ಫೆಬ್ರವರಿ 28, 2026 ರ ಶನಿವಾರ ಇಡೀ ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ದಾಖಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ್ದ ಜಂಟಿ ದಾಳಿಗೆ ಪ್ರತಿಯಾಗಿ, ಇರಾನ್ ಈಗ ಇಸ್ರೇಲ್ ಮೇಲೆ ನೇರ ಯುದ್ಧ ಸಾರಿದೆ. ಇರಾನ್‌ನಿಂದ ಸುಮಾರು 30ಕ್ಕೂ ಹೆಚ್ಚು ಬೃಹತ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇಸ್ರೇಲ್‌ನ ಪ್ರಮುಖ ನಗರಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ನುಗ್ಗಿ ಬಂದಿವೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಖಚಿತಪಡಿಸಿದೆ.
ಇಸ್ರೇಲ್ ಕಾಲಮಾನದ ಪ್ರಕಾರ ರಾತ್ರಿ 8:15ಕ್ಕೆ ದೇಶದಾದ್ಯಂತ ಅಪಾಯದ ಮುನ್ಸೂಚನೆ ನೀಡುವ 'ರೆಡ್ ಅಲರ್ಟ್' ಸೈರನ್‌ಗಳು ಮೊಳಗಿದವು. ಟೆಲ್ ಅವಿವ್ ಮತ್ತು ಉತ್ತರ ಇಸ್ರೇಲ್‌ನ ಜನರಿಗೆ ತಕ್ಷಣವೇ ಸುರಕ್ಷಿತ ಬಂಕರ್‌ಗಳಿಗೆ ತೆರಳಲು ಮೊಬೈಲ್ ಮೂಲಕ ತುರ್ತು ಸಂದೇಶ ಕಳುಹಿಸಲಾಯಿತು. "ಶತ್ರು ರಾಷ್ಟ್ರದಿಂದ ಕ್ಷಿಪಣಿಗಳು ಬರುತ್ತಿವೆ, ಯಾರು ಕೂಡ ಹೊರಗಡೆ ಇರಬೇಡಿ" ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿತು. ಜೆರುಸಲೇಂ ಆಕಾಶದಲ್ಲಿ ಇಸ್ರೇಲ್‌ನ 'ಆರೋ-3' ಮತ್ತು 'ಡೇವಿಡ್ ಸ್ಲಿಂಗ್' ಎಂಬ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು ಇರಾನ್‌ನ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುತ್ತಿರುವಾಗ ಭೀಕರ ಸ್ಫೋಟದ ಶಬ್ದಗಳು ಕೇಳಿಬಂದವು.
ಇಂದು ಬೆಳಿಗ್ಗೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್‌ನ ಟೆಹ್ರಾನ್‌ನಲ್ಲಿರುವ ಸೇನಾ ಕೇಂದ್ರಗಳು ಮತ್ತು ಸರ್ಕಾರಿ ಕಟ್ಟಡಗಳ ಮೇಲೆ 'ಆಪರೇಷನ್ ರೋರಿಂಗ್ ಲಯನ್' ಹೆಸರಿನಲ್ಲಿ ಭೀಕರ ದಾಳಿ ನಡೆಸಿದ್ದವು. ಇದಕ್ಕೆ ಪ್ರತೀಕಾರವಾಗಿ ಇರಾನ್ ಈ ಕ್ಷಿಪಣಿಗಳನ್ನು ಉಡಾವಣೆ ಮಾಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), "ಇದು ಇಸ್ರೇಲ್‌ಗೆ ನಾವು ನೀಡುತ್ತಿರುವ ಮೊದಲ ಹಂತದ ಶಿಕ್ಷೆ" ಎಂದು ಹೇಳಿಕೊಂಡಿದೆ. ಇಸ್ರೇಲ್ ಮಾತ್ರವಲ್ಲದೆ ಯೆಮನ್‌ನ ಹೌತಿ ಬಂಡುಕೋರರು ಮತ್ತು ಇರಾಕ್‌ನ ಉಗ್ರಗಾಮಿ ಗುಂಪುಗಳು ಕೂಡ ಇಸ್ರೇಲ್ ಮೇಲೆ ಡ್ರೋನ್ ದಾಳಿ ನಡೆಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ಈ ಯುದ್ಧದ ಸುದ್ದಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಕಚ್ಚಾ ತೈಲದ ಬೆಲೆ ಏಕಾಏಕಿ ಶೇಕಡಾ 8 ರಷ್ಟು ಏರಿಕೆಯಾಗಿದೆ. ಯುದ್ಧದ ಭೀತಿಯಿಂದಾಗಿ ಇರಾನ್, ಇರಾಕ್, ಜೋರ್ಡಾನ್ ಮತ್ತು ಇಸ್ರೇಲ್ ದೇಶಗಳ ಆಕಾಶಮಾರ್ಗವನ್ನು ಮುಚ್ಚಲಾಗಿದೆ. ಪರಿಣಾಮವಾಗಿ, ಭಾರತದ ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಹಲವು ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಈ ಭಾಗಕ್ಕೆ ಹೋಗುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಿವೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ.
ಈಗ ನಡೆದಿರುವ ಕ್ಷಿಪಣಿ ದಾಳಿಯು ದೊಡ್ಡ ಮಟ್ಟದ ಸಾವು-ನೋವುಗಳಿಗೆ ಕಾರಣವಾಗುತ್ತದೆಯೇ ಎಂಬುದು ಮುಂದಿನ ಕೆಲವು ಗಂಟೆಗಳಲ್ಲಿ ತಿಳಿಯಲಿದೆ. ಒಂದು ವೇಳೆ ಇಸ್ರೇಲ್‌ನಲ್ಲಿ ಅತಿ ಹೆಚ್ಚು ಹಾನ ಸಂಭವಿಸಿದರೆ, ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಮತ್ತಷ್ಟು ಭೀಕರವಾಗಿ ತಿರುಗಿಬೀಳುವ ಸಾಧ್ಯತೆ ಇದೆ. ಸದ್ಯಕ್ಕೆ ಇಡೀ ವಿಶ್ವವು ಉಸಿರು ಬಿಗಿಹಿಡಿದು ಮಧ್ಯಪ್ರಾಚ್ಯದ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಈ ಸಂಘರ್ಷವು ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತದೆಯೇ ಎಂಬ ಆತಂಕ ಎಲ್ಲರಲ್ಲೂ ಮನೆಮಾಡಿದೆ.