Mar 16, 2026 Languages : ಕನ್ನಡ | English

ಪಾಕಿಸ್ತಾನದ ಆರ್ಥಿಕತೆಗೆ 'ಹಾರ್ಮುಜ್' ಬಿಸಿ: ಮುಚ್ಚಿದ ಶಾಲೆಗಳು, ಏರಿದ ಬೆಲೆಗಳು - ಷರೀಫ್ ಸರ್ಕಾರಕ್ಕೆ ಬಿಡದ ಸಾಲದ ಕಾಟ!!

ಪಾಕಿಸ್ತಾನವು ಮತ್ತೊಮ್ಮೆ ಇತಿಹಾಸ ಕಾಣದಂತಹ ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈಗಾಗಲೇ ಸಾಲದ ಹೊರೆಯಲ್ಲಿ ನಲುಗುತ್ತಿದ್ದ ಈ ದೇಶಕ್ಕೆ, ಈಗ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ 17 ದಿನಗಳಿಂದ ನಡೆಯುತ್ತಿರುವ ಈ ಸಂಘರ್ಷವು ವಿಶ್ವದಾದ್ಯಂತ ಇಂಧನ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದರೂ, ಪಾಕಿಸ್ತಾನವು ಇದರ ನೇರ ಬಲಿಪಶುವಾಗಿ ಪರಿಣಮಿಸಿದೆ. ಇದಕ್ಕೆ ಪ್ರಮುಖ ಕಾರಣ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡೆತಡೆಗಳು.

ಹಾರ್ಮುಜ್ ಜಲಸಂಧಿ ಅಡೆತಡೆ – ಪಾಕಿಸ್ತಾನಕ್ಕೆ ಭಾರಿ ಹೊಡೆತ!!
ಹಾರ್ಮುಜ್ ಜಲಸಂಧಿ ಅಡೆತಡೆ – ಪಾಕಿಸ್ತಾನಕ್ಕೆ ಭಾರಿ ಹೊಡೆತ!!

ಪಾಕಿಸ್ತಾನವು ತನ್ನ ಇಂಧನದ ಅವಶ್ಯಕತೆಗಾಗಿ ಶೇಕಡಾ 85 ರಷ್ಟು ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಈ ತೈಲವು ಹಾರ್ಮುಜ್ ಜಲಸಂಧಿಯ ಮೂಲಕವೇ ಬರಬೇಕು. ಆದರೆ ಪರ್ಷಿಯನ್ ಕೊಲ್ಲಿಯಲ್ಲಿ ನಡೆಯುತ್ತಿರುವ ಹಡಗುಗಳ ಮೇಲಿನ ಸರಣಿ ದಾಳಿಗಳಿಂದಾಗಿ ತೈಲ ಟ್ಯಾಂಕರ್‌ಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಫೆಬ್ರವರಿ ಅಂತ್ಯದಿಂದ ಈವರೆಗೆ ಕನಿಷ್ಠ 16 ಹಡಗುಗಳ ಮೇಲೆ ದಾಳಿ ನಡೆದಿದ್ದು, ಇದರಿಂದಾಗಿ ಕರಾಚಿ ಬಂದರಿನ ಬಳಿ ಅನೇಕ ಹಡಗುಗಳು ನಿಂತಲ್ಲೇ ನಿಂತಿವೆ. ಈ ಪೂರೈಕೆಯ ಕೊರತೆಯಿಂದಾಗಿ ಪಾಕಿಸ್ತಾನ ಸರ್ಕಾರವು ಇಂಧನ ಬೆಲೆಯನ್ನು ಏಕಾಏಕಿ ಶೇಕಡಾ 20 ರಷ್ಟು ಹೆಚ್ಚಿಸಿದೆ. ಇದರಿಂದಾಗಿ ಪೆಟ್ರೋಲ್ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಸಾಲುಗಳು ಕಂಡುಬರುತ್ತಿವೆ.

ಇಂಧನ ಕೊರತೆಯನ್ನು ನಿಭಾಯಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವು ವಿಚಿತ್ರ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇಂಧನ ಉಳಿಸುವ ಉದ್ದೇಶದಿಂದ ದೇಶದಾದ್ಯಂತ ಶಾಲಾ-ಕಾಲೇಜುಗಳನ್ನು ಮುಂದಿನ ಎರಡು ವಾರಗಳವರೆಗೆ ಮುಚ್ಚಲು ಆದೇಶಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಕೆಲಸದ ಅವಧಿಯನ್ನು ವಾರಕ್ಕೆ ಕೇವಲ ನಾಲ್ಕು ದಿನಗಳಿಗೆ ಸೀಮಿತಗೊಳಿಸಲಾಗಿದೆ ಮತ್ತು ಸಾಧ್ಯವಿರುವ ಎಲ್ಲರಿಗೂ 'ವರ್ಕ್ ಫ್ರಮ್ ಹೋಮ್' ನೀಡಲಾಗಿದೆ. ಇದು ದೇಶದಲ್ಲಿ ಒಂದು ರೀತಿಯ ಅಘೋಷಿತ ಬಂದ್ ವಾತಾವರಣವನ್ನು ನಿರ್ಮಿಸಿದೆ. ಪಾಕಿಸ್ತಾನವು ತನ್ನ ಪರ್ಯಾಯ ಮಾರ್ಗಗಳಿಗಾಗಿ ಸೌದಿ ಅರೇಬಿಯಾದಲ್ಲಿ ಮನವಿ ಮಾಡುತ್ತಿದ್ದರೂ, ಸದ್ಯಕ್ಕೆ ಯಾವುದೇ ಪರಿಹಾರ ಕಾಣುತ್ತಿಲ್ಲ.

ಪಾಕಿಸ್ತಾನದ ಜಿಡಿಪಿಗೆ ಶೇಕಡಾ 23 ರಷ್ಟು ಕೊಡುಗೆ ನೀಡುವ ಕೃಷಿ ಕ್ಷೇತ್ರವೂ ಈಗ ಸಂಕಷ್ಟದಲ್ಲಿದೆ. ವಸಂತ ಕಾಲದ ಬೆಳೆಗಳ ಕಟಾವಿಗೆ ರೈತರು ಸಿದ್ಧರಾಗುತ್ತಿರುವಾಗಲೇ ಡೀಸೆಲ್ ಬೆಲೆ ಏರಿಕೆಯಾಗಿರುವುದು ಟ್ರ್ಯಾಕ್ಟರ್ ಮತ್ತು ಸಾರಿಗೆ ವೆಚ್ಚವನ್ನು ದುಪ್ಪಟ್ಟು ಮಾಡಿದೆ. ಇದರಿಂದಾಗಿ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರಸ್ತೆಗೆ ಚೆಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಅಫ್ಘಾನಿಸ್ತಾನದ ಗಡಿಯಲ್ಲಿನ ದಾಳಿಗಳು ಮತ್ತು ಬಲೂಚಿಸ್ತಾನದ ಬಂಡುಕೋರರ ಉಪಟಳವು ದೇಶದ ಆಂತರಿಕ ಭದ್ರತೆಯನ್ನು ಹದಗೆಡಿಸಿವೆ.

ಪಾಕಿಸ್ತಾನದ ಒಟ್ಟು ಸಾಲವು ಬರೋಬ್ಬರಿ 76 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗೆ ಏರಿಕೆಯಾಗಿದೆ. ಚೀನಾ ಮತ್ತು ಐಎಂಎಫ್‌ನಿಂದ ಪಡೆದ ಸಾಲದ ಬಡ್ಡಿ ಕಟ್ಟುವುದೇ ಈಗ ಸರ್ಕಾರಕ್ಕೆ ದೊಡ್ಡ ಹೊರೆಯಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ಅವರೇ ಹೇಳಿದಂತೆ, ಪಾಕಿಸ್ತಾನದ ನಾಯಕರು ವಿದೇಶಗಳಿಗೆ ಹೋದರೆ ಅಲ್ಲಿನವರು "ಸಹಾಯ ಕೇಳಲು ಬಂದಿದ್ದಾರೆ" ಎಂದು ಭಾವಿಸುವಷ್ಟು ದೇಶದ ಸ್ಥಿತಿ ಗಂಭೀರವಾಗಿದೆ. 2025-26ರ ಹಣಕಾಸು ವರ್ಷವೊಂದರಲ್ಲೇ ಪಾಕಿಸ್ತಾನವು 23 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ತೀರಿಸಬೇಕಿದೆ.

ಇಂಧನ ಬೆಲೆ ಏರಿಕೆ, ಹಣದುಬ್ಬರ, ಆಂತರಿಕ ದಾಳಿಗಳು ಮತ್ತು ಜಾಗತಿಕ ಯುದ್ಧದ ಪರಿಣಾಮಗಳು ಪಾಕಿಸ್ತಾನವನ್ನು ಸಂಪೂರ್ಣ ದಿವಾಳಿತನದ ಅಂಚಿಗೆ ತಂದು ನಿಲ್ಲಿಸಿವೆ. ಭಾರತದಂತಹ ದೇಶಗಳು ಈ ಜಾಗತಿಕ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರೆ, ಪಾಕಿಸ್ತಾನ ಮಾತ್ರ ದಿನೇ ದಿನೇ ಸಾಲದ ಅಂದಕಾರಕ್ಕೆ ಜಾರುತ್ತಿದೆ.

Latest News