'ಕೆಜಿಎಫ್' ಮತ್ತು 'ಕಾಂತಾರ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಭಾರತೀಯ ಪುರಾಣಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು 'ಮಹಾವತಾರ ಸಿನಿಮ್ಯಾಟಿಕ್ ಯೂನಿವರ್ಸ್' ಎಂಬ ಹೊಸ ಜಗತ್ತನ್ನು ಘೋಷಣೆ ಮಾಡಿದೆ. ಅಚ್ಚರಿಯ ವಿಷಯ ಅಂದರೆ, ಇನ್ನು ಮುಂದೆ ಪ್ರತಿ ಎರಡು ವರ್ಷಕ್ಕೊಮ್ಮೆ ದಶಾವತಾರದ ಆಧಾರಿತ ಒಂದೊಂದು ಅನಿಮೇಟೆಡ್ ಸಿನಿಮಾ ಬಿಡುಗಡೆಯಾಗಲಿದೆ.
ಕಳೆದ ವರ್ಷ ಬಿಡುಗಡೆಯಾದ 'ಮಹಾವತಾರ ನರಸಿಂಹ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿತ್ತು. ಕೇವಲ 6 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬರೋಬ್ಬರಿ 120 ಕೋಟಿ ಬಾಚಿಕೊಳ್ಳುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಈ ಅನಿಮೇಷನ್ ಶೈಲಿ ಇಷ್ಟವಾಗಿತ್ತು. ಈ ಗೆಲುವಿನಿಂದ ಫುಲ್ ಖುಷಿಯಾಗಿರುವ ಹೊಂಬಾಳೆ ಫಿಲ್ಮ್ಸ್, ಈಗ ದೊಡ್ಡ ಮಟ್ಟದ 10 ವರ್ಷದ ಮಾಸ್ಟರ್ ಪ್ಲ್ಯಾನ್ ರೆಡಿ ಮಾಡಿದೆ.
ಮುಂದಿನ ಸ್ಟಾಪ್: 'ಮಹಾವತಾರ ಪರಶುರಾಮ'
ಈ ಸಿನಿಮ್ಯಾಟಿಕ್ ಯೂನಿವರ್ಸ್‌ನ ಎರಡನೇ ಭಾಗವಾಗಿ ಭಗವಾನ್ ವಿಷ್ಣುವಿನ ಉಗ್ರ ಅವತಾರವಾದ ಪರಶುರಾಮನ ಕಥೆ ಬರಲಿದೆ. ಇತ್ತೀಚೆಗಷ್ಟೇ ಇದರ ಪೋಸ್ಟರ್ ರಿಲೀಸ್ ಆಗಿದ್ದು, ಅದರಲ್ಲಿ ಪರಶುರಾಮನ ಕೊಡಲಿ ಮತ್ತು ಪಾದಗಳನ್ನು ಮಾತ್ರ ತೋರಿಸಿ ಕುತೂಹಲ ಮೂಡಿಸಲಾಗಿದೆ. "ಅಧರ್ಮ ಹೆಚ್ಚಾದಾಗ ಪರಶುರಾಮ ಬರುತ್ತಾನೆ" ಎನ್ನುವ ಟ್ಯಾಗ್‌ಲೈನ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಈ ಚಿತ್ರವು ಡಿಸೆಂಬರ್ 2027 ಕ್ಕೆ ತೆರೆಗೆ ಬರಲಿದೆ.
ಹೊಂಬಾಳೆ ಹಾಕಿದ 'ಮಹಾ' ಲಿಸ್ಟ್ ಇಲ್ಲಿದೆ
ಮುಂದಿನ ಹತ್ತು ವರ್ಷಗಳಲ್ಲಿ ಯಾವೆಲ್ಲಾ ಸಿನಿಮಾಗಳು ಬರಲಿವೆ ಎಂಬ ಟೈಮ್‌ಲೈನ್ ಅನ್ನು ತಂಡ ಬಿಡುಗಡೆ ಮಾಡಿದೆ:
ಮಹಾವತಾರ ಪರಶುರಾಮ್: ಡಿಸೆಂಬರ್ 2027
ಮಹಾವತಾರ ರಘುನಂದನ್ (ರಾಮ): 2029
ಮಹಾವತಾರ ದ್ವಾರಕಾದೀಶ (ಕೃಷ್ಣ): 2031
ಮಹಾವತಾರ ಗೋಕುಲಾನಂದ: 2033
ಮಹಾವತಾರ ಕಲ್ಕಿ (ಭಾಗ 1 & 2): 2035 ಮತ್ತು 2037
ಕ್ವಾಲಿಟಿಗೆ ಫಸ್ಟ್ ಪ್ರಿಫರೆನ್ಸ್
ಈ ಸರಣಿಯನ್ನು ಅಶ್ವಿನ್ ಕುಮಾರ್ ನಿರ್ದೇಶಿಸುತ್ತಿದ್ದು, ಕ್ಲೀಮ್ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಹೊಂಬಾಳೆ ಈ ಬೃಹತ್ ಪ್ರಾಜೆಕ್ಟ್ ಹಮ್ಮಿಕೊಂಡಿದೆ. ಹಾಲಿವುಡ್ ಸಿನಿಮಾಗಳ ತರಹವೇ ನಮ್ಮ ಪುರಾಣದ ಕಥೆಗಳನ್ನು ಅದ್ಭುತ ಅನಿಮೇಷನ್ ತಂತ್ರಜ್ಞಾನ ಬಳಸಿ ತೋರಿಸುವುದು ಇವರ ಗುರಿಯಾಗಿದೆ.