ಮಹಾಯುದ್ಧದ ಭೀತಿ: ಇರಾನ್ ಸೇನಾ ನೆಲೆಗಳ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ; ನಲುಗಿದ ಟೆಹ್ರಾನ್!!

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿದ್ದು, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್‌ನ ಆಯಕಟ್ಟಿನ ಮಿಲಿಟರಿ ತಾಣಗಳ ಮೇಲೆ ಸಂಘಟಿತ ವಾಯುದಾಳಿ ನಡೆಸಿವೆ. ಈ ಕಾರ್ಯಾಚರಣೆಯ ಪ್ರಮುಖ ಗುರಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಭೂಗತ ರಹಸ್ಯ ಬಂಕರ್ ಆಗಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಹೊರಬಿದ್ದಿದೆ. ಈ ದಾಳಿಯು ಇಡೀ ಮಧ್ಯಪ್ರಾಚ್ಯದ ಭದ್ರತಾ ವ್ಯವಸ್ಥೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. 

ಖಮೇನಿ ರಹಸ್ಯ ಬಂಕರ್ ಮೇಲೆ ಇಸ್ರೇಲ್ ಕಣ್ಣು!! | Photo Credit: Reuters Photos
ಖಮೇನಿ ರಹಸ್ಯ ಬಂಕರ್ ಮೇಲೆ ಇಸ್ರೇಲ್ ಕಣ್ಣು!! | Photo Credit: Reuters Photos

50 ಫೈಟರ್ ಜೆಟ್‌ಗಳ ದಾಳಿ ಮತ್ತು ಖಮೇನಿ ಬಂಕರ್

ಇಸ್ರೇಲ್ ರಕ್ಷಣಾ ಪಡೆಗಳ ಮೂಲಗಳ ಪ್ರಕಾರ, ಸುಮಾರು 50 ಅತ್ಯಾಧುನಿಕ ಫೈಟರ್ ಜೆಟ್‌ಗಳು ಏಕಕಾಲದಲ್ಲಿ ಇರಾನ್‌ನ ರಾಜಧಾನಿ ಟೆಹ್ರಾನ್ ಸಮೀಪವಿರುವ ಖಮೇನಿ ಅವರ ಬಂಕರ್ ಮೇಲೆ ದಾಳಿ ನಡೆಸಿವೆ. ಈ ಬಂಕರ್ ಅನ್ನು ಇರಾನ್ ಇಡೀ ದೇಶದಲ್ಲೇ ಅತ್ಯಂತ ಸುರಕ್ಷಿತ ಜಾಗ ಎಂದು ನಂಬಿತ್ತು. ಆದರೆ, ಇಸ್ರೇಲ್ ನಡೆಸಿದ ಭಾರಿ ಬಾಂಬ್ ದಾಳಿಯ ನಂತರವೂ ಈ ಜಾಗ ಇನ್ನೂ ಬಳಕೆಯಲ್ಲಿದೆ ಎನ್ನುವುದು ಎಲ್ಲರನ್ನೂ ಬೆಕ್ಕಿಬೀಳಿಸಿದೆ. ಇಸ್ರೇಲ್ ದೇಶದ ಹೇಳಿಕೆಯ ಪ್ರಕಾರ, ಇರಾನ್‌ನ ದೊಡ್ಡ ಅಧಿಕಾರಿಗಳು ಈಗಲೂ ಅಲ್ಲಿಯೇ ರಹಸ್ಯವಾಗಿ ಸೇರುತ್ತಿದ್ದಾರೆ ಮತ್ತು ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಆ ಬಂಕರ್ ಎಷ್ಟು ಗಟ್ಟಿಯಾಗಿ ನಿರ್ಮಾಣವಾಗಿದೆ ಎಂಬುದನ್ನು ತೋರಿಸುತ್ತದೆ. ಈ ದಾಳಿಯು ಇರಾನ್‌ನ ಆಡಳಿತ ವ್ಯವಸ್ಥೆಗೆ ದೊಡ್ಡ ಎಚ್ಚರಿಕೆಯಾಗಿದ್ದು, ಇಸ್ರೇಲ್ ಮತ್ತು ಅಮೆರಿಕದ ತಂತ್ರಜ್ಞಾನ ಹಾಗೂ ಯುದ್ಧ ಸಾಮರ್ಥ್ಯ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿದೆ.

ದಾಳಿಯ ಉದ್ದೇಶ ಮತ್ತು ಅಮೆರಿಕದ ಬೆಂಬಲ

ಇರಾನ್ ಪ್ರಚೋದಿಸುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಮತ್ತು ಇತ್ತೀಚಿನ ಕ್ಷಿಪಣಿ ದಾಳಿಗಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ತಿಳಿಸಿದೆ. ಈ ಇಡೀ ಕಾರ್ಯಾಚರಣೆಗೆ ಅಮೆರಿಕವು ಪರೋಕ್ಷ ಮತ್ತು ಪ್ರತ್ಯಕ್ಷ ಬೆಂಬಲ ನೀಡಿದೆ. ಅಮೆರಿಕದ ಅತ್ಯಾಧುನಿಕ ರಾಡಾರ್ ವ್ಯವಸ್ಥೆಗಳು ಮತ್ತು ಗುಪ್ತಚರ ಮಾಹಿತಿಗಳನ್ನು ಬಳಸಿ ಇರಾನ್‌ನ ರಕ್ಷಣಾ ಗೋಡೆಯನ್ನು ಭೇದಿಸಲಾಗಿದೆ. ಈ ದಾಳಿಯು ಕೇವಲ ಸೇನಾ ನೆಲೆಗಳಿಗೆ ಸೀಮಿತವಾಗಿಲ್ಲದೆ, ಇರಾನ್‌ನ ಆರ್ಥಿಕ ಮತ್ತು ಶಕ್ತಿ ಕೇಂದ್ರಗಳ ಮೇಲೆಯೂ ಪರಿಣಾಮ ಬೀರಿದೆ.

ಇರಾನ್‌ನಲ್ಲಿ ಆತಂಕದ ವಾತಾವರಣ

ದಾಳಿಯ ನಂತರ ಟೆಹ್ರಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿದ್ದು, ಜನರಲ್ಲಿ ತೀವ್ರ ಆತಂಕ ಮನೆಮಾಡಿದೆ. ಇರಾನ್‌ನ ಅಧಿಕಾರಿಗಳು ಈ ದಾಳಿಯ ಅಮಾನವೀಯ ಕೃತ್ಯ ಎಂದು ಕರೆದಿದ್ದಾರೆ. ಆದರೆ, ತಮ್ಮ ಬಂಕರ್‌ಗಳು ಮತ್ತು ಸೇನಾ ಸಾಮರ್ಥ್ಯ ಇಂದಿಗೂ ಸುಸ್ಥಿತಿಯಲ್ಲಿದೆ ಎಂದು ಇರಾನ್ ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಆದರೂ, 50 ಜೆಟ್‌ಗಳ ಮೂಲಕ ನಡೆಸಿದ ಈ ಬೃಹತ್ ಪ್ರಹಾರವು ಇರಾನ್‌ನ ರಕ್ಷಣಾ ವ್ಯವಸ್ಥೆಯಲ್ಲಿ ದೊಡ್ಡ ಬಿರುಕು ಮೂಡಿಸಿರುವುದು ಸುಳ್ಳಲ್ಲ.

ಜಾಗತಿಕ ಮಾರುಕಟ್ಟೆ ಮತ್ತು ಮುಂದಿನ ಪರಿಣಾಮಗಳು

ಸ್ರೇಲ್ ಮತ್ತು ಅಮೆರಿಕದ ಈ ಜಂಟಿ ದಾಳಿಯ ವಾರ್ತೆ ಹರಡುತ್ತಿದ್ದಂತೆಯೇ ವಿಶ್ವದ ಇಂಧನ ಮಾರುಕಟ್ಟೆಯಲ್ಲಿ ಕಂಪನ ಶುರುವಾಗಿದೆ. ಮಧ್ಯಪ್ರಾಚ್ಯದ ಅಸ್ಥಿರತೆಯಿಂದಾಗಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುವ ಮುನ್ಸೂಚನೆ ಸಿಗುತ್ತಿದ್ದು, ಜಾಗತಿಕ ಷೇರು ಮಾರುಕಟ್ಟೆಗಳು ಕೂಡ ಭಾರೀ ಕುಸಿತದ ಭೀತಿ ಎದುರಿಸುತ್ತಿವೆ. ಒಂದು ವೇಳೆ ಇರಾನ್ ಪ್ರತಿಯಾಗಿ ಬೃಹತ್ ದಾಳಿ ಸಂಘಟಿಸಿದರೆ, ಇದು ಕೇವಲ ಪ್ರಾದೇಶಿಕ ಸಂಘರ್ಷವಾಗಿ ಉಳಿಯದೆ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಬಹುದು ಎಂದು ಅಂತರಾಷ್ಟ್ರೀಯ ರಾಜತಾಂತ್ರಿಕ ತಜ್ಞರು ಎಚ್ಚರಿಸುತ್ತಿದ್ದಾರೆ.

Latest News