Feb 16, 2026 Languages : ಕನ್ನಡ | English

ಬಡವರ ಮಕ್ಳು ಬೆಳಿಬೇಕೆಂದ ಡಾಲಿ ಕನ್ನಡ ಶಾಲೆಗಳ ಬಗ್ಗೆ ಹೇಳಿದ್ದಿಷ್ಟು!! ಗ್ರೇಟ್ ಎಂದ ನೆಟ್ಟಿಗರು

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್ ತಮ್ಮ ಕನ್ನಡಾಭಿಮಾನವನ್ನು ಮೆರೆದಿದ್ದಾರೆ. ಬಾಲ್ಯದ ಗೆಳೆಯರು “ಡಾಲಿ ಧನಂಜಯ್ ಬ್ರಿಗೇಡ್” ಹೆಸರಿನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧನಂಜಯ್, ಕನ್ನಡ ಭಾಷೆ ಮತ್ತು ಬಡವರ ಮಕ್ಕಳ ಶಿಕ್ಷಣದ ಮಹತ್ವವನ್ನು ಸಾರಿದರು.

ನಟ ಡಾಲಿ ಧನಂಜಯ್
ನಟ ಡಾಲಿ ಧನಂಜಯ್

ಡಾಲಿ ಧನಂಜಯ್ ತಮ್ಮ ಖ್ಯಾತಿ ಪಡೆದ “ಬಡವರು ಮಕ್ಕಳು ಬೆಳೀಬೇಕು” ಎಂಬ ಡೈಲಾಗ್‌ನ್ನು ನೆನಪಿಸಿಕೊಂಡು, “ಕನ್ನಡ ಶಾಲೆಗಳು ಯಾವತ್ತೂ ಮುಚ್ಚಬಾರದು. ನಿಮ್ಮೂರಿನ ಕನ್ನಡ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಿ” ಎಂದು ಜನರಿಗೆ ಕರೆ ನೀಡಿದರು. ಅವರು, “ಹಳ್ಳಿಗಳಿಗೂ ಊರಿಗೆ ಬಸ್‌ಗಳು ಬರುತ್ತವೆ, ಮಕ್ಕಳು ಬೇರೆ ಬೇರೆ ಶಾಲೆಗಳಿಗೆ ಹೋಗುತ್ತಾರೆ. ಆದರೆ ಎಲ್ಲ ಪೋಷಕರಿಗೂ ಆರ್ಥಿಕ ಶಕ್ತಿ ಇರುವುದಿಲ್ಲ. ಕನ್ನಡ ಶಾಲೆಯಲ್ಲಿ ಐದು, ಹತ್ತು, ಎರಡು ಅಥವಾ ಒಂದೇ ಮಗು ಇದ್ದರೂ, ಆ ಮಗುವು ಶಿಕ್ಷಣದಿಂದ ವಂಚಿತನಾಗಬಾರದು” ಎಂದು ಹೇಳಿದರು.

ಬಡವರ ಮಕ್ಕಳಿಗೂ ಶಿಕ್ಷಣ ಸಿಗಬೇಕು ಎಂಬ ಸಂದೇಶವನ್ನು ನೀಡಿದ ಧನಂಜಯ್, “ಇಬ್ಬರು ಮಕ್ಕಳಿದ್ದು ಅವರು ಎಜುಕೇಟೆಡ್ ಆದ್ರೆ ಅದು ಕುಟುಂಬಕ್ಕೆ ಆಸ್ತಿ” ಎಂದು ಅಭಿಪ್ರಾಯಪಟ್ಟರು. ತಮ್ಮ ಬಾಲ್ಯದ ಸ್ನೇಹಿತರ ಹೆಸರುಗಳನ್ನು ಉಲ್ಲೇಖಿಸಿ, ಸರಳತೆ ಮತ್ತು ಸ್ನೇಹದ ಮೌಲ್ಯಗಳನ್ನು ಸಾರಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಶಾಸಕ ಶಿವಲಿಂಗೇಗೌಡ ಅವರಿಗೆ ಹಾಗೂ ಧನಂಜಯ್ ಅವರಿಗೆ, ಅವರ ಸ್ನೇಹಿತರು ಅಭಿನಂದನೆ ಸಲ್ಲಿಸಿದರು. ಕನ್ನಡ ಶಾಲೆಗಳ ಉಳಿವಿನ ಕುರಿತು ಧನಂಜಯ್ ನೀಡಿದ ಸಂದೇಶ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದ್ದು, ಕನ್ನಡಾಭಿಮಾನವನ್ನು ಮತ್ತೊಮ್ಮೆ ನೆನಪಿಸಿದೆ. ಈ ಕಾರ್ಯಕ್ರಮವು ಕನ್ನಡ ಭಾಷೆ, ಬಡವರ ಮಕ್ಕಳ ಶಿಕ್ಷಣ ಹಾಗೂ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ಒತ್ತಿ ಹೇಳುವ ವೇದಿಕೆಯಾಯಿತು.

Latest News