ಟಾಕ್ಸಿಕ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮುಂದಿನ ದೊಡ್ಡ ಸಂಚಲನವನ್ನು ಸೃಷ್ಟಿಸಲು ಸಜ್ಜಾಗಿದೆ. ಕೆಜಿಎಫ್ ಖ್ಯಾತಿಯ ನಟ ಯಶ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ನಿರ್ದೇಶನದ ಹೊಣೆ ಗೀತು ಮೋಹಂದಾಸ್ ಅವರು ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರ ಬಿಡುಗಡೆ ಮುಂದೂಡಲ್ಪಡಬಹುದು ಎಂಬ ವದಂತಿಗಳು ಹರಡಿದರೂ, ನಿರ್ಮಾಪಕರು ಅದನ್ನು ತಕ್ಷಣವೇ ಖಂಡಿಸಿ, 2026 ರ ಮಾರ್ಚ್ 19 ರಂದು ಚಿತ್ರ ಬಿಡುಗಡೆ ಖಚಿತವಾಗಿದೆ ಎಂದು ಘೋಷಿಸಿದ್ದಾರೆ.
ಕಾಂತಾರಾ: ಚಾಪ್ಟರ್ 1 ಚಿತ್ರದಲ್ಲಿ ಪ್ರಭಾವ ಬೀರುವ ಅಭಿನಯ ನೀಡಿದ ರುಕ್ಮಿಣಿ ವಸಂತ ಈ ಚಿತ್ರದಲ್ಲಿಯೂ ಭಾಗವಹಿಸಿದ್ದಾರೆ. ಅವರು ಕೆಲವು ಚಿತ್ರೀಕರಣ ಹಂತಗಳನ್ನು ಪೂರ್ಣಗೊಳಿಸಿದ್ದಾರಂತೆ, ಆದರೆ ಅವರ ಪಾತ್ರದ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಿಲ್ಲ. ಇತ್ತೀಚೆಗೆ ಇನ್‌ಸ್ಟಾಗ್ರಾಂ Q&A ನಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದಾಗ, ರುಕ್ಮಿಣಿ “ಇದು ಕನ್ನಡ ಅಥವಾ ಭಾರತೀಯ ಚಿತ್ರರಂಗದಲ್ಲಿ ನಾವು ನೋಡಿರುವ ಯಾವುದೇ ಚಿತ್ರಕ್ಕಿಂತ ವಿಭಿನ್ನವಾಗಿದೆ. ಇದು ನಿಜವಾದ ಒಳ್ಳೆಯ ಸಕತ್ ಕಿಕ್ ಕೊಡುವ ಚಿತ್ರ, ಎಲ್ಲದರ ಮಿಶ್ರಣವಾಗಿದೆ. ಗೀತು ಅವರ ದೃಷ್ಟಿಕೋನ ಧೈರ್ಯವಂತ ಮತ್ತು ಮಾನವೀಯತೆಯಿಂದ ಕೂಡಿದೆ” ಎಂದು ಹೇಳಿದ್ರು.
ಅಂತಹ ಹೇಳಿಕೆಗಳು ಚಿತ್ರದ ಬಗ್ಗೆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿವೆ. ಅಭಿಮಾನಿಗಳು ಈಗ ಚಿತ್ರತಂಡದಿಂದ ಇನ್ನಷ್ಟು ಅಪ್‌ಡೇಟ್‌ಗಳನ್ನು ನಿರೀಕ್ಷಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಯಾರಾ ಅಡ್ವಾನಿ, ನಯನತಾರಾ, ಹೂಮಾ ಖುರೇಷಿ ಮತ್ತು ತಾರಾ ಸುತಾರಿಯಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ನಾರಾಯಣ ನಿರ್ಮಿಸುತ್ತಿರುವ ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ. ಶೀಘ್ರದಲ್ಲೇ ಇನ್ನಷ್ಟು ಮಾಹಿತಿಗಳು ಬಹಿರಂಗವಾಗುವ ನಿರೀಕ್ಷೆಯಿದೆ.