ಇತ್ತೀಚಿನ ದಿನಗಳಲ್ಲಿ ಪೇಪರ್ ತೆರೆದರೆ ಅಥವಾ ಟಿವಿ ಹಾಕಿದರೆ ಸಾಕು, 'ಆನೆ ತುಳಿತಕ್ಕೆ ಬಲಿ', 'ಚಿರತೆ ದಾಳಿ' ಎಂಬ ಸುದ್ದಿಗಳೇ ಹೆಚ್ಚು. ಅಸಲಿಗೆ ಈ ಸಾವು-ನೋವುಗಳಿಗೆ ಹೊಣೆ ಯಾರು? ಪ್ರಾಣಿಗಳಾ ಅಥವಾ ಮನುಷ್ಯನಾ? ನಾವಂತೂ "ಅಯ್ಯೋ ಪಾಪ, ಅಮಾಯಕರು ಪ್ರಾಣ ಕಳೆದುಕೊಂಡರು" ಎನ್ನುತ್ತೇವೆ, ಅದು ನಿಜವೂ ಹೌದು. ಆದರೆ ಆನೆಗೆ ಎದುರಿಗಿರುವವನು ಅಮಾಯಕನೋ ಅಥವಾ ತನ್ನ ಮೇಲೆ ಪಟಾಕಿ ಎಸೆದ ದಷ್ಟನೋ ಎಂಬ ವ್ಯತ್ಯಾಸ ತಿಳಿಯುವುದಿಲ್ಲ. ಯಾರೋ ಮಾಡಿದ ತಪ್ಪಿಗೆ ದಾರಿಯಲ್ಲಿ ಸಿಗುವ ಅಮಾಯಕರು ಬಲಿಯಾಗುತ್ತಿದ್ದಾರೆ.
ನಾವು 30-40 ವರ್ಷಗಳ ಹಿಂದಿನ ಕೊಡಗನ್ನೇ ನೆನಪಿಸಿಕೊಂಡರೆ, ಆಗಿನ ಕಾಲದಲ್ಲಿ ಜನ ಹೆಚ್ಚಾಗಿ ಕಾಲ್ನಡಿಗೆಯಲ್ಲೇ ಓಡಾಡುತ್ತಿದ್ದರು. ಮಕ್ಕಳು ಕಾಡಿನ ಹಾದಿಯಲ್ಲೇ ಶಾಲೆಗೆ ಹೋಗುತ್ತಿದ್ದರು. ಆಗ ಕಾಡುಪ್ರಾಣಿಗಳೂ ಇದ್ದವು, ಮನುಷ್ಯರೂ ಇದ್ದರು. ಆದರೆ ಇವತ್ತಿನಷ್ಟು ಸಂಘರ್ಷ ಅಂದು ಇರಲಿಲ್ಲ. ಸಂಕೇತ್ ಪೂವಯ್ಯ ಅವರಂತಹ ತಜ್ಞರು ಹೇಳುವಂತೆ, ಮನುಷ್ಯ ಯಾವಾಗ ಪ್ರಾಣಿಗಳ ನೆಲೆಗೆ ಕೈ ಹಾಕಿದನೋ, ಅಂದೇ ಈ ಯುದ್ಧ ಶುರುವಾಯಿತು.
ಅರಣ್ಯನಾಶ, ಅಕ್ರಮ ಗಣಿಗಾರಿಕೆ, ಕಾಡಿನೊಳಗೆ ರೆಸಾರ್ಟ್‌ಗಳ ನಿರ್ಮಾಣ – ಇವೆಲ್ಲವೂ ಪ್ರಾಣಿಗಳನ್ನು ಹತಾಶೆಗೊಳಿಸಿವೆ. ಹಸಿವು ಎನ್ನುವುದು ಎಲ್ಲ ಜೀವಿಗಳಿಗೂ ಒಂದೇ. ಕಾಡಿನಲ್ಲಿ ತಿನ್ನಲು ಏನೂ ಸಿಗದಿದ್ದಾಗ ಅವು ನಾಡಿನತ್ತ ಮುಖ ಮಾಡುವುದು ಸಹಜ ತಾನೆ?
ಒಂದು ಮುಖ್ಯವಾದ ವಿಷಯವೆಂದರೆ, ಈಗ ನಮಗೆ ತೊಂದರೆ ಕೊಡುತ್ತಿರುವ ಬಹುತೇಕ ಆನೆಗಳು ಹುಟ್ಟಿದ್ದೇ ಕಾಫಿ ತೋಟಗಳಲ್ಲಿ ಅಥವಾ ಕಾಡಿನ ಅಂಚಿನಲ್ಲಿ. ಇವುಗಳಿಗೆ ಕಾಡಿಗಿಂತ ನಾಡಿನ ತೋಟಗಳೇ ಹೆಚ್ಚು ಪರಿಚಿತ. ಇಲ್ಲಿ ಸುಲಭವಾಗಿ ಆಹಾರ ಸಿಗುವಾಗ ಅವು ಮತ್ತೆ ಕಾಡಿಗೆ ಹೋಗಲು ಬಯಸುವುದಿಲ್ಲ. ಅರಣ್ಯ ಇಲಾಖೆಯವರು ಇವುಗಳನ್ನು ಕಾಡಿಗೆ ಅಟ್ಟಿದರೂ, ಅವು ಮತ್ತೆ ಸುತ್ತಿ ಬಳಸಿ ತೋಟಗಳಿಗೇ ಬಂದು ಬೀಡು ಬಿಡುತ್ತವೆ. ಈ 'ನಾಡಿನ ಆನೆಗಳನ್ನು' ಕಾಡಿಗೆ ಅಟ್ಟುವ ಪ್ರಯತ್ನ ನಡೆದಾಗ ಅವು ಆಕ್ರೋಶಗೊಂಡು ಮನುಷ್ಯರ ಮೇಲೆ ತಿರುಗಿ ಬೀಳುತ್ತವೆ.
ಹಿಂದೆ ವಾಹನದ ಶಬ್ದ ಕೇಳಿದರೆ ಸಾಕು ಪ್ರಾಣಿಗಳು ದೂರ ಓಡುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪ್ರಾಣಿಗಳಿಗೆ ಮನುಷ್ಯರ ಗದ್ದಲ, ಗಾಡಿಗಳ ಹಾರ್ನ್ ಶಬ್ದ ಅಭ್ಯಾಸವಾಗಿ ಹೋಗಿದೆ. ಈಗ ರಸ್ತೆಯಲ್ಲಿ ಆನೆ ಕಂಡರೆ ನಾವೇ ಪಕ್ಕಕ್ಕೆ ಸರಿಯಬೇಕೇ ಹೊರತು, ಅವು ನಮ್ಮನ್ನು ಕಂಡು ಹೆದರುವುದಿಲ್ಲ. ನಾವು ರೈಲ್ವೆ ಕಂಬಿ ಬೇಲಿ, ವಿದ್ಯುತ್ ಬೇಲಿ ಅಂತೆಲ್ಲಾ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದೇವೆ. ಆದರೆ ಆನೆಗಳು ಮನುಷ್ಯರಿಗಿಂತ ಬುದ್ಧಿವಂತಿಕೆಯಿಂದ ಆ ಬೇಲಿಗಳನ್ನು ದಾಟಿ ಬರುತ್ತಿವೆ. ಸರ್ಕಾರಗಳ ಎಲ್ಲಾ ಪ್ರಯತ್ನಗಳೂ ಈಗ 'ಶೂನ್ಯ' ಫಲಿತಾಂಶ ನೀಡುತ್ತಿವೆ.
ಯಾವುದೇ ಘಟನೆ ನಡೆದಾಗ ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಬೊಟ್ಟು ಮಾಡುವುದು ಅಥವಾ ಪ್ರತಿಭಟನೆ ಮಾಡುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಅರಣ್ಯ ರಕ್ಷಣೆ ಮಾಡುವುದು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡರ ಜವಾಬ್ದಾರಿಯೂ ಆಗಿತ್ತು. ಎಲ್ಲರೂ ಸೇರಿ ಪರಿಸರವನ್ನು ಹಾಳು ಮಾಡಿ ಈಗ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ. ಕಾಡಿನ ಅಂಚಿನಲ್ಲಿ ಬದುಕುವ ಜನರ ಸಂಕಷ್ಟ ನಗರದಲ್ಲಿ ಕುಳಿತವರಿಗೆ ಅಥವಾ ಮಾಧ್ಯಮಗಳ ಅಬ್ಬರಕ್ಕೆ ಅರ್ಥವಾಗುವುದಿಲ್ಲ.
'ಮಾಡಿದ್ದುಣ್ಣೋ ಮಾರಾಯ' ಎಂಬಂತೆ, ನಾವು ಪ್ರಕೃತಿಗೆ ಮಾಡಿದ ಹಾನಿಯನ್ನು ನಾವೇ ಅನುಭವಿಸುತ್ತಿದ್ದೇವೆ. ಮಾಡಿದ ತಪ್ಪನ್ನು ಈಗ ಸರಿಪಡಿಸಲು ಸಾಧ್ಯವಾಗದ ಹಂತಕ್ಕೆ ನಾವು ತಲುಪಿದ್ದೇವೆ. ಇನ್ನು ಮುಂದೆ ನಾವು ಮಾಡಬಹುದಾದ ಒಂದೇ ಕೆಲಸವೆಂದರೆ, ವನ್ಯಜೀವಿಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವುಗಳಿಗೆ ಹಾನಿಯಾಗದಂತೆ, ನಮಗೂ ತೊಂದರೆಯಾಗದಂತೆ ಬದುಕುವ ದಾರಿಯನ್ನು ಕಂಡುಕೊಳ್ಳುವುದು. ಪ್ರಕೃತಿಯ ಜೊತೆಗಿನ ಈ ಸಂಘರ್ಷದಲ್ಲಿ ಅಂತಿಮವಾಗಿ ಸೋಲುವುದು ಮನುಷ್ಯನೇ ಎಂಬ ಅರಿವು ನಮಗಿರಲಿ.