Feb 16, 2026 Languages : ಕನ್ನಡ | English

‘ಟಾಕ್ಸಿಕ್’ ಹೊಸ ದಾಖಲೆ – ವಿದೇಶಿ ವಿತರಣಾ ಹಕ್ಕು ₹105 ಕೋಟಿಗೆ ಮಾರಾಟ!!

‘ರಾಕಿಂಗ್ ಸ್ಟಾರ್’ ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಗೂ ಮುನ್ನವೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಈ ಸಿನಿಮಾಗೆ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು, ಹಣದ ಹೊಳೆ ಹರಿಯುತ್ತಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ‘ಟಾಕ್ಸಿಕ್’ ಚಿತ್ರದ ವಿದೇಶಿ ವಿತರಣಾ ಹಕ್ಕುಗಳು ಬರೋಬ್ಬರಿ ₹105 ಕೋಟಿ ರೂಪಾಯಿಗೆ ಮಾರಾಟವಾಗಿವೆ.

ಮಾರ್ಚ್ 19ರಂದು ತೆರೆಕಾಣುವ ‘ಟಾಕ್ಸಿಕ್’ – ಯಶ್ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರ
ಮಾರ್ಚ್ 19ರಂದು ತೆರೆಕಾಣುವ ‘ಟಾಕ್ಸಿಕ್’ – ಯಶ್ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರ

ಈ ಐತಿಹಾಸಿಕ ಡೀಲ್‌ ಮೂಲಕ ‘ಟಾಕ್ಸಿಕ್’ ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ವಿದೇಶಿ ವಿತರಣಾ ವ್ಯವಹಾರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ವಿಶ್ವದಾದ್ಯಂತ ಸಿನಿಮಾ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಫಾರ್ಸ್ ಫಿಲ್ಮ್ಸ್ (Phars Films) ಸಂಸ್ಥೆ ಈ ಚಿತ್ರದ ಓವರ್‌ಸೀಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ವಿಶೇಷವೆಂದರೆ, ಈ ₹105 ಕೋಟಿ ಮೊತ್ತ ಕೇವಲ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಚಿತ್ರದ ಇಂಗ್ಲಿಷ್ ಆವೃತ್ತಿಯ ಹಕ್ಕುಗಳು ಈ ಒಪ್ಪಂದದಲ್ಲಿ ಸೇರಿಲ್ಲ.

ಇದಕ್ಕೂ ಮೊದಲು ‘ಟಾಕ್ಸಿಕ್’ ಚಿತ್ರದ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿತರಣಾ ಹಕ್ಕುಗಳು ₹120 ಕೋಟಿಗೆ ಮಾರಾಟವಾಗಿದ್ದವು. ಇದೀಗ ವಿದೇಶಿ ಮಾರುಕಟ್ಟೆಯಲ್ಲೂ ಭರ್ಜರಿ ಡೀಲ್ ಆಗಿರುವುದರಿಂದ, ಸಿನಿಮಾ ಇನ್ನೂ ಬಿಡುಗಡೆಯಾಗುವ ಮೊದಲೇ ಭಾರೀ ಬಿಸಿನೆಸ್ ಮಾಡುತ್ತಿದೆ. ಈ ಕುರಿತು ಫಾರ್ಸ್ ಫಿಲ್ಮ್ಸ್ ಸಿಇಒ ಅಹಮದ್ ಗೋಲ್ಚಿನ್ ಮಾತನಾಡಿ, “‘ಟಾಕ್ಸಿಕ್’ ಮೂಲಕ ನಾವು ಗಡಿಗಳನ್ನು ಮೀರುವ ಕಥೆಯನ್ನು ಪ್ರೇಕ್ಷಕರ ಮುಂದೆ ತರುವ ವಿಶ್ವಾಸ ಹೊಂದಿದ್ದೇವೆ. ಈ ಸಿನಿಮಾ ಜಾಗತಿಕ ಪ್ರೇಕ್ಷಕರಿಗೆ ಕನೆಕ್ಟ್ ಆಗಲಿದೆ” ಎಂದು ಹೇಳಿದ್ದಾರೆ. ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ವಿದೇಶಗಳಲ್ಲಿ ಸೃಷ್ಟಿಸಿದ್ದ ಅಬ್ಬರವೇ ಈ ದೊಡ್ಡ ಮಟ್ಟದ ವ್ಯವಹಾರಕ್ಕೆ ಭದ್ರವಾದ ನೆಲೆ ಒದಗಿಸಿದೆ ಎನ್ನಲಾಗುತ್ತಿದೆ.

ಗಮನಾರ್ಹ ಸಂಗತಿಯೆಂದರೆ, ‘ಟಾಕ್ಸಿಕ್’ ಚಿತ್ರದ ಪೂರ್ಣ ಟೀಸರ್ ಅಥವಾ ಟ್ರೇಲರ್ ಇನ್ನೂ ಬಿಡುಗಡೆ ಆಗಿಲ್ಲ. ಸದ್ಯಕ್ಕೆ ರಿಲೀಸ್ ಆಗಿರುವುದು ಕೇವಲ ಹೀರೋ ಪಾತ್ರದ ಇಂಟ್ರಡಕ್ಷನ್ ಟೀಸರ್ ಮಾತ್ರ. ಅಷ್ಟರಲ್ಲಿಯೇ ಇಷ್ಟು ದೊಡ್ಡ ಕ್ರೇಜ್ ಸೃಷ್ಟಿಸಿರುವುದು ಸಿನಿಪ್ರೇಮಿಗಳನ್ನು ಅಚ್ಚರಿ ಮೂಡಿಸಿದೆ. ಮುಂದಿನ ದಿನಗಳಲ್ಲಿ ಟ್ರೇಲರ್ ಬಿಡುಗಡೆಯಾದರೆ ಕ್ರೇಜ್ ಇನ್ನಷ್ಟು ಏರಲಿದೆ ಎಂಬ ನಿರೀಕ್ಷೆ ಇದೆ.

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಅದ್ದೂರಿಯಾಗಿ ತೆರೆಕಾಣಲಿದೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕ ತಾರಾಗಣ ಚಿತ್ರದಲ್ಲಿದ್ದಾರೆ. ಯಶ್ ಅವರ ‘ಕೆಜಿಎಫ್: ಚಾಪ್ಟರ್ 2’ ಬಳಿಕದ ಮೊದಲ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಮೇಲೆ ನಿರೀಕ್ಷೆಗಳು ಮುಗಿಲೆತ್ತರಕ್ಕೇರಿವೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಯಾವ ಮಟ್ಟದ ದಾಖಲೆ ಬರೆಯಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ

Latest News