ರಣವೀರ್ ಸಿಂಗ್ ನಟನೆಯ ಬಹುನಿರೀಕ್ಷಿತ ಆಕ್ಷನ್ ಸಿನಿಮಾ 'ಧುರಂಧರ್ 2' (Dhurandhar: The Revenge) ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಗೂ ಮುನ್ನವೇ ಹೊಸ ದಾಖಲೆಗಳನ್ನು ಬರೆಯುತ್ತಿದೆ. 2025ರ ಬ್ಲಾಕ್‌ಬಸ್ಟರ್ ಚಿತ್ರದ ಸೀಕ್ವೆಲ್ ಆಗಿರುವ ಈ ಸಿನಿಮಾ, ಅಡ್ವಾನ್ಸ್ ಬುಕಿಂಗ್ ಮೂಲಕವೇ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಟ್ರೆಂಡ್ ಟ್ರ್ಯಾಕಿಂಗ್ ವೆಬ್‌ಸೈಟ್ sacnilk.com ವರದಿಯ ಪ್ರಕಾರ, ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಈಗಾಗಲೇ 6.1 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಸುಮಾರು 10 ಸಾವಿರಕ್ಕೂ ಹೆಚ್ಚು ಶೋಗಳಿಗೆ ಈ ಬುಕಿಂಗ್ ನಡೆದಿದ್ದು, ಮೊದಲ ದಿನದ ಗಳಿಕೆ 22.70 ಕೋಟಿ ರೂಪಾಯಿ ದಾಟಿದೆ. ಬ್ಲಾಕ್ ಸೀಟ್‌ಗಳನ್ನು ಹೊರತುಪಡಿಸಿದರೂ ಸಹ, ಮೊದಲ ದಿನವೇ 14.41 ಕೋಟಿ ರೂಪಾಯಿ ಕಲೆಕ್ಷನ್ ನಿಕ್ಕಿಯಾಗಿದೆ. ವಿಶ್ವಾದ್ಯಂತ ಅಡ್ವಾನ್ಸ್ ಬುಕಿಂಗ್‌ನಿಂದಲೇ ಚಿತ್ರವು 100 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿರುವುದು ವಿಶೇಷ.
ಕನ್ನಡ ವರ್ಷನ್‌ನಲ್ಲಿ ಭರ್ಜರಿ ಬೇಡಿಕೆ
'ಧುರಂಧರ್ 2' ಚಿತ್ರದ ವಿವಿಧ ಭಾಷೆಗಳ ಅಡ್ವಾನ್ಸ್ ಬುಕಿಂಗ್ ಗಮನಿಸಿದರೆ, ಹಿಂದಿ ಬಿಟ್ಟರೆ ಕನ್ನಡ ವರ್ಷನ್ ಎರಡನೇ ಸ್ಥಾನದಲ್ಲಿದೆ ಎಂಬುದು ಗಮನಾರ್ಹ ಸಂಗತಿ. ದಕ್ಷಿಣ ಭಾರತದ ಇತರ ಭಾಷೆಗಳಿಗಿಂತ ಕನ್ನಡಿಗರು ಈ ಚಿತ್ರಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ.
ಹಿಂದಿ ವರ್ಷನ್: 35 ಕೋಟಿ ರೂಪಾಯಿ
ಕನ್ನಡ ವರ್ಷನ್: 18 ಕೋಟಿ ರೂಪಾಯಿ
ತೆಲುಗು ವರ್ಷನ್: 17 ಕೋಟಿ ರೂಪಾಯಿ
ತಮಿಳು ವರ್ಷನ್: 10 ಕೋಟಿ ರೂಪಾಯಿ
ಮಲಯಾಳಂ ವರ್ಷನ್: 14 ಕೋಟಿ ರೂಪಾಯಿ
ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಆಕ್ಷನ್ ಡ್ರಾಮಾ ಚಿತ್ರವು ಮಾರ್ಚ್ 18, 2026 ರಂದು ನಡೆಯಲಿರುವ ಪೇಯ್ಡ್ ಪ್ರಿವ್ಯೂಗಳಿಂದಲೇ 37.11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಚಿತ್ರ ಬಿಡುಗಡೆಗೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ವಿದೇಶಿ ಮಾರುಕಟ್ಟೆಯಲ್ಲೂ ಈ ಚಿತ್ರ ಧೂಳೆಬ್ಬಿಸುತ್ತಿದೆ. ವಿದೇಶಗಳಲ್ಲಿ ಮೊದಲ ವೀಕೆಂಡ್‌ನ ಪ್ರೀ-ಸೇಲ್ ಬ್ಯುಸಿನೆಸ್ ಸುಮಾರು 60 ಕೋಟಿ ರೂಪಾಯಿ ತಲುಪಿದೆ. ಒಟ್ಟಾರೆಯಾಗಿ, ಪ್ರೀ-ಸೇಲ್ ಬ್ಯುಸಿನೆಸ್‌ನಿಂದ ಚಿತ್ರವು ವಿಶ್ವಾದ್ಯಂತ 119.81 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಗಳು ತಿಳಿಸಿವೆ.
ಸರಣಿಯ ಮೊದಲ ಭಾಗವು ದೊಡ್ಡ ಯಶಸ್ಸು ಕಂಡಿದ್ದರಿಂದ, ಎರಡನೇ ಭಾಗದ ಮೇಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ರಣವೀರ್ ಸಿಂಗ್ ಅವರ ಆಕ್ಷನ್ ಅವತಾರ ಮತ್ತು ಆದಿತ್ಯ ಧರ್ ಅವರ ಮೇಕಿಂಗ್ ಸ್ಟೈಲ್ ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗುವ ಸಾಧ್ಯತೆಯಿದೆ. ಬಿಡುಗಡೆಯ ಮೊದಲ ದಿನವೇ ಈ ಸಿನಿಮಾ ಹಲವು ದಾಖಲೆಗಳನ್ನು ಪುಡಿಗಟ್ಟುವ ಲಕ್ಷಣಗಳು ಕಾಣಿಸುತ್ತಿವೆ.