ಕಾರ್ಪೋರೇಟ್ ಬದುಕಿಗೆ 'ಗುಡ್ ಬೈ' ಹೇಳಿ ಹಳ್ಳಿಗೆ ಮರಳಿದ ಯುವಕ - ಮನೆಯಲ್ಲೇ ಕುಳಿತು ತಿಂಗಳಿಗೆ ₹1.8 ಲಕ್ಷ ಸಂಪಾದಿಸಿ ಉದ್ಯಮಿಯಾಗಿ ಭರ್ಜರಿ ಯಶಸ್ಸು!!

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾರ್ಪೋರೇಟ್ ಕ್ಷೇತ್ರದಲ್ಲಿ ಒಂದು ಉತ್ತಮ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ಒಂದು ದೊಡ್ಡ ಸವಾಲು. ಒಮ್ಮೆ ಕೈತುಂಬಾ ಸಂಬಳ ಬರುವ ಐಷಾರಾಮಿ ಕೆಲಸ ಸಿಕ್ಕರೆ ಸಾಕು, ಜೀವನ ಸೆಟಲ್ ಆಯ್ತು ಎಂದುಕೊಳ್ಳುವವರೇ ಹೆಚ್ಚು. ಆದರೆ, ಇಂತಹ ಭದ್ರತೆಯಿರುವ, ಪ್ರತಿಷ್ಠಿತ ಮತ್ತು ಕೈತುಂಬಾ ಸಂಬಳ ತಂದುಕೊಡುವ ಕಾರ್ಪೋರೇಟ್ ಉದ್ಯೋಗವನ್ನು ಸ್ವಇಚ್ಛೆಯಿಂದ ಬಿಡಲು ಗಟ್ಟಿ ಗುಂಡಿಗೆ ಬೇಕು. ಇಲ್ಲೊಬ್ಬ ಯುವಕ ಅಂತಹದ್ದೇ ಒಂದು ದೊಡ್ಡ ರಿಸ್ಕ್ ತೆಗೆದುಕೊಂಡು, ತನ್ನ ಬಣ್ಣದ ನಗರಿ ಹಾಗೂ ಕಾರ್ಪೋರೇಟ್ ಬದುಕಿಗೆ ವಿದಾಯ ಹೇಳಿ ಹಳ್ಳಿಗೆ ಮರಳಿದ್ದ. ತಂದೆ-ತಾಯಿ ಜೊತೆಗಿದ್ದುಕೊಂಡೇ ಏನಾದರೂ ಸಾಧಿಸಬೇಕು ಎಂಬ ಆತನ ಹಠ, ಇದೀಗ ಆತನನ್ನು ಯಶಸ್ವಿ ಉದ್ಯಮಿಯನ್ನಾಗಿ ಮಾಡಿದೆ. ಮನೆಯಲ್ಲೇ ಕುಳಿತು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿರುವ ಈ ಯುವಕನ ಸ್ಪೂರ್ತಿದಾಯಕ ಯಶೋಗಾಥೆ ಈಗ ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ (Reddit) ಭಾರಿ ವೈರಲ್ ಆಗಿದೆ.

ಪೋಷಕರ ಆತಂಕ, ನೆರೆಹೊರೆಯವರ ಮೂಗು ಮುರಿಯುವಿಕೆಗೆ ಕಿವಿಕೊಡದ ಯುವ ಉದ್ಯಮಿ | Photo Credit: CANVA
ಪೋಷಕರ ಆತಂಕ, ನೆರೆಹೊರೆಯವರ ಮೂಗು ಮುರಿಯುವಿಕೆಗೆ ಕಿವಿಕೊಡದ ಯುವ ಉದ್ಯಮಿ | Photo Credit: CANVA

ಯುವ ಉದ್ಯಮಿ ತನ್ನ ರೆಡ್ಡಿಟ್ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿವರಗಳ ಪ್ರಕಾರ, ಈತ 2024ರ ಮಧ್ಯಭಾಗದಲ್ಲಿ ತನ್ನ ಕೈತುಂಬಾ ಸಂಬಳ ಬರುತ್ತಿದ್ದ ಕಾರ್ಪೋರೇಟ್ ಕೆಲಸಕ್ಕೆ ರಾಜೀನಾಮೆ ನೀಡಿದ್ದ. ಹಳ್ಳಿಗೆ ಮರಳಿ, ಮನೆಯಲ್ಲೇ ಕುಳಿತು ಸ್ವಂತ ಕಂಪನಿ ಆರಂಭಿಸಿ ಅದರಲ್ಲಿ ಯಶಸ್ಸು ಕಾಣಬೇಕು ಎಂಬುದು ಆತನ ಮಾಸ್ಟರ್ ಪ್ಲಾನ್ ಆಗಿತ್ತು.

ಆದರೆ ಈ ನಿರ್ಧಾರ ಅಷ್ಟು ಸುಲಭವಾಗಿರಲಿಲ್ಲ. ಮಗ ಚೆನ್ನಾಗಿ ಓದಿ, ದೊಡ್ಡ ನಗರದಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದನ್ನು ನೋಡಿ ಸಂಭ್ರಮಿಸುತ್ತಿದ್ದ ಪೋಷಕರು ಈ ಹಠಾತ್ ನಿರ್ಧಾರದಿಂದ ತೀವ್ರ ಆತಂಕಗೊಂಡಿದ್ದರು. ಆಪ್ತರು, ಸ್ನೇಹಿತರು ಮತ್ತು ಕುಟುಂಬಸ್ಥರು ಯುವಕನ ಬುದ್ಧಿವಂತಿಕೆಯನ್ನು ಪ್ರಶ್ನಿಸಿದ್ದರು. "ಉತ್ತಮ ಸ್ಯಾಲರಿ ಕೊಡುವ ಕೆಲಸವನ್ನು ಯಾಕೆ ಬಿಟ್ಟೆ? ಈ ಸಣ್ಣ ಹಳ್ಳಿಯಲ್ಲಿ ಕುಳಿತು ಏನು ಮಾಡಲು ಸಾಧ್ಯ? ಹಳ್ಳಿಯಲ್ಲಿ ಉದ್ಯೋಗದ ಅವಕಾಶಗಳೆಲ್ಲಿದೆ?" ಎಂದು ನೂರಾರು ಜನ ನೂರಾರು ಮಾತುಗಳನ್ನಾಡಿ ನಿರಾಶೆಗೊಳಿಸಲು ಯತ್ನಿಸಿದ್ದರು. ಆದರೆ ಯುವಕ ಮಾತ್ರ ಯಾರ ಮಾತಿಗೂ ಜಗ್ಗಲಿಲ್ಲ, ಧೃತಿಗೆಡಲಿಲ್ಲ. ತನ್ನ ಮೇಲಿದ್ದ ನಂಬಿಕೆಯಿಂದ ಪೋಷಕರೊಂದಿಗೆ ಮನೆಯಲ್ಲೇ ಇದ್ದುಕೊಂಡು, ಸ್ವಂತ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ (Digital Marketing Company) ಆರಂಭಿಸಿದ. ಕೇವಲ ಎರಡೇ ವರ್ಷಗಳ ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನದ ಫಲವಾಗಿ ಇದೀಗ ಆತನ ಕಂಪನಿ ಭಾರಿ ಲಾಭದಾಯಕವಾಗಿ ಬೆಳೆದಿದೆ. ಪ್ರಸ್ತುತ ಈತ ಯಾವುದೇ ಕಚೇರಿಗೆ ಹೋಗದೆ ಮನೆಯಲ್ಲೇ ಹಾಯಾಗಿ ಕುಳಿತು ತಿಂಗಳಿಗೆ ಬರೋಬ್ಬರಿ 1.8 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾನೆ.

ಯುವಕನ ಈ ಯಶಸ್ಸು ಮತ್ತು ಲಕ್ಷಾಂತರ ರೂಪಾಯಿ ಆದಾಯದ ವಿಷಯ ತಿಳಿಯುತ್ತಿದ್ದಂತೆ, ಸುತ್ತಮುತ್ತಲಿನ ಜನ "ಈತ ಕೇವಲ ಹಣ ಮಾಡುವುದಕ್ಕಾಗಿಯೇ ಕಾರ್ಪೋರೇಟ್ ಕೆಲಸ ಬಿಟ್ಟಿದ್ದ" ಎಂದು ಮಾತನಾಡಿಕೊಳ್ಳಲು ಆರಂಭಿಸಿದರು. ಆದರೆ ಯುವಕ ಈ ಮಾತುಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾನೆ.

"ನನಗೆ ಕೇವಲ ಹಣಕ್ಕಾಗಿ ಕೆಲಸ ಬಿಡುವ ಯಾವುದೇ ಅಗತ್ಯವಿರಲಿಲ್ಲ. ಕಾರ್ಪೋರೇಟ್ ಉದ್ಯೋಗದಲ್ಲಿ ನನಗೆ ಬರುತ್ತಿದ್ದ ಸ್ಯಾಲರಿ ತುಂಬಾ ಉತ್ತಮವಾಗಿತ್ತು ಮತ್ತು ನನ್ನ ಜೀವನ ಸಾಗಿಸಲು ಆ ಸಂಬಳ ಸಾಕಾಗುತ್ತಿತ್ತು. ಆದರೆ ನನಗೆ ನನ್ನದೇ ಆದ ಇಷ್ಟದಂತೆ, ಸ್ವತಂತ್ರವಾಗಿ ಕೆಲಸ ಮಾಡಬೇಕಿತ್ತು. ಯಾಂತ್ರಿಕ ನಗರಾಡಂಬರದ ಬದುಕಿಗಿಂತ, ಹೆತ್ತ ಪೋಷಕರ ಜೊತೆ ಕಾಲ ಕಳೆಯುವುದು ನನಗೆ ಮುಖ್ಯವಾಗಿತ್ತು. ನನ್ನ ಹಳ್ಳಿಯಲ್ಲೇ ಇದ್ದುಕೊಂಡು, ನನ್ನ ಆಪ್ತರು ಹಾಗೂ ಗೆಳೆಯರ ನಡುವೆ ಉತ್ತಮ ಆದಾಯ ಗಳಿಸುವ ಆಲೋಚನೆ ನನ್ನದಾಗಿತ್ತು. ಹಾಗಾಗಿಯೇ ನಾನು ರಿಸ್ಕ್ ತೆಗೆದುಕೊಂಡು ಹಳ್ಳಿಯಲ್ಲೇ ಸ್ವಂತ ಕಂಪನಿ ಕಟ್ಟಿದೆ" ಎಂದು ಯುವ ಉದ್ಯಮಿ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ.

ಪ್ರತಿ ದಿನ ಬೆಳಗ್ಗೆ ಎದ್ದು ಗಡಿಬಿಡಿಯಲ್ಲಿ ರೆಡಿಯಾಗಿ, ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಾ, ಕಚೇರಿಗೆ ಓಡುವ ಅಗತ್ಯ ಇವರಿಗೀಗ ಇಲ್ಲ. ಪೋಷಕರಿಗೆ ಆಸರೆಯಾಗಿ, ಹಳ್ಳಿಯ ಪ್ರಶಾಂತ ವಾತಾವರಣದಲ್ಲಿ ಸ್ವಚ್ಛಂದವಾಗಿ ಬದುಕುತ್ತಾ ಯಶಸ್ಸು ಕಾಣಬಹುದು ಎಂಬುದನ್ನು ಈತ ಸಾಬೀತುಪಡಿಸಿದ್ದಾನೆ.

ಯುವಕನ ಇಂದಿನ ಯಶಸ್ಸು ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ, ಅದರ ಹಿಂದಿನ ಹಾದಿ ಮುಳ್ಳಿನಿಂದ ಕೂಡಿತ್ತು. ಹಳ್ಳಿಯಲ್ಲಿ ಕುಳಿತು ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಆರಂಭಿಸಿದ ಆರಂಭಿಕ ದಿನಗಳು ಅತ್ಯಂತ ಸವಾಲಾಗಿದ್ದವು. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸಂಪರ್ಕ, ತಾಂತ್ರಿಕ ಸೌಲಭ್ಯಗಳ ಕೊರತೆಯ ನಡುವೆಯೇ ಹೊಸ ಕ್ಲೈಂಟ್‌ಗಳನ್ನು (ಗ್ರಾಹಕರನ್ನು) ಹುಡುಕುವುದು ಅತಿ ದೊಡ್ಡ ತಲೆನೋವಾಗಿತ್ತು.

ತನ್ನದು ಸಣ್ಣ ಮತ್ತು ಹೊಸ ಕಂಪನಿಯಾಗಿರುವುದರಿಂದ, ದೊಡ್ಡ ದೊಡ್ಡ ಸಂಸ್ಥೆಗಳಿಗೆ ತನ್ನ ಕಾರ್ಯವೈಖರಿಯನ್ನು ವಿವರಿಸಿ ಅವರನ್ನು ಒಪ್ಪಿಸುವುದು ಸುಲಭವಾಗಿರಲಿಲ್ಲ. ಆರಂಭದಲ್ಲಿ ಹಲವು ಕಂಪನಿಗಳು ಈತನ ಪ್ರಸ್ತಾಪವನ್ನು ತಿರಸ್ಕರಿಸಿ ಹಿಂದೆ ಸರಿದಿದ್ದವು. ಆದರೂ ಧೃತಿಗೆಡದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಬೆಳೆಸಿದ ಯುವಕನಿಗೆ ಕೊನೆಗೂ ಯಶಸ್ಸು ಸಿಕ್ಕಿತು. ಪ್ರಸ್ತುತ ಈತನ ಕಂಪನಿಯು ಕೆಲವು ಪ್ರಮುಖ ಅಮೆರಿಕನ್ (US) ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ, ಶೀಘ್ರದಲ್ಲೇ ಮತ್ತೆರಡು ಬಹುರಾಷ್ಟ್ರೀಯ ಕಂಪನಿಗಳು (MNCs) ಈತನೊಂದಿಗೆ ಕೈಜೋಡಿಸಲು ಸಿದ್ಧವಾಗಿವೆ.

ತನ್ನ ಅದ್ಭುತ ಯಶೋಗಾಥೆಯನ್ನು ಹಂಚಿಕೊಳ್ಳುವುದರ ಜೊತೆಗೆ, ತನ್ನಂತೆ ಕಾರ್ಪೋರೇಟ್ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಆರಂಭಿಸಲು ಬಯಸುವ ಯುವ ಪೀಳಿಗೆಗೆ ಈ ಯುವ ಉದ್ಯಮಿ ಮೂರು ಅತ್ಯಮೂಲ್ಯ ಸಲಹೆಗಳನ್ನು ನೀಡಿದ್ದಾನೆ:

ಬ್ಯಾಕ್ ಅಪ್ ಪ್ಲಾನ್ ಇಲ್ಲದೆ ಕೆಲಸ ಬಿಡಬೇಡಿ (Financial Backup): ನೀವು ಪ್ರಸ್ತುತ ಮಾಡುತ್ತಿರುವ ಕೆಲಸವನ್ನು ಬಿಡಲು ಯೋಜಿಸುತ್ತಿದ್ದರೆ, ಕೇವಲ ಭಾವನೆಗಳಿಗೆ ಒಳಗಾಗಬೇಡಿ. ನಿಮ್ಮ ಮುಂದಿನ ಉದ್ಯಮದ ಆಯ್ಕೆ ಏನು? ಅದರಿಂದ ಆದಾಯ ಬರಲು ಎಷ್ಟು ಸಮಯ ಹಿಡಿಯಬಹುದು? ಎಂಬುದರ ನಿಖರ ಲೆಕ್ಕಾಚಾರ ನಿಮ್ಮ ಬಳಿ ಇರಬೇಕು. ಅಲ್ಲಿಯವರೆಗೆ ನಿಮ್ಮ ವೈಯಕ್ತಿಕ ಮತ್ತು ಕುಟುಂಬದ ಖರ್ಚುಗಳನ್ನು ನಿಭಾಯಿಸಲು ಆರ್ಥಿಕವಾಗಿ ಒಂದು ಗಟ್ಟಿಯಾದ ಬ್ಯಾಕ್ ಅಪ್ ಪ್ಲಾನ್ (ಉಳಿತಾಯ) ಮಾಡಿಕೊಂಡೇ ಮುನ್ನಡೆಯಿರಿ.

ಆರಂಭದಲ್ಲೇ ದೊಡ್ಡ ಆದಾಯದ ನಿರೀಕ್ಷೆ ಬೇಡ: ಸ್ವಂತ ಬಿಸಿನೆಸ್ ಆರಂಭಿಸಿದ ತಕ್ಷಣವೇ ಕೈತುಂಬಾ ಹಣ ಬರುವುದಿಲ್ಲ. ಆರಂಭದಲ್ಲಿ ಲಾಭಕ್ಕಿಂತ ಹೆಚ್ಚಾಗಿ ಮಾರುಕಟ್ಟೆಯಲ್ಲಿ ನಂಬಿಕೆ ಮತ್ತು ಬ್ರ್ಯಾಂಡ್ ಮೌಲ್ಯ ಗಳಿಸುವುದು ಮುಖ್ಯ. ತಾಳ್ಮೆಯಿಂದ ಕಷ್ಟಪಟ್ಟರೆ ಮಾತ್ರ ದೀರ್ಘಾವಧಿಯಲ್ಲಿ ದೊಡ್ಡ ಯಶಸ್ಸು ಸಾಧ್ಯ.

9 ರಿಂದ 5 ಗಂಟೆಯ ಉದ್ಯೋಗ ಇದಲ್ಲ: ಸ್ವಂತವಾಗಿ ಕಂಪನಿ ಆರಂಭಿಸುವಾಗ ನಮಗೆ ನಿರ್ದಿಷ್ಟ ಕೆಲಸದ ಅವಧಿ ಇರುವುದಿಲ್ಲ. ಕಾರ್ಪೋರೇಟ್ ಕೆಲಸದಂತೆ ಬೆಳಿಗ್ಗೆ 9ಕ್ಕೆ ಹೋಗಿ ಸಂಜೆ 5ಕ್ಕೆ ಮುಗಿಸಿ ಬರುವ ಹಾಗಿಲ್ಲ. ಇಲ್ಲಿ ಸಮಯದ ಮಿತಿ ಇರುವುದಿಲ್ಲ; ದಿನದ 24 ಗಂಟೆಯೂ ಜವಾಬ್ದಾರಿ ಹೆಗಲಿಗೇರಿರುತ್ತದೆ. ಏರಿಳಿತಗಳು, ಸೋಲುಗಳು ಮತ್ತು ಕಠಿಣ ಸನ್ನಿವೇಶಗಳು ಎದುರಾದಾಗ ಎಲ್ಲದಕ್ಕೂ ಸಿದ್ಧವಾಗಿರುವ ಮಾನಸಿಕ ಸ್ಥೈರ್ಯ ಹೊಂದಿರಬೇಕು.

ಹಳ್ಳಿಯಲ್ಲೇನಿದೆ ಎಂದು ಮೂಗು ಮುರಿಯುವವರ ಮಧ್ಯೆ, ಈ ಯುವಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಹಳ್ಳಿಯನ್ನೇ ತನ್ನ ಪ್ರಗತಿಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾನೆ. ಸೂಕ್ತ ಕೌಶಲ್ಯ, ಛಲ ಮತ್ತು ಶ್ರಮವಿದ್ದರೆ ನಗರದ ಮಾಲಿನ್ಯ, ಟ್ರಾಫಿಕ್ ಜಂಜಾಟಗಳಿಂದ ದೂರವಿದ್ದುಕೊಂಡೇ ಹಳ್ಳಿಯ ಮನೆಯಿಂದಲೇ ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ವ್ಯವಹರಿಸಬಹುದು ಎಂಬುದಕ್ಕೆ ಈ ಯುವಕನೇ ಸಾಕ್ಷಿ. ಕೇವಲ ಸಂಬಳದ ಗುಲಾಮನಾಗದೆ, ಸ್ವಾವಲಂಬಿ ಬದುಕು ಕಟ್ಟಿಕೊಂಡ ಈ ಯುವ ಉದ್ಯಮಿಯ ಕಥೆ ಇಂದಿನ ಅಸಂಖ್ಯಾತ ಯುವಕರಿಗೆ ನಿಜಕ್ಕೂ ದಾರಿದೀಪವಾಗಿದೆ.

Latest News