ಕನ್ನಡದ ಹೆಮ್ಮೆಯ ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರ ಕ್ರೇಜ್ ಈಗ ಕೇವಲ ಸ್ಯಾಂಡಲ್‌ವುಡ್‌ಗೆ ಮಾತ್ರ ಸೀಮಿತವಾಗಿಲ್ಲ. ಪರಭಾಷೆಯ ದೊಡ್ಡ ದೊಡ್ಡ ಡೈರೆಕ್ಟರ್ಸ್ ಮತ್ತು ಪ್ರೊಡ್ಯೂಸರ್ಸ್ ಶಿವಣ್ಣ ಅವರ ಕಾಲ್‌ಶೀಟ್ ಪಡೆಯಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈಗ ತಮಿಳು ಚಿತ್ರರಂಗದಿಂದ ಶಿವಣ್ಣ ಫ್ಯಾನ್ಸ್‌ಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.
ಶಿವಣ್ಣ ಒಪ್ಪಿಕೊಂಡಿರುವ ಹೊಸ ತಮಿಳು ಸಿನಿಮಾಗೆ ಇಂದು (ಜೂನ್ 1) ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಸಾಂಪ್ರದಾಯಿಕ ಪೂಜೆಯೊಂದಿಗೆ ಈ ಚಿತ್ರದ ಮುಹೂರ್ತ ಸಡಗರದಿಂದ ನೆರವೇರಿದೆ. ವಿಶೇಷ ಅಂದ್ರೆ, ಇದು ಕಾಲಿವುಡ್‌ನಲ್ಲಿ ಶಿವಣ್ಣ ನಟಿಸುತ್ತಿರುವ ಪೂರ್ಣ ಪ್ರಮಾಣದ 4ನೇ ಸಿನಿಮಾವಾಗಿದೆ.
ತಂದೆ-ಮಗನಾಗಿ ಅಬ್ಬರಿಸಲಿದ್ದಾರೆ ಶಿವಣ್ಣ-ಅಭಿಷನ್!
‘ಟೂರಿಸ್ಟ್ ಫ್ಯಾಮಿಲಿ’ ಮತ್ತು ‘ವಿತ್ ಲವ್’ ನಂತಹ ಸಿನಿಮಾಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ-ನಿರ್ದೇಶಕ ಅಭಿಷನ್ ಜೀವಿಂತ್ ಅವರ ಹೊಸ ಪ್ರಾಜೆಕ್ಟ್‌ನಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಆರಂಭದಲ್ಲಿ ಈ ಸಿನಿಮಾವನ್ನು ಅಭಿಷನ್ ಅವರೇ ಡೈರೆಕ್ಟ್ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ ಈಗ ಹೊರಬಿದ್ದಿರುವ ಲೇಟೆಸ್ಟ್ ಅಪ್ಡೇಟ್ ಪ್ರಕಾರ, ಅಭಿಷನ್ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ. ಬದಲಿಗೆ ತೆರೆಮೇಲೆ ಶಿವಣ್ಣ ಅವರ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಇವರಿಬ್ಬರು ತಂದೆ ಮತ್ತು ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ.
ಚಿತ್ರದ ತಾರಾಗಣದಲ್ಲಿ ಯಾರ್ಯಾರಿದ್ದಾರೆ?
ಮುಹೂರ್ತದ ಬೆನ್ನಲ್ಲೇ ಚಿತ್ರತಂಡ ಸಂಪೂರ್ಣ ಸ್ಟಾರ್ ಕಾಸ್ಟಿಂಗ್ ವಿವರವನ್ನು ಆಫೀಶಿಯಲ್ ಆಗಿ ಅನೌನ್ಸ್ ಮಾಡಿದೆ. ಈ ಸಿನಿಮಾವನ್ನು ಗೌತಮ್ ಶಿವರಾಮನ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಹಿಂದೆ ಅಭಿಷನ್ ಜೀವಿಂತ್ ಅವರ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾದಲ್ಲಿ ಕೋ-ಡೈರೆಕ್ಟರ್ ಆಗಿ ಕೆಲಸ ಮಾಡಿದ ಎಕ್ಸ್‌ಪೀರಿಯನ್ಸ್ ಹೊಂದಿದ್ದಾರೆ.
‘ಡ್ರಾಮಾ ಕಂಪನಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಶಿವಾನಿ ನಾಗರಂ ಮತ್ತು ಯೋಗ ಲಕ್ಷ್ಮಿ ಅವರು ಚಿತ್ರದ ನಾಯಕಿಯರಾಗಿ ಸೆಲೆಕ್ಟ್ ಆಗಿದ್ದಾರೆ. ಇವರ ಜೊತೆಗೆ ಖ್ಯಾತ ನಟ ಗಾನಾ ವಿನೋದ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಮಾಸ್ ಸಿನಿಮಾಗೆ ಲಿಯೋನ್ ಜೇಮ್ಸ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.
ಕಾಲಿವುಡ್‌ನಲ್ಲಿ ಶಿವಣ್ಣನ ಸಕ್ಸಸ್ ಜರ್ನಿ
ತಮಿಳು ಚಿತ್ರರಂಗದಲ್ಲಿ ಶಿವಣ್ಣ ಅವರ ಹವಾ ಹೇಗಿದೆ ಅಂತ ನಮಗೆಲ್ಲಾ ಗೊತ್ತೇ ಇದೆ. ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದಲ್ಲಿ ಶಿವಣ್ಣ ಅವರ ಆ ಒಂದು ಕ್ಯಾಮಿಯೋ ರೋಲ್ ಇಡೀ ಸೌತ್ ಇಂಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಆ ಬಳಿಕ ಧನುಷ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲೂ ಶಿವಣ್ಣ ಅಬ್ಬರಿಸಿದ್ದರು. ಸದ್ಯದಲ್ಲೇ ಸೆಟ್ಟೇರಲಿರುವ ‘ಜೈಲರ್ 2’ ಚಿತ್ರದ ನಂತರ, ಈಗ ಮುಹೂರ್ತ ಮುಗಿಸಿರುವ ಈ ಹೊಸ ಸಿನಿಮಾವೇ ಶಿವಣ್ಣ ಅವರ 4ನೇ ತಮಿಳು ಚಿತ್ರವಾಗಲಿದೆ.
ಜೂನ್ 4ಕ್ಕೆ ಬರ್ತಿದೆ ಪ್ಯಾನ್-ಇಂಡಿಯಾ ಮೂವಿ ‘ಪೆದ್ದಿ’!
ಕೇವಲ ತಮಿಳು ಮಾತ್ರವಲ್ಲದೆ ತೆಲುಗಿನಲ್ಲೂ ಶಿವಣ್ಣ ಸಖತ್ ಬ್ಯುಸಿಯಾಗಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹೀರೊ ಆಗಿ ನಟಿಸಿರುವ, ಬುಚ್ಚಿ ಬಾಬು ಸನಾ ನಿರ್ದೇಶನದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ಯಲ್ಲಿ ಶಿವಣ್ಣ 'ಗೌರನಾಯ್ಡು' ಅನ್ನೋ ಪವರ್‌ಫುಲ್ ಕ್ಯಾರೆಕ್ಟರ್ ಮಾಡಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಇದೇ ಜೂನ್ 4ರಂದು ವರ್ಲ್ಡ್‌ವೈಡ್ ಗ್ರಾಂಡ್ ಆಗಿ ರಿಲೀಸ್ ಆಗ್ತಿದೆ. ಇದರ ಜೊತೆಗೆ ‘ಸತ್ಯ ಜ್ಯೋತಿ ಫಿಲ್ಮ್ಸ್’ ಬ್ಯಾನರ್‌ನಲ್ಲಿ ನಿರ್ದೇಶಕ ಶರವಣನ್ ಅವರ ಹೊಸ ಸಿನಿಮಾವೂ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದೆ.
60ರ ಪ್ರಾಯದಲ್ಲೂ ಶಿವಣ್ಣ ಅವರ ಎನರ್ಜಿ ಮತ್ತು ಡಿಮ್ಯಾಂಡ್ ನೋಡಿ ಪರಭಾಷೆಯ ಸ್ಟಾರ್ ನಟರೇ ಫಿದಾ ಆಗಿದ್ದಾರೆ. ಹಿಂಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಶಿವಣ್ಣ ಇಂಟರ್ನ್ಯಾಷನಲ್ ಲೆವೆಲ್‌ನಲ್ಲಿ ಸೌಂಡ್ ಮಾಡ್ತಿರೋದು ಕನ್ನಡಿಗರಿಗೆ ನಿಜಕ್ಕೂ ಹೆಮ್ಮೆಯ ವಿಚಾರ.