Mar 14, 2026 Languages : ಕನ್ನಡ | English

ವೈರಲ್ ವಿಡಿಯೋ - ರಶ್ಮಿಕಾ ಮಂದಣ್ಣಗೆ ಅತ್ತಿಗೆಯಾಗಿ ಸ್ವಾಗತ ಕೋರಿದ ಆನಂದ್ ದೇವರಕೊಂಡ!!

ಅಣ್ಣನ ಮದುವೆಯ ಸಂಭ್ರಮ: ರಶ್ಮಿಕಾ ಜೊತೆ ಕುಣಿದು ಕುಪ್ಪಳಿಸಿದ ಆನಂದ್ ದೇವರಕೊಂಡ, ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ಇತ್ತೀಚೆಗೆ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ಸ್ಟಾರ್ ಜೋಡಿಯ ಮದುವೆಯ ಫೋಟೋಗಳಿಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ, ವಿಜಯ್ ಅವರ ತಮ್ಮ ಆನಂದ್ ದೇವರಕೊಂಡ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಒಂದು ವಿಡಿಯೋ ಭರ್ಜರಿ ಸಪ್ರೈಸ್ ನೀಡಿದೆ.

ಅತ್ತಿಗೆಯೊಂದಿಗೆ ಕುಣಿದು ಕುಪ್ಪಳಿಸಿದ ಮೈದುನ
ಅತ್ತಿಗೆಯೊಂದಿಗೆ ಕುಣಿದು ಕುಪ್ಪಳಿಸಿದ ಮೈದುನ

'ವದಿನಾ' ಜೊತೆ ಸ್ಟೆಪ್ಸ್ ಹಾಕಿದ ಆನಂದ್

ಆನಂದ್ ದೇವರಕೊಂಡ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ನವಜೋಡಿ ವಿಜಯ್ ಮತ್ತು ರಶ್ಮಿಕಾ ಜೊತೆಗೆ ಆನಂದ್ ಕೂಡ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮದುವೆಯ ಕಾರ್ಯಕ್ರಮವೊಂದರಲ್ಲಿ ಈ ಮೂವರು ಯಾವುದೇ ಹಮ್ಮು-ಬಿಮ್ಮು ಇಲ್ಲದೆ, ಬಹಳ ಖುಷಿಯಿಂದ ಹೆಜ್ಜೆ ಹಾಕುತ್ತಿರುವುದು ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ವಿಶೇಷವೆಂದರೆ, ಆನಂದ್ ತಮ್ಮ ಮುಂಬರುವ 'ಎಪಿಕ್' (Epic) ಚಿತ್ರದ 'ಸಂಚಾರಮೆ' ಎಂಬ ಹಾಡಿಗೆ ಈ ಜೋಡಿ ಕುಣಿದಿದ್ದಾರೆ. ಈ ಹಾಡು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದರೆ, ಕುಟುಂಬದವರೆಲ್ಲರೂ ಸೇರಿ ಮದುವೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.

ಡ್ರೆಸ್ ಕೋಡ್‌ನಲ್ಲಿ ಸಿಂಪಲ್ ಲುಕ್!

ವಿಡಿಯೋದಲ್ಲಿ ವಿಜಯ್ ದೇವರಕೊಂಡ ರಂಗುರಂಗಿನ ಶರ್ಟ್ ಮತ್ತು ಬಿಳಿ ಪ್ಯಾಂಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು 'ಕೊಡಗಿನ ಬೆಡಗಿ' ರಶ್ಮಿಕಾ ಮಂದಣ್ಣ ಅವರು ಸಿಂಪಲ್ ಆಗಿ ಶಾರ್ಟ್ಸ್ ಮತ್ತು ಶರ್ಟ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ. ಹಸಿರು ಹುಲ್ಲುಹಾಸಿನ ಮೇಲೆ ಈ ಮೂವರು ಎಂಜಾಯ್ ಮಾಡುತ್ತಿರುವ ಕ್ಷಣಗಳು ನಿಜಕ್ಕೂ ಸುಂದರವಾಗಿವೆ. ಆನಂದ್ ಈ ವಿಡಿಯೋಗೆ, "ನೋಡಲು ಇದು ಸ್ವಲ್ಪ ಗೊಂದಲಮಯವಾಗಿ ಕಂಡರೂ, ಆ ಕ್ಷಣದಲ್ಲಿ ನಾವು ಅತಿಯಾದ ಸಂತೋಷದಲ್ಲಿದ್ದೆವು. ಇಷ್ಟವಾದವರ ಜೊತೆ ಕುಣಿಯುವುದಕ್ಕಿಂತ ಹೆಚ್ಚಿನ ಖುಷಿ ಇನ್ನೇನಿದೆ?" ಎಂದು ಬರೆದುಕೊಂಡಿದ್ದಾರೆ.

'ವದಿನಾ' ಅಂದ್ರೆ ಈಗ ಹೆಮ್ಮೆ!

ಮದುವೆಯ ನಂತರ ತಮ್ಮ ಅತ್ತಿಗೆಯ ಬಗ್ಗೆ ಮಾತನಾಡುತ್ತಾ ಆನಂದ್ ಭಾವುಕರಾಗಿದ್ದಾರೆ. ಹಿಂದೆಲ್ಲಾ ಅಭಿಮಾನಿಗಳು "ವದಿನಾ (ಅತ್ತಿಗೆ) ಹೇಗಿದ್ದಾರೆ?" ಎಂದು ಕೇಳಿದಾಗ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲವಂತೆ. ಆದರೆ ಈಗ, "ಅವರನ್ನು ಅಧಿಕೃತವಾಗಿ ನಮ್ಮ ಕುಟುಂಬಕ್ಕೆ ಸ್ವಾಗತಿಸಲು ತುಂಬಾ ಖುಷಿಯಾಗುತ್ತಿದೆ" ಎಂದು ಸಂತಸ ಹಂಚಿಕೊಂಡಿದ್ದಾರೆ. ಮದುವೆಯ ಕಾರ್ಯಕ್ರಮಗಳೆಲ್ಲವೂ ತಮಗೆ ಒಂದು ರಜಾದಿನದಂತೆ ಭಾಸವಾಗುತ್ತಿತ್ತು ಎಂದೂ ಅವರು ತಿಳಿಸಿದ್ದಾರೆ.

ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹವು ಬಹಳ ಖಾಸಗಿಯಾಗಿ ನಡೆದಿತ್ತು. ಕೇವಲ ಆಪ್ತರು ಮತ್ತು ಕೆಲವೇ ಗಣ್ಯರು ಭಾಗವಹಿಸಿದ್ದ ಈ ಮದುವೆಯ ಕಳೆ ಇಂದಿಗೂ ಸೋಶಿಯಲ್ ಮೀಡಿಯಾದಲ್ಲಿ ಮಾಸಿಲ್ಲ. ಸದ್ಯಕ್ಕೆ ವಿಜಯ್-ರಶ್ಮಿಕಾ ಮತ್ತು ಆನಂದ್ ಅವರ ಈ ಡ್ಯಾನ್ಸ್ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಭಿಮಾನಿಗಳು ಈ ವಿಡಿಯೋಗೆ ಲೈಕ್ಸ್ ಮತ್ತು ಕಮೆಂಟ್ಸ್ ಸುರಿಮಳೆಗೈಯುತ್ತಿದ್ದಾರೆ.

Latest News