Feb 16, 2026 Languages : ಕನ್ನಡ | English

ಮದುವೆ ವ್ಯಾಪಾರವಲ್ಲ, ಅದೊಂದು ಭಾವನೆ - 60 ಕೋಟಿ ಆಫರ್ ಬೇಡ ಎಂದ ರಶ್ಮಿಕಾ-ವಿಜಯ್!!

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ತಿಂಗಳಾಂತ್ಯಕ್ಕೆ ರಾಜಸ್ಥಾನದಲ್ಲಿ ಅದ್ದೂರಿಯಾಗಿ ವಿವಾಹ ನಡೆಯಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಇದರ ನಡುವೆ ಮತ್ತೊಂದು ಕುತೂಹಲಕರ ಮಾಹಿತಿ ಹೊರಬಂದಿದೆ.

ನಯನತಾರಾ-ಧನುಷ್ ವಿವಾದವೇ ಪಾಠವಾಯಿತೇ? ರಶ್ಮಿಕಾ ಮಂದಣ್ಣ ಮದುವೆ ವಿಡಿಯೋ ಹಕ್ಕುಗಳ ಬಗ್ಗೆ ಬಿಗ್ ಅಪ್‌ಡೇಟ್.
ನಯನತಾರಾ-ಧನುಷ್ ವಿವಾದವೇ ಪಾಠವಾಯಿತೇ? ರಶ್ಮಿಕಾ ಮಂದಣ್ಣ ಮದುವೆ ವಿಡಿಯೋ ಹಕ್ಕುಗಳ ಬಗ್ಗೆ ಬಿಗ್ ಅಪ್‌ಡೇಟ್.

ಇವರ ಮದುವೆ ವಿಡಿಯೋ ಹಕ್ಕುಗಳನ್ನು ಖರೀದಿಸಲು ಪ್ರಮುಖ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್ (Netflix) ಸುಮಾರು 60 ಕೋಟಿ ರೂಪಾಯಿ ಆಫರ್ ನೀಡಿದೆಯೆಂಬ ಸುದ್ದಿ ಬಂದಿದೆ. ಆದರೆ ಈ ದೊಡ್ಡ ಮೊತ್ತದ ಆಫರ್‌ನ್ನು ಜೋಡಿ ತಿರಸ್ಕರಿಸಿದ್ದಾರಂತೆ. ಕಾರಣವೇನು ಎಂಬ ಪ್ರಶ್ನೆ ಈಗ ಅಭಿಮಾನಿಗಳಲ್ಲಿ ಮೂಡಿದೆ.

ಮೂಲಗಳ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ತಮ್ಮ ಮದುವೆ ಕ್ಷಣಗಳನ್ನು ಖಾಸಗಿ ಹಾಗೂ ವೈಯಕ್ತಿಕವಾಗಿ ಉಳಿಸಿಕೊಳ್ಳಲು ಬಯಸುತ್ತಿದ್ದಾರೆ. ಜೀವನದಲ್ಲಿ ಒಮ್ಮೆ ಮಾತ್ರ ಬರುವ ಈ ವಿಶೇಷ ಕ್ಷಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಬದಲು, ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ನಡುವೆ ಸರಳವಾಗಿ ಆಚರಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಅವರ ದೃಷ್ಟಿಯಲ್ಲಿ ಮದುವೆ ಒಂದು ಭಾವನಾತ್ಮಕ ಕ್ಷಣ, ವ್ಯಾಪಾರಿಕ ಒಪ್ಪಂದವಲ್ಲ ಎಂಬ ಮಾತು ಕೇಳಿಬರುತ್ತಿದೆ.

ಇದಕ್ಕೂ ಮೊದಲು ನಟಿ ನಯನತಾರಾ ಅವರ ಮದುವೆ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಸುಮಾರು 25 ಕೋಟಿ ರೂಪಾಯಿಗೆ ಖರೀದಿಸಿತ್ತು. ಬಳಿಕ ಕೆಲವು ಕಾನೂನು ತೊಡಕುಗಳು ಎದುರಾಗಿದ್ದು, ವಿಶೇಷವಾಗಿ ಧನುಷ್ ಜೊತೆಗಿನ ವಿವಾದ ಸಾಕಷ್ಟು ಸುದ್ದಿಯಾಯಿತು. ಈ ಹಿನ್ನೆಲೆ ಅನೇಕ ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ಕಾರ್ಯಕ್ರಮಗಳನ್ನು ಸಾರ್ವಜನಿಕ ವೇದಿಕೆಗೆ ನೀಡುವ ವಿಷಯದಲ್ಲಿ ಹೆಚ್ಚು ಎಚ್ಚರಿಕೆಯಿಂದಿರುವುದಾಗಿ ಹೇಳಲಾಗುತ್ತಿದೆ.

ರಶ್ಮಿಕಾ–ವಿಜಯ್ ಜೋಡಿ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರಬಂದಿಲ್ಲ. ಆದರೆ ಮದುವೆ ಕುರಿತ ಗಾಸಿಪ್‌ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ದೊಡ್ಡ ಮೊತ್ತದ ಆಫರ್‌ನ್ನು ತಿರಸ್ಕರಿಸಿರುವ ಸುದ್ದಿ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ಒಟ್ಟಿನಲ್ಲಿ, 60 ಕೋಟಿ ರೂಪಾಯಿ ಆಫರ್‌ಗಿಂತ ಖಾಸಗಿತನವನ್ನು ಮುಖ್ಯವೆಂದು ಪರಿಗಣಿಸಿರುವುದೇ ಈ ಜೋಡಿಯ ನಿರ್ಧಾರವೆಂದು ವರದಿಯಾಗಿದೆ. ಮದುವೆ ಬಗ್ಗೆ ಅಧಿಕೃತ ಮಾಹಿತಿ ಯಾವಾಗ ಬರುತ್ತದೆ ಎಂಬುದನ್ನು ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.