ಕಿಚ್ಚನ ಎಂಟ್ರಿಗೆ ಬಾಕ್ಸ್ ಆಫೀಸ್ ಶೇಕ್ - ಮೊದಲ ದಿನವೇ ದಾಖಲೆ ಬರೆದ ಕೆಡಿ ಸಿನಿಮಾ ಕಲೆಕ್ಷನ್ ಎಷ್ಟು ಗೊತ್ತಾ?

ಸ್ಯಾಂಡಲ್‌ವುಡ್‌ನಲ್ಲಿ ಇಂದು ಹಬ್ಬದ ವಾತಾವರಣ. ಬಹಳ ದಿನಗಳಿಂದ ಎಲ್ಲರೂ ಕಾತರದಿಂದ ಕಾಯುತ್ತಿದ್ದ 'ಜೋಗಿ' ಪ್ರೇಮ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಶನ್‌ನ 'ಕೆಡಿ - ದಿ ಡೆವಿಲ್' ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಎಲ್ಲಿ ನೋಡಿದರೂ 'ಕೆಡಿ' ಹವಾ ಶುರುವಾಗಿದ್ದು, ಪ್ರೇಕ್ಷಕರು ಈ ಚಿತ್ರವನ್ನು ಬ್ಲಾಕ್‌ಬಸ್ಟರ್ ಎಂದು ಕರೆಯುತ್ತಿದ್ದಾರೆ.

ಮೊದಲ ದಿನವೇ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ 'ಡೆವಿಲ್' | Photo Credit: https://x.com/UrsMk1133
ಮೊದಲ ದಿನವೇ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ 'ಡೆವಿಲ್' | Photo Credit: https://x.com/UrsMk1133

ಕಳೆದ ಕೆಲವು ಸಿನಿಮಾಗಳಿಂದ ಧ್ರುವ ಸರ್ಜಾ ಅವರಿಗೆ ಸರಿಯಾದ ಯಶಸ್ಸು ಸಿಕ್ಕಿರಲಿಲ್ಲ. ಅದರಲ್ಲೂ 'ಮಾರ್ಟಿನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದ ಮೇಲೆ, ಧ್ರುವ ಅವರಿಗೆ ಒಂದು ದೊಡ್ಡ ಹಿಟ್ ಅನಿವಾರ್ಯವಾಗಿತ್ತು. ಈಗ 'ಕೆಡಿ' ಆ ಕೊರತೆಯನ್ನು ನೀಗಿಸಿದಂತೆ ಕಾಣುತ್ತಿದೆ. ಧ್ರುವ ಅವರ ರಾ ಲುಕ್ ಮತ್ತು ಬಾಡಿ ಲಾಂಗ್ವೇಜ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದ್ದು, ಧ್ರುವ ವೃತ್ತಿಜೀವನಕ್ಕೆ ಈ ಸಿನಿಮಾ ಹೊಸ ವೇಗ ನೀಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರದ್ದು ವಿಶೇಷ ಪಾತ್ರ. ಕಿಚ್ಚ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟುತ್ತಿದೆ. ಪ್ರೇಮ್ ಅವರು ಕಿಚ್ಚನ ಪಾತ್ರವನ್ನು ಕಟ್ಟಿ ಕೊಟ್ಟಿರುವ ರೀತಿ ಮತ್ತು ಸುದೀಪ್ ಅವರ ಗತ್ತು ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಬೆಳಗ್ಗೆಯಿಂದ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅವರ ಪ್ರಕಾರ ಸಿನಿಮಾದ ಹೈಲೈಟ್ಸ್ ಇಲ್ಲಿದೆ:

ಮೊದಲಾರ್ಧ - ಸಿನಿಮಾದ ಮೊದಲಾರ್ಧ ಪಾತ್ರಗಳ ಪರಿಚಯದ ಮೇಲೆ ಸಾಗುತ್ತದೆ. ಪ್ರೇಕ್ಷಕರಿಗೆ ಕಥೆಯ ಒಳಗೆ ಕರೆದುಕೊಂಡು ಹೋಗಲು ಪ್ರೇಮ್ ಅವರು ಸ್ವಲ್ಪ ಸಮಯ ತಗೊಂಡಿದ್ದಾರೆ. ಆದರೆ ಎಲ್ಲೂ ಬೋರ್ ಆಗದಂತೆ ಅಚ್ಚುಕಟ್ಟಾಗಿ ಮೂಡಿ ಬಂದಿದೆ.

ದ್ವಿತೀಯಾರ್ಧ - ಅಸಲಿ ಆಟ ಶುರುವಾಗುವುದೇ ಇಂಟರ್ವಲ್ ನಂತರ! ದ್ವಿತೀಯಾರ್ಧದಲ್ಲಿ ಆಕ್ಷನ್, ಎಮೋಷನ್ ಮತ್ತು ಕಥೆಯ ವೇಗ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ನಿಲ್ಲಿಸುತ್ತದೆ.

ಕ್ಲೈಮ್ಯಾಕ್ಸ್ - ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಪ್ರೇಮ್ ಅವರ ಹಳೆಯ ನಿರ್ದೇಶನದ ಖದರ್ ಇಲ್ಲಿ ಮತ್ತೆ ಕಾಣುತ್ತಿದೆ.

ಹಿನ್ನೆಲೆ ಸಂಗೀತ - ಅರ್ಜುನ್ ಜನ್ಯ ಅವರ ಮ್ಯೂಸಿಕ್ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ಪ್ರತಿ ಸೀನ್‌ನಲ್ಲೂ ಬಿಜಿಎಂ ಕಿವಿಗಡಚಿಕ್ಕುವಂತಿದ್ದು, ಮಾಸ್ ಪ್ರೇಕ್ಷಕರಿಗೆ ಹಬ್ಬ ಎನಿಸಿದೆ.

ನಿರ್ದೇಶಕ ಪ್ರೇಮ್ ಅವರು ತಮ್ಮ ಹಳೆಯ ಟ್ರ್ಯಾಕ್‌ಗೆ ಮರಳಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಕೆವಿಎನ್ ಸಂಸ್ಥೆ ನಿರ್ಮಾಣದ ಈ ಸಿನಿಮಾ ವಿಶುವಲ್ ಆಗಿ ಕೂಡ ಬಹಳ ಅದ್ದೂರಿಯಾಗಿ ಮೂಡಿ ಬಂದಿದೆ. ಸದ್ಯಕ್ಕೆ ಚಿತ್ರರಂಗದಲ್ಲಿ ಸ್ವಲ್ಪ ತಣ್ಣಗಿದ್ದ ವಾತಾವರಣವನ್ನು 'ಕೆಡಿ' ಮತ್ತೆ ಬಿಸಿ ಮಾಡಿದೆ.

ಸಂಜೆ ಹೊತ್ತಿಗೆ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಸದ್ಯಕ್ಕಂತೂ ಧ್ರುವ ಸರ್ಜಾ ಫ್ಯಾನ್ಸ್ ಗೆಲುವಿನ ಸಂಭ್ರಮದಲ್ಲಿದ್ದಾರೆ.

Latest News