ವಿಶ್ವದ ಎರಡನೇ ಅತಿ ದೊಡ್ಡ ನಿಲ್ದಾಣವಾದ ದುಬೈನಲ್ಲಿ ಶನಿವಾರ ಸ್ಫೋಟದ ಸದ್ದು ಕೇಳಿಬಂದಿದ್ದರಿಂದ ವಿಮಾನ ನಿಲ್ದಾಣದಲ್ಲಿ ಆತಂಕ ಮನೆಮಾಡಿತ್ತು. ಆಕಾಶದಲ್ಲಿ ಬಾರಿ ಗಾತ್ರದ ಬೆಂಕಿ ಹೊಗೆಯ ದೃಶ್ಯಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಇದರಿಂದ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಾರ್ಯನಿರತ ದುಬೈ ನಿಲ್ದಾಣದಲ್ಲಿ ಕೇಳಿಬಂದ ಸ್ಫೋಟದ ಸದ್ದು ಕೇವಲ ಆತಂಕ ಮೂಡಿಸಿಲ್ಲದೆ, ಸಮಗ್ರ ವಿಮಾನಯಾನ ವ್ಯವಸ್ಥೆಯನ್ನ ಅಸ್ತವ್ಯಸ್ತಗೊಳಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಕೈಗೊಂಡ ಈ ತುರ್ತು ಕ್ರಮವು ಸಾವಿರಾರು ಜನರ ಪ್ರಯಾಣದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.
ದುಬೈ ನಗರದಾದ್ಯಂತ ಕೇಳಿಬಂದ ಸ್ಫೋಟದ ಶಬ್ದವು ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ದುಬೈ ಸರ್ಕಾರವು ತಕ್ಷಣವೇ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿತು. ವಿಮಾನ ನಿಲ್ದಾಣದಲ್ಲಿ ವಿಮಾನಗಳಿಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನ ತಕ್ಷಣವೇ ಸುರಕ್ಷಿತ ಸ್ಥಳಗಳಾದ ರೈಲು ಸುರಂಗಗಳ ಒಳಕ್ಕೆ ಸ್ಥಳಾಂತರಿಸಲಾಯಿತು. ಆರಂಭದಲ್ಲಿ ಸರ್ಕಾರವು ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವರದಿಗಳನ್ನು ತಳ್ಳಿಹಾಕಿತ್ತಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಹೊಗೆ ಏರುತ್ತಿರುವ ವಿಡಿಯೋಗಳು ಹರಿದಾಡುತ್ತಿದ್ದವು.
ಸಾವಿರಾರು ಜನರು ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದ್ದು, ಎಮಿರೇಟ್ಸ್ ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರು ಅತಂತ್ರರಾಗಿದ್ದಾರೆ. ಆದರೆ, ಮಾರ್ಚ್ ಅಂತ್ಯದವರೆಗೆ ಟಿಕೆಟ್ ಬುಕ್ ಮಾಡಿದ್ದವರಿಗೆ ಹಣದ ಮರುಪಾವತಿ ಅಥವಾ ಟಿಕೆಟ್ ಬದಲಾವಣೆಗೆ ಸಂಸ್ಥೆಯು ಮುಕ್ತ ಅವಕಾಶ ಕಲ್ಪಿಸಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ ಎನ್ನಬಹುದು.
A friend shared this video of Dubai airport being hit by an Iranian drone a few minutes back.
— Tarun Shukla (@shukla_tarun) March 7, 2026
Seems very close to the @Emirates plane
Really scary situation
✈️#iran #israel #dubai #us #war pic.twitter.com/8ICMtIM3kh
ಸ್ಫೋಟ ಮತ್ತು ಹೊಗೆಯ ಕಾರಣದಿಂದಾಗಿ ದುಬೈನಲ್ಲಿ ವಿಮಾನಗಳ ಓಡಾಟವನ್ನು ತಕ್ಷಣವೇ ಸ್ಥಗಿತಗೊಳಿಸಿ ಹೈ ಅಲರ್ಟ್ ಘೋಷಿಸಲಾಯಿತು. ಕೆಲವು ಗಂಟೆಗಳ ನಂತರ ಕೆಲವು ವಿಮಾನಗಳು ಹಾರಾಟ ಆರಂಭಿಸಿದರೂ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ವಿಮಾನಯಾನ ಸಂಸ್ಥೆಯಿಂದ ಖಚಿತ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಭದ್ರತಾ ತಪಾಸಣೆಯನ್ನು ತೀವ್ರಗೊಳಿಸಿದ್ದು, ಪರಿಸ್ಥಿತಿ ತಿಳಿಯಾಗುವವರೆಗೆ ಸಹಕರಿಸಲು ವಿನಂತಿಸಿದ್ದಾರೆ.