ಕಲಿಯುಗ ಕಾಮಧೇನು ಎಂದು ಪ್ರಸಿದ್ಧಿಯಾಗಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿ ಎಣಿಕೆ ಕಾರ್ಯ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಜನವರಿ ಮತ್ತು ಫೆಬ್ರವರಿ ತಿಂಗಳ ಅವಧಿಯನ್ನು ಒಳಗೊಂಡಂತೆ ಒಟ್ಟು 21 ದಿನಗಳಲ್ಲಿ ₹3.08 ಕೋಟಿ ರೂ. ಕಾಣಿಕೆ ಸಂಗ್ರಹವಾಗಿರುವುದು ಭಕ್ತರಲ್ಲಿ ಭಕ್ತಿಭಾವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಮಠದ ಆಡಳಿತದಿಂದ ಬಿಡುಗಡೆಯಾದ ಮಾಹಿತಿಯ ಪ್ರಕಾರ, 21 ದಿನಗಳ ಅವಧಿಯಲ್ಲಿ ಹುಂಡಿಗಳಲ್ಲಿ ಒಟ್ಟು ₹3,08,37,571 ರೂಪಾಯಿ ಕಾಣಿಕೆ ಬಂದಿದೆ. ಇದರಲ್ಲಿ ₹2,98,13,571 ಕರೆನ್ಸಿ ನೋಟುಗಳ ರೂಪದಲ್ಲಿ, ಹಾಗೂ ₹10,24,000 ನಾಣ್ಯಗಳ ರೂಪದಲ್ಲಿ ಸಂಗ್ರಹವಾಗಿದೆ. ಭಕ್ತರು ಹಣದ ಜೊತೆಗೆ ಅಮೂಲ್ಯ ಲೋಹಗಳನ್ನೂ ಕಾಣಿಕೆಯಾಗಿಸಿದ್ದಾರೆ.
ಹುಂಡಿ ಎಣಿಕೆ ವೇಳೆ ಭಕ್ತರಿಂದ 13 ಗ್ರಾಂ ಚಿನ್ನ ಮತ್ತು 1,018 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ದೊರೆತಿದೆ. ದೇಶದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಆಗಮಿಸುವ ಭಕ್ತರು ರಾಘವೇಂದ್ರ ಸ್ವಾಮಿಯ ಕೃಪೆಗೆ ಕೃತಜ್ಞತೆ ಸೂಚಿಸುವ ಸಲುವಾಗಿ ಮನಃಪೂರ್ವಕವಾಗಿ ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ.
ಮಂತ್ರಾಲಯ ರಾಯರ ಮಠದಲ್ಲಿ ನಡೆದ ಈ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಸದಸ್ಯರು, ಹಾಗೂ ಕರಸೇವಕರು ಭಾಗವಹಿಸಿ ಶಿಸ್ತಿನೊಂದಿಗೆ ಎಣಿಕೆ ಕಾರ್ಯ ಪೂರ್ಣಗೊಳಿಸಿದರು. ಭದ್ರತೆ ಮತ್ತು ಪಾರದರ್ಶಕತೆಯೊಂದಿಗೆ ಎಣಿಕೆ ಕಾರ್ಯ ನಡೆಸಲಾಗಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ಮಠದ ಆಡಳಿತದ ಮೇಲ್ವಿಚಾರಣೆಯಲ್ಲೇ ಕೈಗೊಳ್ಳಲಾಯಿತು.
ಪ್ರತಿದಿನ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯುತ್ತಿರುವುದರಿಂದ, ಮುಂದಿನ ದಿನಗಳಲ್ಲಿಯೂ ಕಾಣಿಕೆ ಸಂಗ್ರಹದಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ರಾಯರ ಕೃಪೆಯಿಂದ ಮಠದ ಸೇವಾ ಕಾರ್ಯಗಳು, ಅನ್ನದಾನ ಹಾಗೂ ವಿವಿಧ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿವೆ ಎಂದು ಮಠದ ಆಡಳಿತ ತಿಳಿಸಿದೆ.