ಕೊನೆ ದಿನ ‘ಕೆಡಿ’ ಗಳಿಸಿದ್ದು ಕೇವಲ ಇಷ್ಟೇ ಲಕ್ಷ - ಮಲ್ಟಿಸ್ಟಾರರ್ ಸಿನಿಮಾದ ಅಂತಿಮ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ!!

ಸ್ಯಾಂಡಲ್‌ವುಡ್‌ನಲ್ಲಿ ಅನೌನ್ಸ್ ಆದ ದಿನದಿಂದಲೇ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ಅಂದ್ರೆ ಅದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‌ನ ‘ಕೆಡಿ - ದಿ ಡೆವಿಲ್’ (KD Movie). ಭಾರಿ ನಿರೀಕ್ಷೆಗಳೊಂದಿಗೆ ಥಿಯೇಟರ್‌ಗೆ ಬಂದಿದ್ದ ಈ ಚಿತ್ರದ ಅಂತಿಮ ಬಾಕ್ಸ್ ಆಫೀಸ್ ಗಳಿಕೆಯ (Closing Collection) ಅಧಿಕೃತ ವಿವರಗಳು ಈಗ ಹೊರಬಿದ್ದಿವೆ.

ನೂರರ ಕ್ಲಬ್ ಬಜೆಟ್, ಇಪ್ಪತ್ತರ ಗಡಿ ದಾಟದ ಕಲೆಕ್ಷನ್ | Photo Credit: @SDhruvaboss
ನೂರರ ಕ್ಲಬ್ ಬಜೆಟ್, ಇಪ್ಪತ್ತರ ಗಡಿ ದಾಟದ ಕಲೆಕ್ಷನ್ | Photo Credit: @SDhruvaboss

ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ಈ ಸಿನಿಮಾದ ಥಿಯೇಟರ್ ರನ್ ಈಗ ಮುಕ್ತಾಯದ ಹಂತಕ್ಕೆ ಬಂದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಸಾಧಾರಣ ಗಳಿಕೆಯನ್ನಷ್ಟೇ ಮಾಡಿದೆ. ಚಿತ್ರದ ಒಟ್ಟು ಕಲೆಕ್ಷನ್ ರಿಪೋರ್ಟ್ ಮತ್ತು ಒಟಿಟಿ ರಿಲೀಸ್ ಅಪ್‌ಡೇಟ್ ಇಲ್ಲಿದೆ ನೋಡಿ.

100 ಕೋಟಿ ಬಜೆಟ್; ಕಲೆಕ್ಷನ್ ಎಷ್ಟು?

'ಕೆಡಿ' ಸಿನಿಮಾವನ್ನು ಜೋಗಿ ಪ್ರೇಮ್ ಭಾರಿ ಅದ್ಧೂರಿಯಾಗಿ ಮೇಕಿಂಗ್ ಮಾಡಿದ್ದರು. ಮೂಲಗಳ ಪ್ರಕಾರ ಈ ಸಿನಿಮಾದ ಬಜೆಟ್ ಬರೋಬ್ಬರಿ 100 ಕೋಟಿ ರೂಪಾಯಿ ದಾಟಿತ್ತು ಎನ್ನಲಾಗಿದೆ. ಆದರೆ ಬಜೆಟ್‌ಗೆ ಹೋಲಿಸಿದರೆ ಚಿತ್ರದ ಕಲೆಕ್ಷನ್ ಸ್ವಲ್ಪ ಸಾಧಾರಣವಾಗಿದೆ.

ವಿಶ್ವದಾದ್ಯಂತ ಒಟ್ಟು 13,358 ಶೋಗಳ ಪ್ರದರ್ಶನ ಕಂಡಿರುವ ಈ ಸಿನಿಮಾ, ವರ್ಲ್ಡ್‌ವೈಡ್ ಒಟ್ಟು 24.35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇನ್ನು ಚಿತ್ರದ ಒಟ್ಟು ನೆಟ್ ಕಲೆಕ್ಷನ್ 21.39 ಕೋಟಿ ರೂಪಾಯಿ ಆಗಿದೆ.

ಕೊನೆಯ ದಿನ ಕೇವಲ 7 ಲಕ್ಷ ಗಳಿಕೆ; ಇನ್ಮುಂದೆ ಒಟಿಟಿ ಭವಿಷ್ಯ!

ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ತನ್ನ ಪ್ರದರ್ಶನವನ್ನು ಬಹುತೇಕ ಮುಗಿಸಿದೆ. ಇತ್ತೀಚೆಗೆ ಅಂದರೆ ಮೇ 31ರ ಭಾನುವಾರದಂದು ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ 7 ಲಕ್ಷ ರೂಪಾಯಿ ಗಳಿಸಿದೆ. ಇದು ಸಿನಿಮಾದ ಕೊನೆಯ ದಿನಗಳ ಗಳಿಕೆಯಾಗಿದ್ದರಿಂದ, ಇದನ್ನೇ ಚಿತ್ರದ ಅಂತಿಮ ಅಥವಾ ಕ್ಲೋಸಿಂಗ್ ಕಲೆಕ್ಷನ್ ಎಂದು ಪರಿಗಣಿಸಲಾಗಿದೆ.

ಥಿಯೇಟರ್ ಆಟ ಮುಗಿಸಿರುವ 'ಕೆಡಿ' ಇನ್ನು ಕೆಲವೇ ದಿನಗಳಲ್ಲಿ ಅಂದರೆ ಜೂನ್ 5 ರಂದು ಅಧಿಕೃತವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿದೆ. ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಇನ್ಮುಂದೆ ಒಟಿಟಿಯಲ್ಲಿ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

ಮಲ್ಟಿಸ್ಟಾರರ್ ಸಿನಿಮಾದಲ್ಲಿ ಯಾರ್ಯಾರಿದ್ರು?

'ಕೆಡಿ' ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ‘ಕಾಳಿ’ ಎಂಬ ಪವರ್‌ಫುಲ್ ಮಾಸ್ ಕ್ಯಾರೆಕ್ಟರ್‌ನಲ್ಲಿ ಅಬ್ಬರಿಸಿದ್ದು, ಅವರ ಲುಕ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಇನ್ನು ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇತ್ತು. ಬಾಲಿವುಡ್ ಸ್ಟಾರ್ ಸಂಜಯ್ ದತ್ ಖಳನಾಯಕನಾಗಿ ನಟಿಸಿದ್ದರೆ, ಕ್ರೇಜಿಸ್ಟಾರ್ ರವಿಚಂದ್ರನ್, ಶಿಲ್ಪಾ ಶೆಟ್ಟಿ, ರೇಷ್ಮಾ ನಾಣಯ್ಯ ಹಾಗೂ ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ವಿವಾದಗಳ ಮೂಲಕವೇ ಸೌಂಡ್ ಮಾಡಿದ್ದ ‘ಕೆಡಿ’

ಶೀರ್ಷಿಕೆ ಪ್ರಕಟವಾದ ದಿನದಿಂದಲೇ 'ಕೆಡಿ' ಸಿನಿಮಾ ಒಂದಿಲ್ಲೊಂದು ವಿವಾದಗಳಿಂದಲೇ ಸಖತ್ ಸುದ್ದಿಯಲ್ಲಿತ್ತು. ಚಿತ್ರದ ‘ಸರ್ಸೆ ಸರ್ಸೆ’ ಹಾಡಿನ ಸಾಹಿತ್ಯ ಚೆನ್ನಾಗಿಲ್ಲ ಎಂದು ದೊಡ್ಡ ವಿವಾದವಾಗಿತ್ತು. ಇದರ ಜೊತೆಗೆ ಟ್ರೈಲರ್‌ನಲ್ಲಿ ತೋರಿಸಲಾಗಿದ್ದ ವಿಪರೀತ ರಕ್ತಪಾತ ಮತ್ತು ಹಿಂಸಾಚಾರದ ದೃಶ್ಯಗಳ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ದೊಡ್ಡ ಚರ್ಚೆಗಳೇ ನಡೆದಿದ್ದವು.

ಒಟ್ಟಿನಲ್ಲಿ ಭಾರಿ ಹೈಪ್ ಹಾಗೂ ವಿವಾದಗಳ ನಡುವೆ ರಿಲೀಸ್ ಆಗಿದ್ದ 100 ಕೋಟಿ ಬಜೆಟ್‌ನ 'ಕೆಡಿ' ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಅಂದುಕೊಂಡ ಮಟ್ಟಿಗೆ ಕಮಲ್ ಮಾಡದಿದ್ದರೂ 24 ಕೋಟಿಗೂ ಅಧಿಕ ಗಳಿಕೆ ಕಂಡು ಈಗ ಒಟಿಟಿ ಅಂಗಳಕ್ಕೆ ಲಗ್ಗೆ ಇಡಲು ರೆಡಿಯಾಗಿದೆ.

Latest News