಯ ಸ್ತುತ್ಯರ್ಹ. ಮಾನವೀಯತೆಯೇ ದೊಡ್ಡ ಧರ್ಮ ಎಂದು ನಂಬಿರುವ ಪ್ರತಿಯೊಬ್ಬರೂ ಈ ಮಾಹಿತಿಯನ್ನ ಹರಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ಆಸರೆಯಾಗೋಣ.