ಕಾಲಿವುಡ್ ನಟ ಸೂರ್ಯ ಜೊತೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್ - ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ದೊಡ್ಡ ಘೋಷಣೆ!!

ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾಗಿ ಜಾಗತಿಕ ಮಟ್ಟದಲ್ಲಿ ಸ್ಯಾಂಡಲ್‌ವುಡ್ ಕೀರ್ತಿಯನ್ನು ಎತ್ತಿಹಿಡಿದಿರುವ ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ (Hombale Films), ಈಗ ಭಾರತೀಯ ಚಿತ್ರರಂಗವೇ ಬೆಚ್ಚಿಬೀಳುವಂತಹ ಮತ್ತೊಂದು ಬೃಹತ್ ಘೋಷಣೆ ಮಾಡಿದೆ. ಕೆಜಿಎಫ್, ಕಾಂತಾರ, ಸಲಾರ್ ನಂತಹ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿ ಸದ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸುತ್ತಿರುವ ಹೊಂಬಾಳೆ ಸಂಸ್ಥೆ, ಈಗ ಕಾಲಿವುಡ್‌ನ ಸ್ಟಾರ್ ನಟ, ಸಿಂಗಂ ಖ್ಯಾತಿಯ ಸೂರ್ಯ ಜೊತೆ ಹೊಸ ಬಿಗ್ ಬಜೆಟ್ ಚಿತ್ರವನ್ನು ಅಧಿಕೃತವಾಗಿ ಪ್ರಕಟಿಸಿದೆ.

ಸೂರ್ಯ ಜೊತೆ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ | Photo Credit: https://x.com/PrakashMahadev
ಸೂರ್ಯ ಜೊತೆ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ | Photo Credit: https://x.com/PrakashMahadev

ಈ ಅಪರೂಪದ ಹಾಗೂ ಅದ್ಭುತ ಕಾಂಬಿನೇಷನ್ ಸಿನಿಮಾ ಪ್ರೇಕ್ಷಕರಲ್ಲಿ ಮತ್ತು ಇಡೀ ಚಿತ್ರರಂಗದಲ್ಲಿ ಭಾರಿ ಕುತೂಹಲ ಹಾಗೂ ನಿರೀಕ್ಷೆಯನ್ನು ಸೃಷ್ಟಿಸಿದೆ.

‘ದಿ ನೆಕ್ಸ್ಟ್ ಚಾಪ್ಟರ್’ ಆರಂಭಿಸಿದ ಹೊಂಬಾಳೆ ಸಂಸ್ಥೆ

‘ದಿ ನೆಕ್ಸ್ಟ್ ಚಾಪ್ಟರ್’ (#SuriyaXHombale) ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ವಿಶೇಷ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಬಿಗ್ ಅಪ್‌ಡೇಟ್ ನೀಡಿದೆ.

ಹೊಂಬಾಳೆ ಫಿಲ್ಮ್ಸ್ ಭಾವನಾತ್ಮಕ ಪೋಸ್ಟ್: "ಕಳೆದ ಮೂರು ದಶಕಗಳಿಂದ ಸತ್ಯಕ್ಕೆ ಹತ್ತಿರವಾದ ಪಾತ್ರಗಳು, ನೈಜ ಬದುಕಿನ ತೂಕವನ್ನು ಹೊತ್ತ ವಿಶಿಷ್ಟ ಕ್ಯಾರೆಕ್ಟರ್‌ಗಳು ಹಾಗೂ ಅದ್ಭುತ ಸಾಹಸಗಳ ಮೂಲಕ ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿರುವ ಈ ತಲೆಮಾರಿನ ಅತ್ಯಂತ ನಿರ್ಭೀತ ಹಾಗೂ ಪ್ರಭಾವಶಾಲಿ ನಟ ಸೂರ್ಯ ಅವರನ್ನು ನಮ್ಮ ಸಂಸ್ಥೆಗೆ ಹೆಮ್ಮೆಯಿಂದ ಸ್ವಾಗತಿಸುತ್ತಿದ್ದೇವೆ" ಎಂದು ಹೊಂಬಾಳೆ ಫಿಲ್ಮ್ಸ್ ಬರೆದುಕೊಂಡಿದೆ. ತಮಿಳು ಚಿತ್ರರಂಗದ ಶಕ್ತಿಶಾಲಿ ನಟ ಹಾಗೂ ಕನ್ನಡದ ಹೆಮ್ಮೆಯ ಪ್ರೊಡಕ್ಷನ್ ಹೌಸ್ ಒಂದಾಗುತ್ತಿರುವುದು ಸಿನಿಮಾ ಪ್ರೇಮಿಗಳಿಗೆ ಹಬ್ಬದ ಸೌಗಡ ತಂದಿದೆ.

ಟಿ.ಜೆ. ಜ್ಞಾನವೇಲ್ ಆ್ಯಕ್ಷನ್ ಕಟ್; ಸಾಯಿ ಅಭಯಂಕರ್ ಸಂಗೀತ

ಈ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗೆ ಯಾರು ನಿರ್ದೇಶನ ಮಾಡಲಿದ್ದಾರೆ ಮತ್ತು ಯಾರೆಲ್ಲಾ ತಂತ್ರಜ್ಞರು ಇರಲಿದ್ದಾರೆ ಎಂಬ ಕುತೂಹಲಕ್ಕೆ ಹೊಂಬಾಳೆ ಸಂಸ್ಥೆಯ ಪೋಸ್ಟ್‌ನಲ್ಲೇ ಉತ್ತರ ಸಿಕ್ಕಿದೆ.

ಜ್ಞಾನವೇಲ್ ನಿರ್ದೇಶನ: ‘ಜೈ ಭೀಮ್’ ಮತ್ತು ರಜನಿಕಾಂತ್ ಅವರ ‘ವೇಟ್ಟೈಯನ್’ ಸಿನಿಮಾಗಳ ಖ್ಯಾತಿಯ ಅತ್ಯಂತ ಪ್ರಭಾವಶಾಲಿ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರನ್ನು ಈ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದೆ. ಸಾಮಾಜಿಕ ಕಳಕಳಿಯ ಹಾಗೂ ನೈಜ ಘಟನೆಗಳ ಆಧಾರಿತ ಕಥೆಗಳನ್ನು ಕಮರ್ಷಿಯಲ್ ಆಗಿ ಕಟ್ಟಿಕೊಡುವಲ್ಲಿ ಜ್ಞಾನವೇಲ್ ನಿಪುಣರು. ಹಾಗಾಗಿ, ಈ ಚಿತ್ರಕ್ಕೆ ಅವರೇ ಕಥೆ ಬರೆದು ನಿರ್ದೇಶನ ಮಾಡುವುದು ನೂರಕ್ಕೆ ನೂರರಷ್ಟು ಖಚಿತವಾಗಿದೆ.

ಸಾಯಿ ಅಭಯಂಕರ್ ಮ್ಯೂಸಿಕ್: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಭಾರಿ ಟ್ರೆಂಡಿಂಗ್ ಮ್ಯೂಸಿಕ್ ಸೆನ್ಸೇಷನ್ ಆಗಿ ಹೊರಹೊಮ್ಮಿರುವ ಯುವ ಕಂಫೋಸರ್ ಸಾಯಿ ಅಭಯಂಕರ್ ಅವರನ್ನು ಸಹ ಈ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಲಾಗಿದ್ದು, ಚಿತ್ರಕ್ಕೆ ಇವರೇ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗಿದೆ. ಇವರ ಮ್ಯೂಸಿಕ್ ಸಿನಿಮಾಗೆ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.

ಸೂರ್ಯಗೆ ಕಯಾದು ಲೋಹರ್ ಜೋಡಿ?

ಈ ಬಹುನಿರೀಕ್ಷಿತ ಸಿನಿಮಾದಲ್ಲಿ ನಟ ಸೂರ್ಯ ಅವರಿಗೆ ಜೋಡಿಯಾಗಿ ನಟಿ ಕಯಾದು ಲೋಹರ್ (Kayadu Lohar) ಕಾಣಿಸಿಕೊಳ್ಳಲಿದ್ದಾರೆ ಎಂಬ ಬಲವಾದ ಮಾಹಿತಿ ಗಾಂಧಿನಗರ ಹಾಗೂ ಚೆನ್ನೈ ಫಿಲ್ಮ್ ನಗರ್ ವಲಯದಲ್ಲಿ ಕೇಳಿಬಂದಿದೆ. ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಯಾದು ಅವರು ಸೂರ್ಯ ಜೊತೆ ತೆರೆ ಹಂಚಿಕೊಂಡರೆ ಚಿತ್ರದ ಗ್ಲಾಮರ್ ಹಾಗೂ ತೂಕ ಮತ್ತಷ್ಟು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ವಿಭಿನ್ನ ಭಾಷೆಗಳಲ್ಲಿ ವೈವಿಧ್ಯಮಯ ಮತ್ತು ಕಂಟೆಂಟ್ ಆಧಾರಿತ ಸಿನಿಮಾಗಳನ್ನು ನೀಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್, ಈಗ ಕಾಲಿವುಡ್‌ನ ಶಕ್ತಿಶಾಲಿ ನಟ ಸೂರ್ಯ ಜೊತೆ ಕೈ ಜೋಡಿಸಿರುವುದು ಪ್ರತಿಯೊಬ್ಬ ಸಿನಿರಸಿಕನಿಗೂ ಖುಷಿ ನೀಡಿದೆ. ಈ ಹೊಸ ಕಾಂಬಿನೇಷನ್‌ನ ಅದ್ದೂರಿ ಚಿತ್ರದ ಶೂಟಿಂಗ್ ಯಾವಾಗ ಆರಂಭವಾಗಲಿದೆ ಹಾಗೂ ಚಿತ್ರದ ಶೀರ್ಷಿಕೆ (Title) ಏನು ಎಂಬ ಅಧಿಕೃತ ಅಪ್‌ಡೇಟ್‌ಗಾಗಿ ಸದ್ಯ ಇಡೀ ಭಾರತೀಯ ಚಿತ್ರರಂಗದ ಪ್ರೇಕ್ಷಕರು ಚಾತಕ ಪಕ್ಷಿಯಂತೆ ಕಾತರದಿಂದ ಕಾಯುತ್ತಿದ್ದಾರೆ.

Latest News