ಜಗತ್ತಿನ ರಾಜಕೀಯದಲ್ಲಿ ಪಾಕಿಸ್ತಾನದ ನಡೆ ಯಾವಾಗಲೂ ಕುತೂಹಲ ಮತ್ತು ಅಷ್ಟೇ ವಿವಾದದಿಂದ ಕೂಡಿರುತ್ತದೆ. ಸದ್ಯ ಪಶ್ಚಿಮ ಏಷ್ಯಾದಲ್ಲಿ ಉರಿಯುತ್ತಿರುವ ಬೆಂಕಿಯನ್ನು ಆರಿಸಲು ಪಾಕಿಸ್ತಾನ ಈಗ 'ಶಾಂತಿ ದೂತ'ನ ವೇಷ ಧರಿಸಿದೆ. ಅತ್ತ ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ಮಾಡಿಸಲು ಮುಂದಾಗಿರುವ ಪಾಕಿಸ್ತಾನ, ಇತ್ತ ತನ್ನ ಪಕ್ಕದ ಮನೆಯಾದ ಅಫ್ಘಾನಿಸ್ತಾನದ ಜೊತೆ ಮಾತ್ರ ರಕ್ತಪಾತದ ಯುದ್ಧ ನಡೆಸುತ್ತಿದೆ. ಇದು ಪಾಕಿಸ್ತಾನದ ಅಪ್ಪಟ "ಡಬಲ್ ಗೇಮ್" ಅಲ್ದೆ ಇನ್ನೇನು?
ಸದ್ಯದ ದೊಡ್ಡ ಸುದ್ದಿ ಅಂದ್ರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ದಾಳಿಯನ್ನು ಹತ್ತು ದಿನಗಳ ಕಾಲ ಮುಂದೂಡಿದ್ದಾರೆ. ಇರಾನ್ ತನ್ನ ಇಂಧನ ಮೂಲಗಳ ಮೇಲಿನ ದಾಳಿಯನ್ನು ತಡೆಯಲು ಏಳು ದಿನಗಳ ಕಾಲಾವಕಾಶ ಕೇಳಿತ್ತು, ಆದರೆ ಟ್ರಂಪ್ ಅವರು ಹತ್ತು ದಿನಗಳ ಸಮಯ ನೀಡಿದ್ದಾರೆ (ಏಪ್ರಿಲ್ 6 ರವರೆಗೆ). ಈ ಮಧ್ಯೆ ಪಾಕಿಸ್ತಾನವು ತೆರೆಮರೆಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ನಡೆಸಲು ದಾರಿ ಮಾಡಿಕೊಡುತ್ತಿದೆ.
ಅಷ್ಟೇ ಅಲ್ಲ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಪಾಕಿಸ್ತಾನವನ್ನು ಒಂದು "ತಟಸ್ಥ ವೇದಿಕೆ" ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಇಮೇಜ್ ಸರಿಪಡಿಸಿಕೊಳ್ಳಲು ಮತ್ತು ಆರ್ಥಿಕ ಸಹಾಯ ಪಡೆಯಲು ಪಾಕಿಸ್ತಾನ ಈ ರೀತಿ 'ಮಧ್ಯಸ್ಥಿಕೆ'ಯ ನಾಟಕವಾಡುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಒಂದೆಡೆ ಶಾಂತಿಯ ಮಂತ್ರ ಜಪಿಸುತ್ತಿರುವ ಪಾಕಿಸ್ತಾನ, ಇನ್ನೊಂದೆಡೆ ಅಫ್ಘಾನಿಸ್ತಾನದ ಮೇಲೆ ಬಾಂಬ್‌ಗಳ ಮಳೆ ಸುರಿಸುತ್ತಿದೆ. ಇತ್ತೀಚೆಗೆ ಕಾಬೂಲ್‌ನ ಡ್ರಗ್ ರಿಹ್ಯಾಬಿಲಿಟೇಶನ್ ಸೆಂಟರ್ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಸುಮಾರು 400 ಮಂದಿ ಸಾವನ್ನಪ್ಪಿದ್ದಾರೆ ಎಂಬ ಆಘಾತಕಾರಿ ವರದಿಗಳು ಕಂಡು ಬಂದಿವೆ. ಅಫ್ಘಾನ್ ಗಡಿಯಲ್ಲಿ ಪಾಕಿಸ್ತಾನ ನಡೆಸುತ್ತಿರುವ ವೈಮಾನಿಕ ದಾಳಿಯಿಂದಾಗಿ ನೂರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಈ ಕಿತ್ತಾಟಕ್ಕೆ ಮುಖ್ಯ ಕಾರಣ 'ಡುರಾಂಡ್ ಲೈನ್' (Durand Line) ಗಡಿ ವಿವಾದ. ಅಫ್ಘಾನಿಸ್ತಾನ ಈ ಗಡಿಯನ್ನು ಒಪ್ಪುತ್ತಿಲ್ಲ, ಇತ್ತ ಪಾಕಿಸ್ತಾನವು ಅಫ್ಘಾನ್ ನೆಲದಿಂದ ಉಗ್ರರು ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪ್ರತಿ ದಾಳಿ ಮಾಡುತ್ತಿದೆ. 2025ರಲ್ಲಿ ನಡೆದ ಸಂಘರ್ಷದಲ್ಲಿ 17 ನಾಗರಿಕರು ಬಲಿಯಾಗಿದ್ದರು, ಈಗ ಅದು ಮತ್ತಷ್ಟು ಭೀಕರ ರೂಪ ಪಡೆದುಕೊಂಡಿದೆ.
ಪಾಕಿಸ್ತಾನದ ಈ "ರಾಜತಾಂತ್ರಿಕ ಹತಾಶೆ" ಯಾಕೆ?
ತನ್ನದೇ ನೆರೆಹೊರೆಯ ರಾಷ್ಟ್ರದ ಜೊತೆ ಸುಗಮ ಸಂಬಂಧ ಇಟ್ಟುಕೊಳ್ಳಲು ಸಾಧ್ಯವಾಗದ ಪಾಕಿಸ್ತಾನ, ಇರಾನ್ ಯುದ್ಧದಲ್ಲಿ ಸಂಧಾನಕಾರನಾಗಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ. ಇದರ ಹಿಂದೆ ಕೆಲವು ಕಾರಣಗಳಿವೆ. ತನ್ನ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇರುವುದರಿಂದ, ಜಗತ್ತಿನ ಮುಂದೆ ತಾನೊಬ್ಬ ಜವಾಬ್ದಾರಿಯುತ ರಾಷ್ಟ್ರ ಎಂದು ತೋರಿಸಿಕೊಳ್ಳುವ ಹಂಬಲ. ಅಮೆರಿಕದ ಪ್ರೀತಿಗೆ ಪಾತ್ರವಾದರೆ ಏನಾದರೂ ಆರ್ಥಿಕ ಸಹಾಯ ಸಿಗಬಹುದು ಎಂಬ ಆಸೆ. ಅಫ್ಘಾನಿಸ್ತಾನದಲ್ಲಿ ತಾನು ಮಾಡುತ್ತಿರುವ ಕೃತ್ಯಗಳನ್ನು ಮುಚ್ಚಿ ಹಾಕಲು ಈ ಸಂಧಾನದ ನಾಟಕ ಮಾಡುತ್ತಿದೆ ಎನ್ನಲಾಗಿ ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಕೇಳಿ ಬರುತ್ತಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಇರಾನ್ ಸಂಘರ್ಷದಲ್ಲಿ ಪಾಕಿಸ್ತಾನದ ಪಾತ್ರ ಎಷ್ಟೇ ದೊಡ್ಡದಿದ್ದರೂ, ಅಫ್ಘಾನಿಸ್ತಾನದ ಅಮಾಯಕರ ರಕ್ತ ಹರಿಸುತ್ತಿರುವ ಅದರ ಪಾಪದ ಕೃತ್ಯಗಳನ್ನು ಅದು ತೊಳೆದುಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ನೀರೆರೆಯುತ್ತಾ ಶಾಂತಿ ಮಾತುಕತೆ ನಡೆಸುವುದು ಪಾಕಿಸ್ತಾನದ ಹಳೆಯ ಚಾಳಿ.