ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕಣ್ಣಿನ ರೆಪ್ಪೆಯಂತೆ ಕಾಪಾಡಬೇಕಾದ ಪತಿಯೊಬ್ಬ, ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಹೊಲದಲ್ಲಿ ಹೂತುಹಾಕಿದ ಆಘಾತಕಾರಿ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕೇವಲ ಕೊಲೆ ಮಾಡುವುದಷ್ಟೇ ಅಲ್ಲದೆ, ಶವ ಹೂತ ಜಾಗದಲ್ಲಿ ಯಾರಿಗೂ ಸಂಶಯ ಬಾರದಿರಲಿ ಎಂದು ಅದರ ಮೇಲೆ ಗೋಧಿ ಬೆಳೆದು ವಿಕೃತಿ ಮೆರೆದಿದ್ದಾನೆ.
ನಳಂದ ಜಿಲ್ಲೆಯ ಮನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಲೋಟನ್ ಗ್ರಾಮದ ಮನೀಶ್ ಕುಮಾರ್ ಎಂಬಾತನಿಗೆ 20 ವರ್ಷದ ಸವಿತಾ ಕುಮಾರಿ ಎಂಬಾಕೆಯೊಂದಿಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಸುಂದರವಾಗಿ ಸಾಗಬೇಕಿದ್ದ ಇವರ ಸಂಸಾರದಲ್ಲಿ ಕೆಲವೇ ದಿನಗಳಲ್ಲಿ ಕೌಟುಂಬಿಕ ಕಲಹ ಶುರುವಾಗಿತ್ತು. ಸಣ್ಣಪುಟ್ಟ ವಿಚಾರಕ್ಕೆ ಶುರುವಾದ ಜಗಳ ಅಂತಿಮವಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ಪತ್ನಿ ಸವಿತಾಳನ್ನು ಹತ್ಯೆ ಮಾಡಿದ ಮನೀಶ್, ಪೊಲೀಸರಿಂದ ಬಚಾವಾಗಲು ಮಾಸ್ಟರ್ ಪ್ಲಾನ್ ಮಾಡಿದ್ದ. ಮನೆಯ ಸಮೀಪದ ಬಹುರಾ ಗ್ರಾಮದ ಹೊಲವೊಂದರಲ್ಲಿ ಶವವನ್ನು ಹೂತು ಹಾಕಿದ್ದ. ಅಷ್ಟಕ್ಕೇ ಸುಮ್ಮನಾಗದ ಈತ, ಆ ಜಾಗದಲ್ಲಿ ಮಣ್ಣು ಅಗೆದಿರುವುದು ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಅದರ ಮೇಲೆ ಗೋಧಿ ಬಿತ್ತನೆ ಮಾಡಿದ್ದ. ಗೋಧಿ ಸಸಿಗಳು ಬೆಳೆದು ನಿಂತ ಮೇಲೆ ಯಾರೂ ಅಲ್ಲಿ ಹುಡುಕುವುದಿಲ್ಲ ಎಂಬುದು ಆತನ ಲೆಕ್ಕಾಚಾರವಾಗಿತ್ತು.
ಸವಿತಾ ಕಾಣೆಯಾದ ಬಗ್ಗೆ ಮನೆಯವರಿಗೆ ಸಂಶಯ ಬಂದಾಗ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಮನೀಶ್‌ನನ್ನು ವಶಕ್ಕೆ ಪಡೆದು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ಆರೋಪಿ ತೋರಿಸಿದ ಜಾಗದಲ್ಲಿ ಪೊಲೀಸರು ಮಣ್ಣು ಅಗೆದಾಗ ಕೊಳೆತ ಸ್ಥಿತಿಯಲ್ಲಿ ಸವಿತಾಳ ಶವ ಪತ್ತೆಯಾಗಿದೆ. ಕೇವಲ ಆರು ತಿಂಗಳ ದಾಂಪತ್ಯ ಜೀವನದಲ್ಲಿ ಇಷ್ಟೊಂದು ದ್ವೇಷ ಅಡಗಿದೆಯೇ ಎಂದು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.