May 9, 2026 Languages : ಕನ್ನಡ | English

ಶಿಕ್ಷಕರ ನೇಮಕಾತಿಗಾಗಿ ಬೀದಿಗಿಳಿದವರ ಮೇಲೆ ಖಾಕಿ ದರ್ಪ - ಉದ್ಯೋಗಕ್ಕಾಗಿ ಬೃಹತ್ ಹೋರಾಟ, ಕಣ್ಣೀರಿಟ್ಟ ಆಕಾಂಕ್ಷಿಗಳು!!

ಪಾಟ್ನಾ: ಬಿಹಾರದಲ್ಲಿ ಕೆಲಸ ಅರಸಿ ಬೀದಿಗಿಳಿದ ಶಿಕ್ಷಕ ಅಭ್ಯರ್ಥಿಗಳ ಪರಿಸ್ಥಿತಿ ಈಗ ಹದಗೆಟ್ಟಿದೆ. ರಾಜ್ಯ ಸರ್ಕಾರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪದೇ ಪದೇ ಮುಂದೂಡುತ್ತಿರುವುದನ್ನು ಖಂಡಿಸಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಪಾಟ್ನಾದ ರಸ್ತೆಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಮತ್ತು ಪೊಲೀಸರ ನಡುವೆ ನಡೆದ ಸಂಘರ್ಷ ಈಗ ದೇಶಾದ್ಯಂತ ಸುದ್ದಿಯಾಗುತ್ತಿದೆ.

ಶಿಕ್ಷಕ ಅಭ್ಯರ್ಥಿಗಳ ಬೃಹತ್ ಪ್ರತಿಭಟನೆ – ಲಾಠಿ ಪ್ರಹಾರ!!!
ಶಿಕ್ಷಕ ಅಭ್ಯರ್ಥಿಗಳ ಬೃಹತ್ ಪ್ರತಿಭಟನೆ – ಲಾಠಿ ಪ್ರಹಾರ!!!

10 ಸಾವಿರ ಅಭ್ಯರ್ಥಿಗಳ ಬೃಹತ್ ಮೆರವಣಿಗೆ

ಸುಮಾರು 10 ಸಾವಿರಕ್ಕೂ ಹೆಚ್ಚು ಶಿಕ್ಷಕ ಆಕಾಂಕ್ಷಿಗಳು ಪಾಟ್ನಾದ ಬೀದಿಗಳಲ್ಲಿ ಬೃಹತ್ ಮೆರವಣಿಗೆ ನಡೆಸಿದರು. "ನಮಗೆ ಭರವಸೆ ಬೇಡ, ಕೆಲಸ ಬೇಕು" ಎಂಬ ಘೋಷಣೆಗಳೊಂದಿಗೆ ಇಡೀ ನಗರವನ್ನು ಸ್ತಬ್ಧಗೊಳಿಸಿದರು. ಈ ಬೃಹತ್ ಪ್ರತಿಭಟನೆಯಿಂದಾಗಿ ಪಾಟ್ನಾದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಗಂಟೆಗಟ್ಟಲೆ ವಾಹನ ಸವಾರರು ರಸ್ತೆಯಲ್ಲೇ ಸಿಲುಕಿಕೊಳ್ಳುವಂತಾಯಿತು.

ದಕ್​ಬಂಗ್ಲಾ ಚೌಕದಲ್ಲಿ ಬಿಗುವಿನ ವಾತಾವರಣ

ನಗರದ ಅತ್ಯಂತ ಪ್ರಮುಖ ವೃತ್ತವಾದ 'ದಕ್​ಬಂಗ್ಲಾ ಚೌಕ'ದಲ್ಲಿ ಪ್ರತಿಭಟನೆ ಕಾವು ಜೋರಾಗಿತ್ತು. ಸರ್ಕಾರ ಹಲವು ತಿಂಗಳುಗಳಿಂದ ಕೇವಲ ನೋಟಿಫಿಕೇಶನ್ ಹೊರಡಿಸುತ್ತೇವೆ ಎಂದು ಸಬೂಬು ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಯಾವುದೇ ನೇಮಕಾತಿ ನಡೆಯುತ್ತಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದರು. "ನಾವು ಎಷ್ಟು ವರ್ಷ ಅಂತ ಕಾದು ಕುಳಿತುಕೊಳ್ಳಬೇಕು?" ಎಂದು ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.

ರಣರಂಗವಾದ ರಾಜಧಾನಿ: ಪೊಲೀಸರ ಲಾಠಿ ಪ್ರಹಾರ

ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಪೊಲೀಸರು ಮೊದಲು ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಆಕ್ರೋಶಗೊಂಡಿದ್ದ ಅಭ್ಯರ್ಥಿಗಳು ಬ್ಯಾರಿಕೇಡ್‌ಗಳನ್ನು ನೂಕಿಕೊಂಡು ಮುಂದೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ಆರಂಭಿಸಿದರು.

ಪೊಲೀಸರ ಈ ಅತಿಯಾದ ಬಲಪ್ರಯೋಗದಿಂದಾಗಿ ಪಾಟ್ನಾ ರಸ್ತೆಗಳು ರಕ್ತಸಿಕ್ತವಾದವು. ಪೊಲೀಸರು ಅಭ್ಯರ್ಥಿಗಳನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಈ ವೇಳೆ ಹಲವಾರು ಯುವಕ-ಯುವತಿಯರು ಗಂಭೀರವಾಗಿ ಗಾಯಗೊಂಡಿದ್ದು, ರಸ್ತೆಯಲ್ಲೇ ಬಿದ್ದು ಒದ್ದಾಡುತ್ತಿರುವ ದೃಶ್ಯಗಳು ಎಂತವರ ಕಣ್ಣಲ್ಲೂ ನೀರು ತರಿಸುವಂತಿದ್ದವು. ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಈ ಘಟನೆಯ ನಂತರ ಅಭ್ಯರ್ಥಿಗಳ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. "ಪೊಲೀಸರ ಲಾಠಿ ಏಟಿನಿಂದ ನಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ಅಧಿಸೂಚನೆ ಹೊರಡಿಸದಿದ್ದರೆ ಪ್ರತಿಭಟನೆ ರಾಜ್ಯಾದ್ಯಂತ ಹರಡಲಿದೆ" ಎಂದು ಅಭ್ಯರ್ಥಿಗಳ ಸಂಘಟನೆ ಎಚ್ಚರಿಕೆ ನೀಡಿದೆ. ವಿರೋಧ ಪಕ್ಷಗಳು ಕೂಡ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ನಿರುದ್ಯೋಗಿಗಳ ಮೇಲೆ ಹಲ್ಲೆ ನಡೆಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿವೆ.

ಓದಿ ಬೆಳೆದು ಕೆಲಸಕ್ಕಾಗಿ ಕಾಯುತ್ತಿರುವ ಯುವಕರ ಮೇಲೆ ಈ ರೀತಿ ದರ್ಪ ತೋರಿಸುವುದು ಎಷ್ಟು ಸರಿ? ಶಿಕ್ಷಕರು ದೇಶದ ಭವಿಷ್ಯ ರೂಪಿಸುವವರು, ಅವರನ್ನೇ ರಸ್ತೆಯಲ್ಲಿ ಈ ರೀತಿ ನಡೆಸಿಕೊಳ್ಳುತ್ತಿರುವುದು ಬಿಹಾರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಸರ್ಕಾರ ಚರ್ಚೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬೇಕಿತ್ತು.  

Latest News