ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹಾವಳಿಯಿಂದಾಗಿ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಉದ್ಯೋಗ ಕಡಿತದ ಭೀತಿ ಎದುರಾಗುತ್ತಿರುವ ಈ ಸಮಯದಲ್ಲಿ, ಭಾರತದ ಐಟಿ ದೈತ್ಯ ಇನ್ಫೋಸಿಸ್ ಹೊಸ ಚೈತನ್ಯ ತುಂಬುವ ಸುದ್ದಿ ನೀಡಿದೆ. ಹೌದು ಕಂಪನಿಯು ತನ್ನ ಉದ್ಯಮವನ್ನು ಎಐ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿಸ್ತರಿಸಲು ಮುಂದಾಗಿದ್ದು, ಬರೋಬ್ಬರಿ 20,000 ಹೊಸ ಪದವೀಧರರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ.
ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ಈ ಮಹತ್ವದ ಮಾಹಿತಿ ಹಂಚಿಕೊಂಡರು ಎಂದು ತಿಳಿದುಬಂದಿದೆ. ಉದ್ಯೋಗ ಮಾರುಕಟ್ಟೆಯಲ್ಲಿನ ಆತಂಕಗಳ ನಡುವೆಯೂ ಇನ್ಫೋಸಿಸ್ ಹೊಸಬರಿಗೆ ಭರವಸೆ ನೀಡುತ್ತಿರುವುದು ಯುವಜನತೆಗೆ ದೊಡ್ಡ ಆಶಾಕಿರಣವಾಗಿದೆ ಎನ್ನಬಹುದು. 2027ರ ಹಣಕಾಸು ವರ್ಷದ ವೇಳೆಗೆ 20,000 ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಿರುವ ಕಂಪನಿಯು, ಈಗಾಗಲೇ 2026ರ ಮೊದಲ ಮೂರು ತ್ರೈಮಾಸಿಕಗಳಲ್ಲಿ 18,000 ಪದವೀಧರರನ್ನು ಯಶಸ್ವಿಯಾಗಿ ನೇಮಿಸಿಕೊಂಡಿದೆ.
ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ ಮಾತ್ರ 5,000 ಕ್ಕೂ ಹೆಚ್ಚು ಸಿಬ್ಬಂದಿ ಹೆಚ್ಚಳ ಕಂಡುಬಂದಿದೆ. ಅಮೆಜಾನ್, ಮೆಟಾ, ಟಿಸಿಎಸ್ ಮುಂತಾದ ದೈತ್ಯ ಕಂಪನಿಗಳು ಉದ್ಯೋಗ ವಜಾ ಮಾಡುತ್ತಿರುವ ಸಂದರ್ಭದಲ್ಲಿ, ಇನ್ಫೋಸಿಸ್ ಮಾತ್ರ ಹೊಸಬರಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ವಿಶೇಷ. ಜಾಗತಿಕ ಮಾರುಕಟ್ಟೆಯಲ್ಲಿ ಗ್ರಾಹಕರು ತಮ್ಮ ಬಜೆಟ್ ಅನ್ನು ಸಾಂಪ್ರದಾಯಿಕ ಐಟಿ ಸೇವೆಗಳಿಂದ ಎಐ, ಮೆಷಿನ್ ಲರ್ನಿಂಗ್ ಮತ್ತು ಆಟೊಮೇಷನ್ ಕಡೆಗೆ ಬದಲಾಯಿಸುತ್ತಿರುವುದರಿಂದ, ಇನ್ಫೋಸಿಸ್ ತನ್ನ ಕಾರ್ಯತಂತ್ರವನ್ನು ಅದಕ್ಕೆ ತಕ್ಕಂತೆ ರೂಪಿಸಿಕೊಂಡಿದೆ.
ಸಲೀಲ್ ಪರೇಖ್ ಅವರ ಪ್ರಕಾರ, ಹಣಕಾಸು ಸೇವೆಗಳ ವಲಯದಲ್ಲಿ ಎಐ ತಂತ್ರಜ್ಞಾನಕ್ಕೆ ಭಾರಿ ಬೇಡಿಕೆ ಇದೆ. ಇನ್ಫೋಸಿಸ್‌ನ ಅತಿದೊಡ್ಡ 25 ಹಣಕಾಸು ಸೇವೆಗಳ ಕ್ಲೈಂಟ್‌ಗಳಲ್ಲಿ 15 ಕ್ಕೂ ಹೆಚ್ಚು ಕಂಪನಿಗಳು ಈಗಾಗಲೇ ಎಐ ಪಾಲುದಾರರಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ, ಈ ವಿಭಾಗದಲ್ಲಿ ತಜ್ಞರ ಅವಶ್ಯಕತೆ ಹೆಚ್ಚುತ್ತಿರುವುದರಿಂದ ಹೊಸ ಪದವೀಧರರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿವೆ. ನೇಮಕಗೊಂಡ ಹೊಸಬರಿಗೆ ಕೃತಕ ಬುದ್ಧಿಮತ್ತೆ ಮತ್ತು ಹೊಸ ತಂತ್ರಜ್ಞಾನಗಳ ಮೇಲೆ ವಿಶೇಷ ತರಬೇತಿ ನೀಡಲು ಇನ್ಫೋಸಿಸ್ ವಿಶೇಷ ನೇಮಕಾತಿ ಡ್ರೈವ್ ಹಮ್ಮಿಕೊಳ್ಳಲಿದೆ. ಇದರಿಂದಾಗಿ ಐಟಿ ಕ್ಷೇತ್ರಕ್ಕೆ ಕಾಲಿಡಲು ಬಯಸುವ ಯುವಜನತೆಗೆ ಇದು ಸುವರ್ಣ ಅವಕಾಶವಾಗಲಿದೆ. ಯಾವುದೇ ಮಾನ್ಯತೆ ಪಡೆದ ಪದವೀಧರರು ಅರ್ಜಿ ಸಲ್ಲಿಸಬಹುದಾದರೂ, ಕಂಪ್ಯೂಟರ್ ವಿಜ್ಞಾನ ಅಥವಾ ತಾಂತ್ರಿಕ ಹಿನ್ನೆಲೆ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಇನ್ಫೋಸಿಸ್ ತನ್ನ ಅಧಿಕೃತ ‘Infosys Careers’ ವೆಬ್‌ಸೈಟ್ ಅಥವಾ ಕಾಲೇಜು ಕ್ಯಾಂಪಸ್ ಸಂದರ್ಶನಗಳ ಮೂಲಕ ಈ ನೇಮಕಾತಿ ಪ್ರಕ್ರಿಯೆ ನಡೆಸಲಿದೆ. ಯಾವುದೇ ಅನಧಿಕೃತ ಏಜೆಂಟ್‌ಗಳಿಗೆ ಹಣ ನೀಡಿ ಮೋಸಹೋಗಬಾರದು ಎಂಬುದಾಗಿ ಕಂಪನಿ ಎಚ್ಚರಿಕೆ ನೀಡಿದೆ. ಹೌದು ಒಟ್ಟಾರೆಯಾಗಿ ಹೇಳಬೇಕು ಅಂದರೆ, ಇನ್ಫೋಸಿಸ್‌ನ ಈ ಬೃಹತ್ ನೇಮಕಾತಿ ಯೋಜನೆ ಉದ್ಯೋಗ ಮಾರುಕಟ್ಟೆಯಲ್ಲಿ ಹೊಸ ಚೈತನ್ಯ ತುಂಬುವಂತಿದ್ದು, ಎಐ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಲು ಬಯಸುವ ಯುವಜನತೆಗೆ ಭವಿಷ್ಯದ ಬಾಗಿಲು ತೆರೆಯುತ್ತಿದೆ.